ಮಣಿಪಾಲ : ಶೈಕ್ಷಣಿಕ ಜೀವನದ ಪ್ರಮುಖ ಹಂತಗಳಲ್ಲಿ ಒಂದಾದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ (625ಕ್ಕೆ 625) ಸಾಧನೆ ಮಾಡಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 20 ವಿದ್ಯಾರ್ಥಿಗಳನ್ನು “ಉದಯವಾಣಿ’ ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
ಮಣಿಪಾಲದ ಗೀತಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ಸಮೂಹ ಸಂಸ್ಥೆಯ ಜಾಗತಿಕ ವಿತ್ತಾಧಿಕಾರಿ (ಗ್ಲೋಬಲ್ ಸಿಎಫ್ಒ) ಅನಿಲ್ ಶಂಕರ್, ಎಂಎಂಎನ್‌ಎಲ್ ಎಂಡಿ ಹಾಗೂ ಸಿಇಒ ವಿನೋದ್ ಕುಮಾರ್ ಗೌರವಿಸಿ, ಪ್ರಮಾಣ ಪತ್ರ ವಿತರಿಸಿದರು.
ಗುರಿ ಸಾಧನೆಗೆ ಸ್ಥಿರ ಮನಸ್ಸಿರಲಿ
ಅನಿಲ್ ಶಂಕರ್ ಅವರು ಮಾತನಾಡಿ, ಎಸೆಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಹಂತ. ಇದು ಆರಂಭವಷ್ಟೇ. ಇಲ್ಲಿಂದ ಮುಂದೆ ಶೈಕ್ಷಣಿಕ ಸ್ಪರ್ಧೆ ಅಥವಾ ಪೂರ್ಣಾಂಕ ತೆಗೆಯುವುದಕ್ಕಿಂತಲೂ ನಾವೇನು ಮಾಡುತ್ತೇವೆ ಎಂಬುದರ ಸ್ಪಷ್ಟತೆ ಇರಬೇಕು. ಗುರಿ ಸಾಧನೆಯ ಕಡೆಗೆ ಮನಸ್ಸನ್ನು ಸ್ಥಿರಗೊಳಿಸಿ ಪ್ರಯತ್ನಶೀಲರಾಗಬೇಕು. ಸಾಧನೆ ಎನ್ನುವುದು ತತ್‌ಕ್ಷಣ ಬರುವಂಥದ್ದಲ್ಲ. ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ ಹಾಗೂ ಅದು ದೀರ್ಘಕಾಲಿಕ ಪ್ರಯತ್ನದ ಫಲವೂ ಸಹ. ನಮ್ಮ ಸಾಧನೆ ಮತ್ತು ಮಾಡುವ ಕೆಲಸದಲ್ಲಿ ಸಂತೃಪ್ತಿ ಕಾಣಬೇಕು ಎಂದು ಸಲಹೆ ನೀಡಿದರು.
Related Articles
ಬೆಟ್ಟದಷ್ಟು ಅವಕಾಶಗಳಿವೆ
ಪೂರ್ಣಾಂಕ ಪಡೆದ ನೀವೆಲ್ಲರೂ ರೈಸಿಂಗ್ ಸ್ಟಾರ್. ವಿದ್ಯಾರ್ಥಿಗಳೇ ನವಭಾರತದ ಪ್ರತಿನಿಧಿಗಳು. ನವ ಭಾರತದಲ್ಲಿ ಎಲ್ಲವೂ ಇದೆ. ಅದರ ಸದುಪಯೋಗಕ್ಕೆ ನಮ್ಮ ಪ್ರಯತ್ನವೂ ಮುಖ್ಯ. ಪ್ರತಿ ಬಾರಿಯೂ ಪೂರ್ಣಾಂಕ ಪಡೆಯಲು ಸಾಧ್ಯವಿಲ್ಲ. ಆದರೆ ಪೂರ್ಣ ಪ್ರಮಾಣದಲ್ಲಿ ಪ್ರಯತ್ನ ಮಾಡಬೇಕು. ನಮ್ಮ ಗುರಿ ಸಾಧನೆಗೆ ತ್ಯಾಗ, ಪರಿಶ್ರಮ ಸದಾ ಇರಬೇಕು. ನೀವು ಮಾಡುವ ಪ್ರತೀ ಕಾರ್ಯದಲ್ಲೂ ಎಕ್ಸಲೆನ್ಸಿ ಇರುವಂತೆ ಗಮನ ಹರಿಸಬೇಕು. ನೀವು ನಿಮ್ಮೊಳಗೆ ಇನ್ನಷ್ಟು ಗಟ್ಟಿಯಾಗಿ ಹೊಸ ಹೆಜ್ಜೆಗುರುತು ಸೃಷ್ಟಿಸಬೇಕು ಎಂದು ವಿನೋದ್ ಕುಮಾರ್ ಶುಭ ಹಾರೈಸಿದರು. ಉದಯವಾಣಿ ಸಂಪಾದಕ ಅರವಿಂದ ನಾವಡ ವಂದಿಸಿದರು. ಉದಯವಾಣಿ ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪ ಸಂಪಾದಕಿ ರಾಧಿಕಾ ಪ್ರಾರ್ಥಿಸಿದರು. ಪೂರ್ಣಾಂಕ ಪಡೆದ ವಿದ್ಯಾರ್ಥಿಗಳ ಪಾಲಕ, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳ ಸಂಬಂಧಿಕರು, ಉದಯವಾಣಿ ಸಿಬಂದಿ ಉಪಸ್ಥಿತರಿದ್ದರು.
