Advertisement

ಎಸೆಸೆಲ್ಸಿ ಟಿಪ್ಸ್‌ : ಕನ್ನಡ ಸುಲಭ ಎಂಬ ನಿರ್ಲಕ್ಷ್ಯ ಬೇಡ

11:46 PM Mar 17, 2022 | Team Udayavani |

ಭಾಷಾ ವಿಷಯಗಳಿಗೆ ಬಂದಾಗ ಕನ್ನಡ ಮತ್ತು ಇಂಗ್ಲಿಷ್‌ಗೆ ಮೊದಲ ಆದ್ಯತೆ ಲಭಿಸುತ್ತದೆ. ವಿದ್ಯಾರ್ಥಿಗಳು ಕಲಿಯುತ್ತಿರುವ ಮಾಧ್ಯಮವನ್ನಾಧರಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳ ಆಯ್ಕೆ ಇರುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತವರು ಕನ್ನಡ ಬಲು ಸುಲಭ ಎಂದು ಪರಿಗಣಿಸಿದರೆ ಆಂಗ್ಲ ಮಾಧ್ಯಮದವರಿಗೆ ಕನ್ನಡ ತುಸು ತ್ರಾಸದಾಯಕ ಎಂದೆನಿಸದೇ ಇರದು. ಇವೆರಡೂ ಕಾರಣಗಳಿಂದಾಗಿ ಕನ್ನಡ ಭಾಷಾ ವಿಷಯದ ಬಗೆಗೆ ವಿದ್ಯಾರ್ಥಿಗಳು  ನಿರ್ಲಕ್ಷ್ಯದ ಭಾವನೆ ತಾಳುತ್ತಾರೆ. ಇದು ಸಲ್ಲದು. ಇತ್ತೀಚಿನ ವರ್ಷಗಳಲ್ಲಿ ಭಾಷಾ ವಿಷಯಗಳಲ್ಲೂ ಪೂರ್ಣಾಂಕಗಳನ್ನು ನೀಡಲಾಗುತ್ತಿದೆ. ಕನ್ನಡ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅಧ್ಯಯನದ ವೇಳೆ ಗಮನಹರಿಸಬೇಕಾದ ಮುಖ್ಯ ವಿಚಾರಗಳು, ಪ್ರಶ್ನೆಪತ್ರಿಕೆಯಲ್ಲಿ ಕಾಣಿಸಿಕೊಳ್ಳಬಹುದಾದ ಪ್ರಶ್ನೆಗಳು, ಮತ್ತವುಗಳಿಗೆ ಉತ್ತರಿಸುವ ರೀತಿ…ಇವೆಲ್ಲದರ ಬಗೆಗೆ ಇಲ್ಲಿವೆ ಒಂದಿಷ್ಟು ಕಿವಿಮಾತುಗಳು.

Advertisement

ಕನ್ನಡ ಪರೀಕ್ಷೆಯನ್ನು ಸುಲಭ ವಾಗಿ ಎದುರಿಸಲು ಕೀ ವರ್ಡ್ಸ್‌  :

(ಪ್ರಮುಖ ಅಕ್ಷರ) ಅತೀ ಮುಖ್ಯ ವಾಗುತ್ತದೆ. ಅಕ್ಷರವನ್ನು ಸ್ವತ್ಛ ಹಾಗೂ ಸ್ಪಷ್ಟವಾಗಿ ಬರೆಯ ಬೇಕು. ಪದ್ಯ, ಸಾರಾಂಶ, ಲಘು- ಗುರು ಹಾಕುವುದು ಇತ್ಯಾದಿ ಗಳನ್ನು ಸರಿಯಾಗಿ ಅಭ್ಯಾಸ ಮಾಡಿದಲ್ಲಿ ಸುಲಭವಾಗಿ ಅಂಕ ಪಡೆಯಬಹುದಾಗಿದೆ ಎಂದು ಕನ್ನಡ ವಿಷಯ ತಜ್ಞರೂ ಆಗಿರುವ ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಡಾ| ಕಿಶೋರ್‌ ಕುಮಾರ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಪಾಠದ ಹೆಸರು, ಆ ಪಾಠದಲ್ಲಿ ಬರುವ ಪ್ರಮುಖ ವ್ಯಕ್ತಿ, ವಸ್ತು ಗಳ ಹೆಸರನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಬೇಕು. ಉದಾ: ಶಬರಿ ಪಾಠದಲ್ಲಿ ಮತಂಗ, ಹೂ ಹಣ್ಣು ಇತ್ಯಾದಿ ಕೀ ವರ್ಡ್ಸ್‌  ಆಗಿರುತ್ತದೆ. ಪಾಠದ ಹೆಸರಿನ ಜತೆಗೆ ಲೇಖಕರ ಹೆಸರು ಬರೆದು ನೆನಪಿಟ್ಟುಕೊಳ್ಳಬೇಕು.

