ಮಲ್ಪೆ: ಪ್ರವಾಸಿಗರಿಗೆ ಸುರ ಕ್ಷೆಗೆ ಹೆಚ್ಚು ಮಹತ್ವ ನೀಡುವ ನಿಟ್ಟಿನಲ್ಲಿ ಮಲ್ಪೆ ಸೈಂಟ್‌ಮೇರಿಸ್ ಐಲ್ಯಾಂಡ್‌ನಲ್ಲಿ ಸುರ ಕ್ಷೆಯ ಕ್ರಮಗಳನ್ನು ಕೈಗೊಂಡು ಪ್ರವೇಶವನ್ನು ಆರಂಭಗೊಳಿಸಲಾಗಿದೆ. ಮಳೆಗಾಲದ ಸಮಯದಲ್ಲಿ ಸುಮಾರು 5 ತಿಂಗಳುಗಳ ಕಾಲ ಪ್ರವಾಸಿಗರ ಪ್ರವೇಶವನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಅ. 5ರಿಂದ ಜಿಲ್ಲಾಡಳಿತದಿಂದ ದ್ವೀಪ ಪ್ರವೇಶಕ್ಕೆ ಅನುಮತಿ ದೊರಕಿದೆ. ಶಾಲಾ ಕಾಲೇಜಿಗೆ ದಸರಾ ರಜೆಯ ಹಿನ್ನೆಲೆಯಲ್ಲಿ ಐಲ್ಯಾಂಡ್‌ನಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರಿ ಜನಸಂದಣಿ ಕಂಡು ಬಂದಿದೆ.
ಸುರಕ್ಷೆಗೆ ಏನು ಕ್ರಮ ವಹಿಸಿದೆ ?
ದ್ವೀಪದ 5 ಕಡೆ ಅಪಾಯಕಾರಿ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಎಚ್ಚರಿಕೆ ಫಲಕ ಮತ್ತು ಬಾವುಟಗಳನ್ನು ಅಳವಡಿಸಿ ಸೂಚನೆ ನೀಡಲಾಗುತ್ತದೆ. ದ್ವೀಪದ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ 110 ಮೀ. ಉದ್ದ, 100 ಮೀ. ಅಗಲದಲ್ಲಿ ಸ್ವಿಮ್ಮಿಂಗ್ ಝೋನ್ ರಚಿಸಲಾಗಿದ್ದು ಈ ಜಾಗದಲ್ಲೇ ಈಜಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ, ದ್ವೀಪದ ವಿವಿಧ ಭಾಗದಲ್ಲಿ 4 ವಾಚ್ ಟವರ್ ನಿರ್ಮಿಸಿ ಪ್ರವಾಸಿಗರ ಬಗ್ಗೆ ನಿಗಾ ವಹಿಸಲಾಗಿದೆ. ಈಗಾಗಲೇ 3 ಕಡೆಗಳಲ್ಲಿ ಸೆಲ್ಫಿ ಪಾಯಿಂಟ್ ಮಾಡಲಾಗಿದ್ದು, ಮುಂದೆ 4 ಕಡೆ ಹೆಚ್ಚುವರಿ ಪಾಯಿಂಟ್ ನಿರ್ಮಿಸಲಾಗುವುದು. 6 ಕಡೆಗಳಲ್ಲಿ ಸೇಫ್ಟಿ ಜಾಕೆಟ್, ಲೈಫ್‌ಬಾಯ್, ಫ್ಲೋಟ್, ಪ್ರಥಮ ಚಿಕಿತ್ಸಾ ವ್ಯವಸ್ಥೆಯಿದೆ. ಇಲ್ಲಿನ ಸಿಬಂದಿ ಬರುವ ಪ್ರವಾಸಿಗರಿಗೆ ಪ್ರವೇಶ ದ್ವಾರದಲ್ಲಿ 3 ನಿಮಿಷಗಳ ಕಾಲ ಸುರಕ್ಷೆಯ ಬಗ್ಗೆ ನೀಡುವ ಸಂದೇಶ ನೀಡಲಿದ್ದಾರೆ. ಯಾವುದೇ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ 500 ರೂ. ದಂಡವನ್ನು ವಿಧಿಸಲಾಗುತ್ತದೆ.