ಅಭಿನಂದಿತರು
ಮೂಡುಬಿದಿರೆ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶ್ರೇಯಾ ಶೆಟ್ಟಿ, ಸುದೇಶ್ ದತ್ತಾತ್ರೇಯ, ಕಲ್ಮೇಶ್ವರ್ ಪುಂಡಲೀಕ್, ಇಂದಿರಾ ಅರುಣ್, ಈರಯ್ಯ ಶ್ರೀಶೈಲ, ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸ್ವಸ್ತಿ, ಶ್ರೀಜಾ ಹೆಬ್ಟಾರ್, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಭಿಜ್ಞಾ ಆರ್., ಆತ್ಮೀಯ ಕಶ್ಯಪ್, ಅಭಯ ಶರ್ಮಾ, ಮಲ್ಪೆ ಸ.ಪ.ಪೂ. ಕಾಲೇಜಿನ ಪುನೀತ್ ನಾಯ್ಕ, ಉಡುಪಿ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಗಾಯತ್ರಿ, ಕಾಳಾವರದ ಸರಕಾರಿ ಪ್ರೌಢಶಾಲೆಯ ನಿಶಾ ಜೋಗಿ, ನಾಗೂರಿನ ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ ಅಕ್ಷತಾ ನಾಯ್ಕ, ಸಿದ್ಧಾಪುರದ ಸರಕಾರಿ ಪ್ರೌಢಶಾಲೆಯ ವೈಷ್ಣವಿ ಶೆಟ್ಟಿ ಹಾಗೂ ಉಡುಪಿ ಒಳಕಾಡು ಸರಕಾರಿ ಪ್ರೌಢಶಾಲೆಯ ಕೇದಾರ್ ನಾಯಕ್, ಮೂಲ್ಕಿ ವ್ಯಾಸಮಹರ್ಷಿ ವಿದ್ಯಾಪೀಠದ ಅಕ್ಷತಾ ಕಾಮತ್, ವೀಕ್ಷಾ ಶೆಟ್ಟಿ, ಬೆಳ್ತಂಗಡಿ ಮೊರಾರ್ಜಿ ದೇಸಾಯಿ ಪ್ರೌಢಶಾಲೆಯ ರೋಶನ್ ಪೂಜಾರಿ, ವಿಟ್ಲದ ವಿಟuಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಧನ್ಯಶ್ರೀ ಅವರು ಅಭಿನಂದಿತರಾದವರು.
“ಉದಯವಾಣಿ’ ಸಿಬಂದಿ ಪುತ್ರಿ ಸಾಧನೆಗೆ ಹರ್ಷ
“ಉದಯವಾಣಿ’ ಉಡುಪಿ ಕಚೇರಿಯ ಜಾಹೀರಾತು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ರವಿಪ್ರಕಾಶ್ ಮತ್ತು ಮಾಣಿಲ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಮಮತಾ ದಂಪತಿಯ ಪುತ್ರಿ ವಿಟ್ಲದ ಬಸವನಗುಡಿ ವಿಟuಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಧನ್ಯಶ್ರೀ ಅವರು ಪೂರ್ಣಾಂಕ ಪಡೆದು ಅಭಿನಂದಿತರಾದವರಲ್ಲಿ ಒಬ್ಬರು ಎಂಬುದು ಹರ್ಷದ ಸಂಗತಿ.