ಕವಿ ಪರಿಚಯ :

Advertisement

ಕವಿ ಪರಿಚಯವನ್ನು ಕಂಠಪಾಠ ಮಾಡಬಾರದು. ಕವಿಯ ಪರಿಚ ಯದ ಜತೆಗೆ ಆ ಪಾಠದ ಹೆಸರು ನೆನಪಿಟ್ಟುಕೊಳ್ಳಬೇಕು. ಇದ ರಿಂದ ಸುಲಭವಾಗಿ ಎರಡು ಅಥವಾ ಮೂರು ಅಂಕಗಳನ್ನು ಕವಿ ಪರಿಚ ಯದಲ್ಲಿ ಪಡೆಯಬಹುದು. ಉದಾ: ಪು.ತಿ. ನರಸಿಂಹಾಚಾರ್‌- ಕವಿಯಾಗಿದ್ದು, ಇವರ ಕೃತಿ ಶಬರಿ,  ವಿ.ಕೃ. ಗೋಕಾಕರ ಕೃತಿ ಲಂಡನ್‌ ನಗರ ಇದೊಂದು ಪ್ರವಾಸ ಕಥನ, ಯುದ್ಧ ಪಾಠ ಸಾರಾ ಅಬೂಬಕರ್‌ ಅವರದು ಎಂಬುದು ನೆನಪಿದ್ದರೆ ಸಾಕು. ಇವಿಷ್ಟನ್ನು  ಬರೆದರೂ ಕನಿಷ್ಠ ಎರಡು ಅಂಕಗಳು ಸಿಗಲಿವೆ.

ಷಟ್ಪದಿ : 

ಲಘು, ಗುರು ಹಾಕುವಾಗ ಸ್ವಲ್ಪ ಗಮನ ಹರಿಸಬೇಕಾಗು ತ್ತದೆ. ಒಂದೇ ಸಾಲಿನ ಪದ್ಯ ಕೇಳಿದರೆ ಅದು ಖ್ಯಾತ ಕರ್ನಾಟಕ ವೃತ್ತವೇ ಆಗಿರುತ್ತದೆ. ಎರಡು ಸಾಲಿನ ಪದ್ಯ ಕೇಳಿದರೆ ಅದು ಕಂದ ಪದ್ಯವೇ ಆಗಿರುತ್ತದೆ. ಮೂರು ಸಾಲಿನ ಪದ್ಯ ಕೇಳಿದರೆ ಷಟ್ಪದಿ ಆಗಿರುತ್ತದೆ. ಷಟ್ಪದಿಯಲ್ಲಿ ಎರಡು ಪದ್ಯ ಇದೆ. ಲವ-ಕುಶನ ಕಥೆ ಬಂದರೆ ಅದು ವಾರ್ಧಕ ಷಟ್ಪದಿ, ಕೃಷ್ಣ-ಕರ್ಣರ ಕಥೆ ಬಂದರೆ ಭಾಮಿನಿ ಷಟ್ಪದಿ ಆಗಿರುತ್ತದೆ. ಇವಿಷ್ಟು ನೆನಪಿಟ್ಟುಕೊಂಡರೆ ಲಘು, ಗುರು ಹಾಕುವುದು ಸುಲಭವಾಗುತ್ತದೆ.

ಪ್ಯಾರಗ್ರಾಫ್ :

ಪ್ಯಾರಗ್ರಾಫ್ ಓದಿ ಬರೆಯು ವಾಗ ಕೊಟ್ಟ ಪ್ರಶ್ನೆಯನ್ನು ಚೆನ್ನಾಗಿ ಓದಿಕೊಂಡು ಅದರಲ್ಲಿರು ವುದನ್ನೇ ಉತ್ತರಿಸಬೇಕಾಗುತ್ತದೆ. ಉದಾ: ಯುದ್ಧದ ಬಗ್ಗೆ ಬಂದಿದ್ದರೆ, ಎರಡು ಬಗೆಯ ಯುದ್ಧ ಎನ್ನುವ ಪದ ಎಲ್ಲಿದೆ ಎಂಬುದನ್ನು ಗುರುತಿಸಿಟ್ಟುಕೊಳ್ಳಬೇಕು. ಅದರ ಮೇಲಿನಿಂದ ಕೆಳಗೆ ಬರೆಯಬೇಕಾಗುತ್ತದೆ. ಶಬ್ದವನ್ನು ಸರಿಯಾಗಿ ಅರ್ಥಮಾಡಿಕೊಂಡು, ಎರಡು ಭಾಗ ಮಾಡಿಕೊಂಡು ಪ್ಯಾರಗ್ರಾಫ್ ಬರೆದರೆ ಬಹುತೇಕ ಅಂಕ ಸಿಗುತ್ತದೆ. ಇಲ್ಲಿಯೂ ಕೀ ವರ್ಡ್ಸ್‌ಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ.

