ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಗುರಾಯಿಸಿದ ಎಂಬ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದು ಯುವಕನ ಕೊಲೆಯಿಂದ ಅಂತ್ಯಗೊಂಡಿರುವ ಘಟನೆ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆ ಬಳಿಯಲ್ಲೇ ನಡೆದಿದೆ. ದಾವಣಗೆರೆಯ ಬಸವರಾಜ್ (20) ಮೃತ ಆಟೋರಿಕ್ಷಾ ಚಾಲಕ.
ಗಾಂಧಿನಗರದ ವಿಕಾಸ್, ಅಜ್ಜಯ್ಯ ಇತರೆ ನಾಲ್ವರು ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ಆರೋಪಿಸಲಾಗಿದೆ. ಐಟಿಐ ಮುಗಿಸಿದ್ದ ಬಸವರಾಜ್ ಆಟೋರಿಕ್ಷಾ ಓಡಿಸುತ್ತಿದ್ದ. ನ. 18ರಂದು ಕುವೆಂಪು ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಸವರಾಜ್ ತನ್ನ ಸಹೋದರ ವೀರೇಶ್ ಚೇತನ್ ಕುಮಾರ್, ಗಿರೀಶ್ ಅವರೊಡನೆ ಹೋಗಿದ್ದ.
ಕಾರ್ಯಕ್ರಮ ಮುಗಿಸಿಕೊಂಡು ಹೈಸ್ಕೂಲ್ ಮೈದಾನಕ್ಕೆ ಬಂದು ಐಸ್ ಕ್ರೀಂ ತಿನ್ನುತ್ತಿದ್ದಾಗ ಅಲ್ಲಿಗೆ ಬಂದ ಗಾಂಧಿ ನಗರದ ವಿಕಾಸ್, ಕಾರ್ಯಕ್ರಮದಲ್ಲಿ ನನ್ನನ್ನೇಕೆ ಗುರಾಯಿಸುತ್ತಿದ್ದಿರಿ ಎಂದು ಕೇಳಿದ್ದಾನೆ. ಈ ಬಗ್ಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ಬಸವರಾಜ್‌ನ ಮೊಬೈಲ್ ನಂಬರ್ ಪಡೆದುಕೊಂಡ ವಿಕಾಸ್, ಬುಧವಾರ ರಾತ್ರಿ ಕರೆ ಮಾಡಿದ್ದ. ನಂತರ ಬಸವರಾಜ್ ತನ್ನ ಸಹೋದರ ವೀರೇಶ್ ಜೊತೆಗೆ ಗಾಂಧಿನಗರದಲ್ಲಿನ ವಿಕಾಸ್ ಮನೆಗೆ ಹೋಗಿ, ಮಾತನಾಡಿಕೊಂಡು ಬಂದಿದ್ದ. ಗುರುವಾರ ಬೆಳಗ್ಗೆ 10 ಗಂಟೆಗೆ ಮತ್ತೆ ಕರೆ ಮಾಡಿದ್ದ ವಿಕಾಸ್ ಹೈಸ್ಕೂಲ್ ಮೈದಾನಕ್ಕೆ ಬರುವಂತೆ ಹೇಳಿದ್ದಾನೆ. ಅದರಂತೆ ಬಸವರಾಜ್, ವೀರೇಶ್, ಚೇತನ್ ಕುಮಾರ್ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ವಿಕಾಸ್ ಜೊತೆಗೆ ಅಜ್ಜಯ್ಯ ಮತ್ತು ಇತರೆ ನಾಲ್ವರು ಇದ್ದರು.
ಗಲಾಟೆ ವಿಷಯದ ಬಗ್ಗೆ ಅಲ್ಲಲ್ಲಿ ಮಾತನಾಡುತ್ತಿಯಾ ಎಂದು ಕೇಳಿದ ವಿಕಾಸ್, ಬಸವರಾಜ್‌ನ ಮುಖಕ್ಕೆ ಹೊಡೆದಿದ್ದಾನೆ. ವಿಕಾಸ್ ಹೊಡೆಯುತ್ತಿದ್ದಂತೆ ಬಸವರಾಜ್ ಸಹ ವಿಕಾಸ್‌ಗೆ ಹೊಡೆದಿದ್ದಾನೆ. ಅದನ್ನು ನೋಡಿದ ಅಜ್ಜಯ್ಯ ತನ್ನ ಬಳಿಯಿದ್ದ ಚಾಕುವಿನಿಂದ ಬಸವರಾಜ್‌ನ ಎದೆಗೆ ಚುಚ್ಚಿದ್ದಾನೆ. ಇತರರು ಚೇತನ್‌ಕುಮಾರ್ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ
ಬಸವರಾಜ್‌ನನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ವೈದ್ಯರು ಮೃತರಾಗಿರುವುದಾಗಿ ತಿಳಿಸಿದ್ದಾರೆ.