Advertisement

SSLC Result : ಶೇ. 100 ಅಂಕ ಗಳಿಸಿದ ಅನುಪಮಾ ಹಿರೇಹೊಳಿ ರಾಜ್ಯಕ್ಕೆ ಪ್ರಥಮ

08:11 PM May 08, 2023 | Team Udayavani |

ಸವದತ್ತಿ: ಸಾಧನೆಗೆ ಬಡತನ ಅಡ್ಡಿಯಲ್ಲ. ನಿರಂತರ ಪರಿಶ್ರಮ, ಶ್ರದ್ಧೆ ಹಾಗೂ ದೃಢ ಆತ್ಮವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದೆಂಬುವದಕ್ಕೆ ಇಲ್ಲಿನ ಅಕ್ಕಿ ಓಣಿಯ ಅನುಪಮಾ ಹಿರೇಹೊಳಿ ಸಾಕ್ಷಿಯಾಗಿದ್ದಾಳೆ. ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾಳೆ.

Advertisement

ಬಡ ಕುಟುಂಬದಲ್ಲಿ ಜನಿಸಿದ ಈಕೆ ಎರಡು ವರ್ಷದ ಹಿಂದೆ ಅನಾರೋಗ್ಯದ ಕಾರಣ ತಂದೆ ಶ್ರೀಶೈಲ ಅವರನ್ನು ಕಳೆದುಕೊಂಡಳು. ತಾಯಿ ರಾಜೇಶ್ವರಿ ಮಗಳ ವಿದ್ಯಾಭ್ಯಾಸಕ್ಕೆ ಕೊರತೆಯಾಗದಂತೆ ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಕುಟುಂಬ ನಿರ್ವಹಣೆ ನಡೆಸುತ್ತಿದ್ದಾರೆ. ಮಗಳ ಈ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದ ಅವರು ಧನ್ಯತಾ ಭಾವದಲ್ಲಿದ್ದಾರೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳು ಹಾಗೂ ಗಣ್ಯರು ವಿದ್ಯಾರ್ಥಿನಿಯ ನಿವಾಸಕ್ಕೆ ಭೇಟಿ ನೀಡಿ ಸಿಹಿ ತಿನ್ನಿಸಿ ಅಭಿನಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಧ್ವನಿ ಸಂಘದಿಂದ 10 ಸಾವಿರ ರೂ. ಸಹಾಯಧನ ನೀಡಿ ವಿದ್ಯಾರ್ಥಿಯನ್ನು ಪ್ರೋತ್ಸಾಯಿಸಲಾಯಿತು.

ಇಲ್ಲಿನ ಕುಮಾರೇಶ್ವರ ಶಾಲೆಯಲ್ಲಿ ವ್ಯಾಸಂಗ ಮಾಡಿದ ಈ ವಿದ್ಯಾರ್ಥಿನಿ ಆಂಗ್ಲಭಾಷೆ 125, ಕನ್ನಡ 100, ಹಿಂದಿ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕ ಗಳಿಸಿ ತಾಯಿಯ ಮೊಗದಲ್ಲಿ ಸಂತಸ ಮೂಡಿಸಿದ್ದಾಳೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ಇಲ್ಲಿನ ಅಕ್ಕಿ ಓಣಿಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ. ಶೇ.100 ಅಂಕಗಳೊಂದಿಗೆ ಉತ್ತೀರ್ಣನಾದ ಅನುಪಮಾ ಶ್ರೀಶೈಲ ಹಿರೇಹೊಳಿ ಅವರ ನಿವಾಸಕ್ಕೆ ಅಧಿಕಾರಿಗಳು ಸೇರಿ ಗಣ್ಯರು ಭೇಟಿ ನೀಡಿ ಅಭಿನಂದಿಸಿದ್ದಾರೆ.