ಸಾರಾಂಶ : 

ಪದ್ಯವನ್ನು ಕೊಟ್ಟು ಅದರ ಸಾರಾಂಶ ಬರೆಯಲು ಹೇಳು ತ್ತಾರೆ. ಕೊಟ್ಟಿರುವ ಪದ್ಯವನ್ನೇ ಕವಿ ಹಾಗೂ ಪದ್ಯದ ಹೆಸರು ಸಹಿತ ವಾಗಿ ನೇರವಾಗಿ ಬರೆದುಕೊಂಡು ಹೋದರೂ ಅಂಕ ಸಿಗುತ್ತದೆ. ಸಾರಾಂಶ ಗೊತ್ತಿದ್ದರೆ ಅದನ್ನು ಮೊದಲಿಗೆ ಬರೆಯುವ ಪ್ರಯತ್ನ ಮಾಡಬೇಕು. ಪತ್ರ ಲೇಖನದಲ್ಲೂ ಏನು ಕೇಳಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡು, ಇವರಿಂದ, ಇವರಿಗೆ, ದಿನಾಂಕ, ಸ್ಥಳ ಇಷ್ಟನ್ನು ಸರಿಯಾಗಿ ಬರೆಯಬೇಕು.

ಪ್ರಮುಖ ಪಾಠ, ಪದ್ಯ, ಕಥೆ :

ವಾಘ್ರಗೀತೆ, ಶಬರಿ, ಲಂಡನ್‌ ನಗರ, ವೃಕ್ಷಸಾಕ್ಷಿ, ವೀರಲವ, ಭಾಗ್ಯಶಿಲ್ಪಿಗಳು, ಕೌರವೇಂದ್ರನ ಕೊಂದೆ ನೀನು ಇತ್ಯಾದಿ ಪಾಠ, ಪದ್ಯ ಹಾಗೂ ಸಣ್ಣ ಕಥೆಯ ಜತೆಗೆ ಕವಿ ಪರಿಚಯ ತಿಳಿದುಕೊಳ್ಳಬೇಕು. ಈ ವರ್ಷ ಡಾ| ಜಿ.ಎಸ್‌.ಶಿವರುದ್ರಪ್ಪ ಅವರ ಬಗ್ಗೆ ಪ್ರಶ್ನೆ ಬಂದರೂ ಬರಬಹುದು.

ಅರ್ಥವಾಗುವುದನ್ನೇ  ಚೆನ್ನಾಗಿ ಓದಿ :

ಯಾವ ಅಧ್ಯಾಯ ಸುಲಭ ಇದೆಯೋ ಅದನ್ನೇ ಚೆನ್ನಾಗಿ ಓದಿ ನೆನಪಿಟ್ಟು ಕೊಳ್ಳಬೇಕು. ಯಾವುದು ಕಷ್ಟ ಎಂಬ ಭಾವನೆ ಇದೆಯೋ ಅದರಲ್ಲಿ ಪ್ರಮುಖಾಂಶ ಗಳನ್ನು ಗೊತ್ತುಮಾಡಿ ಕೊಂಡು ಓದಬೇಕು. ಕನ್ನಡದಲ್ಲಿ ಸಣ್ಣ ಸಣ್ಣ ಕಥೆಗಳು ಇರುವುದರಿಂದ ನೆನಪಿಟ್ಟುಕೊಳ್ಳುವುದಕ್ಕೂ ಸುಲಭವಾಗುತ್ತದೆ. ಇನ್ನು ಪರೀಕ್ಷೆ ಸಂದರ್ಭದಲ್ಲಿ ಮೊದಲು ನಿಮಗೆ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಆ ಬಳಿಕ ಒಂದಿಷ್ಟು ಗೊಂದಲದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಿರಿ. ಇನ್ನು ನಿಮಗೆ ಕಷ್ಟದಾಯಕ ಎಂದು ಅನಿಸಿದ ಪ್ರಶ್ನೆಗಳಿಗೆ ನಿಮಗೆ ತಿಳಿದಿರುವುದಷ್ಟನ್ನು ಬರೆಯಿರಿ. ಹೀಗೆ ನಿಗದಿತ ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.

 

-ಡಾ| ಕಿಶೋರ್‌ ಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next