ಪ್ರವಾಸಿಗರಿಗೆ ಸಿಗುವ ಸೌಲಭ್ಯಗಳು
ದ್ವೀಪದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಸ್ತ್ರ ಬದಲಾವಣೆ ಕೋಣೆಯ ವ್ಯವಸ್ಥೆ ಇದೆ. ತೆಂಗಿನಮರ ಮತ್ತು ಎಲೆಗಳಿಂದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಅಲಂಕರಿಸಲಾಗಿದೆ. ವಿಶ್ರಾಂತಿಗಾಗಿ ಛತ್ರಿ ಕುರ್ಚಿ, ಮತ್ತು ಚಾಪೆ ವ್ಯವಸ್ಥೆ ಇದೆ. ದ್ವೀಪದಲ್ಲಿ 8 ಮಂದಿ ಜೀವರಕ್ಷಕ ಸಿಬಂದಿ, ಇಬ್ಬರು ಹೌಸ್ ಕೀಪರ್, ಇಬ್ಬರು ಸೂಪರ್‌ವೈಸರ್, 6 ಮಂದಿ ಗೈಡ್ ಗಳು, 10 ಮಂದಿ ವಾಟರ್ ನ್ಪೋರ್ಟ್ಸ್, ಸ್ವಚ್ಛತ ಕಾರ್ಯಕ್ಕೆ ಸಿಬಂದಿಗಳನ್ನು ನೇಮಕ ಮಾಡಲಾಗಿದೆ.
ಪ್ಲಾಸ್ಟಿಕ್, ಮದ್ಯಪಾನ ನಿಷೇಧ
ಮಗುವಿನ ಆಹಾರ ಮತ್ತು ಹಿರಿಯರ ಔಷಧಗಳನ್ನು ಹೊರತುಪಡಿಸಿ ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಆಹಾರ ಪದಾರ್ಥ, ಮದ್ಯಪಾನವನ್ನು ನಿರ್ಬಂಧಿಸಲಾಗಿದ್ದು, ಸ್ಟೀಲ್ ಪಾತ್ರೆಗಳಲ್ಲಿ ಆಹಾರ ಸಾಗಿಸಲು ಅನುಮತಿ ನೀಡಲಾಗಿದೆ.
ಜಲಸಾಹಸ ಕ್ರೀಡೆಗಳು
ದ್ವೀಪದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲಾಗಿದೆ. ಝೋರ್ಬಿಂಗ್, ಬಂಪಿ ರೈಡಿಂಗ್, ಬನಾನ ರೈಡ್, ಜೆಟ್‌ಸ್ಕೀ ಈಗಾಗಲೇ ಆರಂಭಿಸಲಾಗಿದೆ. ಪ್ಯಾರಾಸೈಲಿಂಗ್, ಸ್ನೋರ್ಕೆಲ್ಲಿಂಗ್, ಐಲ್ಯಾಂಡ್ ರೌಂಡಿಂಗ್, ಡಾಲ್ಫಿನ್ ಸೈಟ್, ಆಂಗ್ಲಿಂಗ್, ಎಸ್‌ಯುಪಿ, ಕಯಾಕಿಂಗ್, ಕ್ಲಿಪ್‌ಡೈವ್, ಸ್ಕೂಬಾ ಡೈವ್ ಮುಂದಿನ ದಿನದಲ್ಲಿ ಆರಂಭಗೊಳ್ಳಲಿದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಹಣಾಧಿಕಾರಿ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ನಿಯಮ ಉಲ್ಲಂಘನೆಗೆ ದಂಡ ಸುರಕ್ಷೆಯ ದೃಷ್ಟಿಯಿಂದ ಪ್ರವಾಸಿಗರಿಗಾಗಿ ದ್ವೀಪದಲ್ಲಿನ ಕೆಲವೊಂದು ನಿಯಮಗಳು, ಎಚ್ಚರಿಕೆ ಹಾಗೂ ಅಪಾಯದ ಫಲಕಗಳನ್ನು ಅಳವಡಿಸಲಾಗಿದೆ. ಇಲ್ಲಿಗೆ ಬರುವ ಜನರು ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಬಾರದು. ಒಂದು ವೇಳೆ ಉಲ್ಲಂಘನೆಯಾದಲ್ಲಿ 500 ರೂ. ದಂಡವನ್ನು ವಿಧಿಸಲಾಗಿದೆ.-
ಪಾಂಡುರಂಗ ಮಲ್ಪೆ, ಅಧ್ಯಕ್ಷರು, ಬೀಚ್ ಅಭಿವೃದ್ಧಿಸಮಿತಿ