Advertisement

ಕಲ್ಲಡ್ಕದಲ್ಲಿ  ಚೂರಿ ಇರಿತ; ಉದ್ವಿಗ್ನ  ಸ್ಥಿತಿ

12:21 PM Jun 14, 2017 | Harsha Rao |

ಬಂಟ್ವಾಳ: ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯ ಮೇಲಿನ ಪೇಟೆಯಲ್ಲಿ ಮಂಗಳವಾರ ಸಂಜೆ ಗುಂಪೊಂದು ಇಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಬಳಿಕ ಅಂಗಡಿಗಳಿಗೆ ಕಲ್ಲೆಸೆದು ಹಾನಿ ಮಾಡಿದ್ದು ಕೋಮು ಘರ್ಷಣೆಗೆ ಕಾರಣವಾಗಿದೆ.

Advertisement

ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ರತ್ನಾಕರ ಶೆಟ್ಟಿ ಮತ್ತು ರವಿ ಭಂಡಾರಿ ಗಾಯಗೊಂಡಿದ್ದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಖಲೀಲ್‌ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದುಷ್ಕರ್ಮಿಗಳ ಕಲ್ಲೆಸೆತದಿಂದ ಬಂಟ್ವಾಳ ನಗರ ಠಾಣೆ ಎಸ್‌ಐ ರಕ್ಷಿತ್‌ ತಲೆಗೆ ಗಂಭೀರ ಗಾಯವಾಗಿದೆ. ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ ಸಹಿತ ಹಲವು ಮಂದಿ ಪೊಲೀಸ್‌ ಸಿಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಪೊಲೀಸರಿಗೆ ಪರಿಚಿತರಾಗಿರುವ ವ್ಯಕ್ತಿಗಳೇ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ವಾಹನಗಳಿಗೆ ಹಾನಿ: ಘಟನೆಯ ಸಂದರ್ಭ ಸ್ಥಳೀಯ ಅಂಗಡಿ ಮಾಲಕರು ನಿಲ್ಲಿಸಿ ಹೋಗಿದ್ದ ಹಲವು ದ್ವಿಚಕ್ರ ವಾಹನಗಳಿಗೆ ಹಾನಿ ಮಾಡಿ ಕೆಡವಿ ಹಾಕಲಾಗಿದೆ. ಲಘು ವಾಹನಗಳನ್ನು ಪುಡಿ ಗೈಯಲಾಗಿದೆ. ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿವೆ. ಉದ್ರಿಕ್ತರ ಗುಂಪು ಅಂಗಡಿಗಳಿಗೆ ಕಲ್ಲೆಸೆದು ಹಾನಿ ಮಾಡಿದೆ. ರಾಮ ಮಂದಿರದ ಕಡೆಗೂ ಕಲ್ಲೆಸೆಯಲಾಗಿದೆ ಎನ್ನಲಾಗಿದೆ. ಹೆದ್ದಾರಿಯಲ್ಲಿ ದೊಣ್ಣೆ, ರಾಡ್‌ಗಳನ್ನು ಹಿಡಿದುಕೊಂಡು ಪುಂಡಾಟಿಕೆ ನಡೆಸಿದ ಗುಂಪು ಸಿಕ್ಕಸಿಕ್ಕವರಿಗೆ ಹಲ್ಲೆ ನಡೆಸಿದೆ. ಹಲವು ಮಂದಿ ಕಲ್ಲೆಸೆತದಿಂದ ಗಾಯಗೊಂಡಿದ್ದಾರೆ.

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು ಪೊಲೀಸರ ಎದುರಲ್ಲಿಯೇ ಗುಂಪು ಪುಂಡಾಟಿಕೆ ನಡೆಸುತ್ತಿದ್ದರೂ ನಿಯಂ ತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವ ಜನಿಕರು ದೂರಿದ್ದಾರೆ. ಸ್ಥಳಕ್ಕೆ ವಿಟ್ಲ, ಪುತ್ತೂರು, ಉಪ್ಪಿನಂಗಡಿಯಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಹೆದ್ದಾರಿ ಯಲ್ಲಿ ವಾಹನ ಸಂಚಾರ ಅಡಚಣೆ ಆಗದಂತೆ ಕ್ರಮ ಕೈಗೊಂಡರು.

Advertisement

ಪೂರ್ವಯೋಜಿತ ?
ರತ್ನಾಕರ ಶೆಟ್ಟಿ ಅವರು ಸ್ಥಳೀಯ ಆಸ್ಪತ್ರೆಗೆ ಪುತ್ರನನ್ನು ಕರೆತಂದು ಔಷಧ ಪಡೆದುಕೊಂಡು ಮರಳುತ್ತಿರುವಾಗ ಖಲೀಲ್‌ ಮೀಸೆ ತಿರುವಿಕೊಂಡು ಮಾತನಾಡಿದ್ದು, ಇದೇ ವೇಳೆ ಹಿಂದಿನಿಂದ ಬಂದ ಜುನೈಜ್‌ ಹಲ್ಲೆ ನಡೆಸಿ ಇರಿದಿದ್ದಾನೆ ಎಂದು  ಸಿಸಿ ಕೆಮರಾ ದೃಶ್ಯಗಳನ್ನು ಆಧರಿಸಿ ಹೇಳಲಾಗಿದೆ. ಪೂರ್ವಯೋಜಿತವಾಗಿ ಹಲ್ಲೆ, ಕಲ್ಲೆಸೆತ ನಡೆದಿದೆ ಎನ್ನಲಾಗಿದೆ