ಶಾಲೆಯ ಪ್ರಾರಂಭದ ದಿನದಿಂದಲೇ ಶಿಕ್ಷಕರ ಮಾರ್ಗದರ್ಶನದಂತೆ ಅಭ್ಯಾಸ ಆರಂಭಿಸಿದೆ. ಮನರಂಜನೆಗೆ ಸಮಯ ನೀಡದೇ ಸದಾ ಅಧ್ಯಯನದಲ್ಲಿ ತೊಡಗಿರುತ್ತಿದ್ದೆ. ಮದುವೆ, ಸಮಾರಂಭಗಳಿಂದ ದೂರ ಇದ್ದು, ಪಠ್ಯದ ವಿಷಯಕ್ಕೆ ಸಂಬಂಧಿಸಿದಂತೆ ಮೊಬೈಲ್ ಬಳಸುತ್ತಿದ್ದೆ. ಪರೀಕ್ಷೆಯಲ್ಲಿ ಶೇ 100 ರಷ್ಟು ಅಂಕ ಪಡೆಯುವ ಇಂಗಿತವನ್ನು ಮೊದಲೇ ಶಿಕ್ಷಕರಿಗೆ ತಿಳಿಸಿದ್ದೆ. ಅದರಂತೆ ಅಂಕ ಲಭಿಸಿದ್ದು ಖುಷಿ ತಂದಿದೆ. ಮುಂದೆ ಉನ್ನತ ವ್ಯಾಸಂಗ ಕೈಗೊಂಡು ಭವಿಷ್ಯದಲ್ಲಿ ಐಎಎಸ್ ಅಧಿಕಾರಿ ಆಗುವ ಕನಸು ನನಗಿದೆ ಎಂದು ಮನದಾಳದ ಮಾತುಗಳನ್ನು ‘ಉದಯವಾಣಿ’ಯೊಂದಿಗೆ ಅನುಪಮಾ ಹಂಚಿಕೊಂಡಿದ್ದಾಳೆ.

Advertisement

ಪುಸ್ತಗಳನ್ನೇ ಪ್ರಪಂಚವಾಗಿಸಿಕೊಂಡ ಅನುಪಮಾ ಸದಾ ಓದಿನಲ್ಲಿ ಕಾಲ ಕಳೆಯುತ್ತದ್ದಳು. ಶಾಲೆಯಲ್ಲೂ ಓದು, ಮನೆಯಲ್ಲೂ ಓದು, ಆಟವಾಡುವಾಗಲೂ ಓದು ಹೀಗೆ ಓದೇ ಅವಳ ದಿನಚರಿಯಾಗಿತ್ತು. ಮಗಳ ಓದಿಗೆ ತೊಂದರೆ ಕೊಡಬಾರದೆಂದು ಅವಳ ಪಾಡಿಗೆ ಬಿಟ್ಟು, ಇತರೆ ಕೆಲಸದಲ್ಲಿ ನಾವು ತೊಡಗಿಕೊಳ್ಳುತ್ತಿದ್ದೇವು. ಆದರೆ 2021 ರಲ್ಲಿ ನನ್ನ ಪತಿ ಅನಾರೋಗ್ಯದ ಕಾರಣ ನಿಧನ ಹೊಂದಿದರು. ಅಲ್ಲಿಂದ ಕುಟುಂಬ ನಿರ್ವಹಣೆ ಕಷ್ಟಕರವಾಯಿತು. ಹೀಗಾಗಿ ಜೋಶಿ ಫೌಂಡೇಷನ್ ಕೆಲಸ ಮಾಡುತ್ತಾ ಮನೆಯ ಜವಾಬ್ದಾರಿಯನ್ನು ಅಲ್ಪ ಸಲ್ಪ ನಿಭಾಯಿಸುತ್ತಾ ಬಂದಿದ್ದೇನೆ. ಇದೀಗ ಮಗಳ ಈ ಸಾಧನೆ ಅತೀವ ಸಂತೋಷವನ್ನುಂಟು ಮಾಡಿದೆ. ಬರುವ ಸಂಬಳ ಕುಟುಂಬ ನಿರ್ವಹಣೆಗೆ ಸಾಲದು. ಮಗಳು ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದಾಳೆ. ನನಗೆ ಎಷ್ಟೇ ಕಷ್ಟಗಳೂ ಬಂದರೂ ಅವಳ ಓದಿಗೆ ಕೊರತೆಯಾಗದಂತೆ ನೋಡಿಕೊಳ್ಳತ್ತೇನೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಸಹಾಯದ ಅಗತ್ಯವಿದೆ ಎಂದು ವಿದ್ಯಾರ್ಥಿನಿಯ ತಾಯಿ ರಾಜೇಶ್ವರಿ ಹೀರೆಹೊಳಿ ಹೇಳಿಕೊಂಡಿದ್ದಾರೆ.

-ಡಿ.ಎಸ್. ಕೊಪ್ಪದ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next