Advertisement

ಎಸ್ಸೆಸ್ಸೆಲ್ಸಿ ಕಳಪೆ ಫಲಿತಾಂಶದ ಆತ್ಮಾವಲೋಕನ ಅಗತ್ಯ: ದೀಪಾ

08:01 AM Jul 26, 2019 | Team Udayavani |

ಧಾರವಾಡ: ಕಳೆದ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ಆಗಿದ್ದು, ಇದಕ್ಕೆ ಕಾರಣವೇನು? ಎಲ್ಲಿ ವಿಫಲರಾಗಿದ್ದೇವೆ? ಎಂಬುದನ್ನು ಅಧಿಕಾರಿಗಳು ಹಾಗೂ ಶಿಕ್ಷಕರು ಅವಲೋಕನ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ವಿದ್ಯಾಗಿರಿಯ ಜೆಎಸ್ಸೆಸ್‌ ಶಿಕ್ಷಣ ಸಂಸ್ಥೆಯ ಉತ್ಸವ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಆದರೆ ಮಾರ್ಗದರ್ಶನದ ಕೊರತೆ ಇರುತ್ತದೆ. ಅವರ ಸಾಮರ್ಥ್ಯ ಆಧರಿಸಿ ತಿಳಿವಳಿಕೆ ನೀಡುವ ಕಾರ್ಯವನ್ನು ನಿರ್ವಹಿಸಿದ್ದೇವೆಯೇ ಎಂದು ಶಿಕ್ಷಕರು ಸ್ವಯಂ ಪರಾಮರ್ಶೆ ಮಾಡಿಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪಿಸುವ, ಬದುಕು ಉಜ್ವಲವಾಗಿಸುವ ಶಿಕ್ಷಕರಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಉತ್ತೀರ್ಣರಾಗಲು ಅಗತ್ಯವಿರುವ ಕನಿಷ್ಠ ಅಂಕ ಗಳಿಕೆಯ ಅಂಚಿನಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಮಾರ್ಗದರ್ಶನ ನೀಡಬೇಕು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಎಲ್ಲ ವಿದ್ಯಾರ್ಥಿಗಳಿಗೂ ಮುಖ್ಯ ಘಟ್ಟವಾಗಿದೆ. ಸರ್ಕಾರದ ಗ್ರೂಪ್‌ ಡಿ ನೌಕರಿ ಸೇರಲು ಎಸ್ಸೆಸ್ಸೆಲ್ಸಿ ಪಾಸಾಗಬೇಕಾದ ಮಾನದಂಡ ನಿಗದಿಯಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಂಡು ಹಳ್ಳಿ, ಪಟ್ಟಣಗಳ ಕಟ್ಟೆ ಸೇರಿ ಹರಟೆ ಹೊಡೆದು ಕಾಲ ಕಳೆಯುತ್ತಿದ್ದಾರೆ. ಇದಕ್ಕೆಲ್ಲ ನಾವೇ ಹೊಣೆಗಾರರು ಎಂಬುದನ್ನು ಅರಿಯಬೇಕು. ಪರೀಕ್ಷೆಗಳಲ್ಲಿ ನಕಲು ಮಾಡಲು ಅವಕಾಶ ಕಲ್ಪಿಸಿ ಉತ್ತೀರ್ಣರನ್ನಾಗಿಸಬಾರದು. ಕಲಿಕೆಗೆ ಬೇಕಾದ ಗಮನ ನೀಡಬೇಕು. ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯು ಎಲ್ಲ ಮಕ್ಕಳ ಪಾಲಿಗೆ ಮಹತ್ವದ ಮೈಲಿಗಲ್ಲು. ಮನಪೂರ್ವಕವಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರೆ ಫಲಿತಾಂಶ ಸುಧಾರಣೆ ಸಾಧ್ಯವಾಗುತ್ತದೆ ಎಂದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಸಹನಿರ್ದೇಶಕ ಪ್ರಸನ್ನಕುಮಾರ, ಉಪನಿರ್ದೇಶಕ ಗಜಾನನ ಮನ್ನಿಕೇರಿ, ಸುರೇಶ ಕುಲಕರ್ಣಿ, ಮಹಾವೀರ ಉಪಾಧ್ಯೆ, ಮನೋಜ ಕರ್ಜಗಿ, ವಿನಾಯಕ ಜೋಷಿ, ಮಂಜುನಾಥ ಡೊಳ್ಳಿನ, ಎಂ.ಎಲ್. ಹಂಚಾಟೆ, ಬಷೀರ್‌ ಅಲಿ, ಎನ್‌.ಕೆ. ಸಾವ್ಕಾರ್‌, ಪ್ರಮೋದ ಮಹಾಲೆ, ಎಸ್‌.ಎಂ. ಹುಡೇದಮನಿ, ಗಿರೀಶ ಪದಕಿ, ಶ್ರೀಶೈಲ ಕರಿಕಟ್ಟಿ, ಜಿ.ಎಂ. ಮಠಪತಿ, ಯು.ಬಿ. ಬಸಾಪುರ, ಎ.ಎ. ಖಾಜಿ ಇದ್ದರು. ಪೂರ್ಣಿಮಾ ಮುಕ್ಕುಂದಿ ನಿರೂಪಿಸಿದರು.

ಇಸ್ರೋ ಅಧ್ಯಕ್ಷ ಕೆ. ಶಿವನ್‌ ಸೇರಿದಂತೆ ಪ್ರಮುಖ ವಿಜ್ಞಾನಿಗಳು ಸರ್ಕಾರಿ ಶಾಲೆಗಳಲ್ಲಿ ಓದಿದ ಪ್ರತಿಭಾವಂತರಾಗಿದ್ದಾರೆ. ಸರ್ಕಾರದ ಶಿಕ್ಷಣ ಸಂಸ್ಥೆಗಳಿಗೆ ಇದು ಹೆಮ್ಮೆಯ ವಿಷಯ. ಈ ಮಾದರಿಯಲ್ಲಿ ನಮ್ಮ ಶಿಕ್ಷಕರು ಕಾರ್ಯ ನಿರ್ವಹಿಸಿ ಧಾರವಾಡ ಜಿಲ್ಲೆಯ ಶೈಕ್ಷಣಿಕ ಹಿರಿಮೆಯನ್ನು ಪುನಃ ಎತ್ತರಕ್ಕೆ ಏರಿಸಬೇಕಾಗಿದೆ. • ದೀಪಾ ಚೋಳನ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next