ನಿಷೇಧಾಜ್ಞೆ  ಇದ್ದರೂ…
ಕಲ್ಲಡ್ಕದಲ್ಲಿ ಮೇ 26ರಂದು ಚೂರಿ ಇರಿತದ ಘಟನೆಯ ಬಳಿಕ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದು  ಜೂ. 16ರ ತನಕ ಮುಂದುವರಿಸಲಾಗಿತ್ತು. ಇದನ್ನು  ಲೆಕ್ಕಿಸದ ಗುಂಪು ಪೊಲೀಸ್‌ ವಾಹನಕ್ಕೂ  ಕಲ್ಲೆಸೆದು ಹಾನಿ ಮಾಡಿದೆ. ಸೋಮವಾರ ಕನ್ಯಾನದಲ್ಲಿ  ಕೋಮು ಗಲಭೆಯ ಕಾರಣ ಬಹುತೇಕ ಪೊಲೀಸ್‌ ಬಲವನ್ನು  ಅಲ್ಲಿಗೆ ಕಳುಹಿಸಿದ್ದು  ಕಲ್ಲಡ್ಕದಲ್ಲಿ ಬೆರಳೆಣಿಕೆಯ ಪೊಲೀಸರು ಇದ್ದುದರಿಂದ ಪೂರ್ವಯೋಜಿತವಾಗಿ ಕೃತ್ಯ ನಡೆಸಿದ್ದಾಗಿ ಶಂಕೆ ವ್ಯಕ್ತವಾಗಿದೆ.

ಸುಗಮ ಸಂಚಾರಕ್ಕೆ  ಅನುವು
ಪೇಟೆಯಲ್ಲಿ ದಾಂಧಲೆ ನಡೆಸಿದ್ದರಿಂದ ಸಂಜೆ 5.30ರಿಂದ ಸುಮಾರು ಒಂದು ಗಂಟೆ ಸಮಯ ವಾಹನ ಸಂಚಾರ ಸ್ಥಗಿತಗೊಂಡಿತು. ಈ ಸಂದರ್ಭ ಕೆಲವೇ ಪೊಲೀಸರು ಸ್ಥಳದಲ್ಲಿದ್ದುದರಿಂದ ಇತರ ಠಾಣೆಗಳಿಗೆ ಮಾಹಿತಿ ನೀಡಿ ವಾಹನಗಳು ಬಿ.ಸಿ.ರೋಡ್‌ನ‌ಲ್ಲಿ ಬೆಳ್ತಂಗಡಿ ಮಾರ್ಗವಾಗಿ ಹೋಗುವಂತೆ ಮತ್ತು ಶಂಭೂರಿನಲ್ಲಿ ವಯಾ ಬಾಳ್ತಿಲವಾಗಿ ಹೋಗುವಂತೆ ಸೂಚಿಸಲಾಯಿತು. ಈ ಮೂಲಕ ರಾ.ಹೆ. 73ರಲ್ಲಿನ ವಾಹನ ಸಂಚಾರವನ್ನು ನಿಯಂತ್ರಿಸಲಾಯಿತು. ಕಲ್ಲಡ್ಕಕ್ಕಿಂತ ಸುಮಾರು 2 ಕಿ.ಮೀ. ದೂರದಲ್ಲಿಯೇ ವಾಹನಗಳನ್ನು ತಡೆ ಹಿಡಿಯಲಾಯಿತು. ಪೊಲೀಸ್‌ ತಂಡ ಸ್ಥಳಕ್ಕೆ ತಲುಪುತ್ತಿದ್ದಂತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಯಿತು. ಪೊಲೀಸರು ರಸ್ತೆಯ ಎರಡೂ ಬದಿಯಲ್ಲಿ ನಿಂತು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿದರು.

ಸಿಸಿ ಕೆಮರಾದಲ್ಲಿ  ದಾಖಲು?
ಮೇ 26ರ ಘಟನೆಯ ಬಳಿಕ ಪೊಲೀಸರು ನಗರದ 30 ಕಡೆಗಳಲ್ಲಿ ಸುಧಾರಿತ ಸಿಸಿ ಕೆಮರಾಗಳನ್ನು ಅಳವಡಿಸಿದ್ದಾರೆ. ಮಂಗಳ ವಾರ ನಡೆದ ಎಲ್ಲ ಘಟನೆಗಳು ಇದರಲ್ಲಿ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಈ ವೀಡಿಯೊ ಗಳನ್ನು ಪರಿಶೀಲಿಸಿ ದುಷ್ಕರ್ಮಿಗಳನ್ನು ಬಂಧಿಸಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next