Advertisement
“ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ’ ಧ್ಯೇಯವಾಕ್ಯದ ಮೇಲೆ ನಡೆಯಲಿರುವ ಐದು ದಿನಗಳ ಮಹೋತ್ಸವವು ದಿವ್ಯ ಬಲಿಪೂಜೆಯೊಂದಿಗೆ ಆರಂಭಗೊಂಡಿತು.ಗಣರಾಜ್ಯೋತ್ಸದ ಪ್ರಯುಕ್ತ ದೇಶಕ್ಕಾಗಿ ಹಾಗೂ ಎಲ್ಲ ನಾಗರಿಕರಿಗಾಗಿ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಕೇಂದ್ರದ ಪ್ರಧಾನ ಗುರು ರೆ| ಫಾ| ಜಾರ್ಜ್ ಡಿ’ಸೋಜಾ ಉಪಸ್ಥಿತಿಯಲ್ಲಿ ಪವಿತ್ರ ಪುಷ್ಕರಿಣಿಯ ಬಳಿ ಸಂತ ಲಾರೆನ್ಸರ ಪ್ರತಿಮೆಯನ್ನು ಧರ್ಮಾಧ್ಯಕ್ಷರು ಪ್ರತಿಷ್ಠಾಪಿಸಿದರು.
ಜನಸಂದಣಿ
ಮಹೋತ್ಸವದ ಮೊದಲನೇ ದಿನ ರವಿವಾರವಾದ ಹಿನ್ನೆಲೆಯಲ್ಲಿ ಅತ್ತೂರು ಬಸಿಲಿಕಾದತ್ತ ಜನಸಾಗರವೇ ಹರಿದು ಬಂತು. ರಸ್ತೆಯ ಇಕ್ಕೆಲಗಳು ಕೂಡ ಜನಸಂದಣಿಯಿಂದ ಗಿಜಿಗುಡುತ್ತಿದ್ದವು. ದಿನದ ಎರಡನೇ ಪ್ರಮುಖ ಬಲಿಪೂಜೆಯನ್ನು ಮಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷ ರೆ| ಡಾ| ಅಲೋಶಿಯಸ್ ಡಿ’ಸೋಜಾ ಅವರು ನಡೆಸಿಕೊಟ್ಟರು. ಫಾ| ಸ್ಟೀವನ್ ಲೋಬೊ, ಚೇತನ್ ಲೋಬೊ, ಜೇಸನ್ ಪಾಯ್ಸ ಹಾಗೂ ಮ್ಯಾಕ್ಷಿಮ್ ಡಿ’ಸೋಜಾ, ವಿನ್ಸೆಂಟ್ ಡಿ’ಸೋಜಾ, ರೂಪೇಶ್ ಮಾಡ್ತಾ ಅವರು ಉಪಸ್ಥಿತರಿದ್ದರು. ದಿನದ ಅಂತಿಮ ಬಲಿಪೂಜೆಯನ್ನು ಶಿವಮೊಗ್ಗದ ವಂ| ಗುರು ಸ್ಟ್ಯಾನಿ ಡಿ’ಸೋಜಾ ಅವರು ಕನ್ನಡ ಭಾಷೆಯಲ್ಲಿ ನಡೆಸಿಕೊಟ್ಟರು. ಅಂತಿಮ ಬಲಿಪೂಜೆಯ ಅನಂತರ, ಕಾಸರಗೋಡು ಕೆ.ವಿ. ರಮೇಶ್ ಹಾಗೂ ತಂಡದವರಿಂದ “ಕ್ರಿಸ್ತ ಕಾರುಣ್ಯ ಎಂಬ ಯಕ್ಷಗಾನ ಬೊಂಬೆಯಾಟ ಪ್ರದರ್ಶನಗೊಂಡಿತು.