ಹುಣಸೂರು: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಮೇಲ್ ಸ್ಟಾಫ್ ನರ್ಸ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ.
ಮೂಲತಃ ಮೈಸೂರು ತಾಲೂಕಿನ ಮಾರಗೌಡನಹಳ್ಳಿ ನಿವಾಸಿ, ಹಾಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಕಚೇರಿ ಉದ್ಯೋಗಿ ಶಿವಣ್ಣರ ಪುತ್ರ ಹನಗೋಡು ಆಸ್ಪತ್ರೆಯ ಸ್ಟಾಫ್ ನರ್ಸ್ ಸುರೇಶ್(30) ಮೃತರು.
ಸೋಮವಾರ ಬೆಳಗ್ಗೆ ಪಿರಿಯಾಪಟ್ಟಣ ತಾಲೂಕು ಇಟ್ಟಗಳ್ಳಿಯ ಪತ್ನಿಯ ಮನೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದ ಸುರೇಶ್ ಮದ್ಯಾಹ್ನ ಹೃದಯ ಸಂಬಂಧಿ ಕಾಯಿಲೆಯುಳ್ಳ ರೋಗಿಯೊಬ್ಬರಿಗೆ ಗ್ಲೂಕೋಸ್ ನೀಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದೆ.
ಸಹೋದ್ಯೋಗಿಗಳಿಗೆ ತಿಳಿಸಿ ಆಸ್ಪತ್ರೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಇದರಿಂದ ವೈದ್ಯರು ಸೇರಿದಂತೆ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಆರೋಗ್ಯ ಇಲಾಖೆಯ ಸೇವೆಗೆ ಸೇರಿದ್ದ ಸುರೇಶ್ ಹನಗೋಡಿನಿಂದಲೇ ಕರ್ತವ್ಯ ಆರಂಭಿಸಿದ್ದರು.
ಆರು ತಿಂಗಳ ಹಿಂದಷ್ಟೆ ವಿವಾಹ: ಸುರೇಶ್ ಕಳೆದ ಆರು ತಿಂಗಳ ಹಿಂದೆಯಷ್ಟೆ ಪಿರಿಯಾಪಟ್ಟಣ ತಾಲೂಕಿನ ಇಟ್ಟಗಳ್ಳಿಯ ಗ್ರಾಪಂ ಮಾಜಿ ಅಧ್ಯಕ್ಷ ಮಹದೇವ್‌ರ ಪುತ್ರಿ ಕಾವ್ಯರನ್ನು ವಿವಾಹವಾಗಿದ್ದರು.
ಈಕೆ ಮೂರು ತಿಂಗಳ ಗರ್ಭಿಣಿಯಾಗಿದ್ದು, ಎರಡೂ ಕುಟುಂಬಗಳಲ್ಲಿ ದುಖಃ ಮಡುಗಟ್ಟಿದೆ. ಆಸ್ಪತ್ರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ದೇವತಾಲಕ್ಷ್ಮೀ ಸೇರಿದಂತೆ ಇಲಾಖೆಯ ಸಹೋದ್ಯೋಗಿಗಳು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವಾನ ಹೇಳಿದರು.