ಉಡುಪಿ: ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಫಲಿತಾಂಶ ಉನ್ನತೀಕರಿಸಿಕೊಳ್ಳಲು ಸಿದ್ಧತೆಯೂ ಅಷ್ಟೇ ವ್ಯವಸ್ಥಿತವಾಗಿ ನಡೆಯುತ್ತಿದೆ. ಉಡುಪಿ ಜಿಲ್ಲೆಯ ವಾರಕ್ಕೊಮ್ಮೆ ತರಗತಿಯಲ್ಲಿ ಪಠ್ಯಾಧಾರಿತ ರಸಪ್ರಶ್ನೆ ಆಯೋಜಿಸುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಎಸೆಸೆಲ್ಸಿ ವಿದ್ಯಾರ್ಥಿಗಳು ವಾರಪೂರ್ತಿ ಕಲಿತ ಪಾಠವನ್ನು ಪರೀಕ್ಷೆಯಲ್ಲಿ ಸುಲಭವಾಗಿ ನೆನಪಿಟ್ಟುಕೊಳ್ಳಲು ಅನುಕೂಲ ವಾಗುವಂತೆ ಆಯಾ ವಾರದ ಅಂತ್ಯದಲ್ಲಿ ಪಠ್ಯಾಧಾರಿತವಾದ ರಸಪ್ರಶ್ನೆಗಳನ್ನು ವಿಷಯ ಶಿಕ್ಷಕರು ಸಿದ್ಧಪಡಿಸಿ, ಮಕ್ಕಳಿಗೆ ಕೇಳುತ್ತಾರೆ. ಈ ಮೂಲಕ ವಿಷಯವನ್ನು ಸುಲಭವಾಗಿ ಅರ್ಥೈಸಲು ಕ್ರಮ ಕೈಗೊಳ್ಳಲಾಗಿದೆ.
ಮನೆ ಮನೆ ಭೇಟಿ
ಪ್ರತೀ ವರ್ಷ ಶಾಲಾ ಶಿಕ್ಷಕರು ಮತ್ತು ಮುಖ್ಯಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆ ಭೇಟಿ ಮಾಡುತ್ತಿದ್ದರು. ಈ ಬಾರಿ ಅದರ ಮುಂದುವರಿದ ಭಾಗವಾಗಿ ಡಿಡಿಪಿಐ ಸಹಿತವಾಗಿ ಬಿಇಒ, ಸಿಆರ್‌ಪಿ, ಬಿಆರ್‌ಪಿ ಸಹಿತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಮಾಡಲಿದ್ದಾರೆ. ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳ ಮಾಹಿತಿ ನೀಡುವ ಜತೆಗೆ ಪಾಲಕ, ಪೋಷಕರು ಪರೀಕ್ಷೆ ಸಂದರ್ಭದಲ್ಲಿ ಹೇಗಿರಬೇಕು ಎಂಬುದರ ಮಾಹಿತಿ ನೀಡಲಿದ್ದಾರೆ.
ವಿಶೇಷ ಬೋಧನೆ
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಮಧ್ಯದಲ್ಲಿ ಒಂದು ಅಥವಾ ಎರಡು ದಿನ ರಜೆ ಇರುತ್ತದೆ. ಈ ರಜಾ ದಿನಗಳನ್ನು ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಆ ದಿನದಂದು ಶಾಲೆಗೆ ವಿದ್ಯಾರ್ಥಿಗಳನ್ನು ಕರೆಸಿ, ಬೆಳಗ್ಗಿನಿಂದ ಸಂಜೆಯ ವರೆಗೂ ಆಯಾ ವಿಷಯ ಶಿಕ್ಷಕರ ಮೂಲಕ ಪರೀಕ್ಷೆಗೆ ಸಂಬಂಧಿಸಿದ ಅಂತಿಮ ಹಂತದ ಪುನರ್ ಮನನ ಮಾಡಲಿದ್ದಾರೆ. ಮಕ್ಕಳಿಗೆ ಮಧ್ಯಾಹ್ನದ ಊಟವೂ ಶಾಲೆಯಲ್ಲೆ ವ್ಯವಸ್ಥೆಯಾಗಲಿದೆ. ಜಿಲ್ಲೆಯ ಮಟ್ಟಿಗೆ ಇದೊಂದು ವಿಶೇಷ ಪ್ರಯತ್ನವೂ ಆಗಲಿದೆ.
Related Articles
ತಾಯಂದಿರ ಸಭೆ
ಮಕ್ಕಳ ವಿದ್ಯಾಭ್ಯಾಸದ ಪೂರ್ಣ ಮಾಹಿತಿಯನ್ನು ತಾಯಿಗೆ ನೀಡಬೇಕು ಮತ್ತು ಪರೀಕ್ಷಾ ಸಂದರ್ಭದಲ್ಲಿ ಮಕ್ಕಳು ಯಾವ ರೀತಿ ಅಧ್ಯಯನ ಮಾಡಬೇಕು, ಮನೆಯವರ ಸಹಕಾರ ಹೇಗಿರಬೇಕು ಎಂಬುದನ್ನು ತಿಳಿಸಲು ಪ್ರತಿ ಪ್ರೌಢಶಾಲೆಯನ್ನು ತಿಂಗಳ ಕೊನೆಯಲ್ಲಿ ಮಕ್ಕಳ ತಾಯಂದಿರ ವಿಶೇಷ ಸಭೆ ನಡೆಸಲಾಗುತ್ತದೆ.
ಅಣಕು ಪರೀಕ್ಷೆ
ವಾರ್ಷಿಕ ಪರೀಕ್ಷೆಗೂ ಪೂರ್ವದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಇದರ ಮಧ್ಯದಲ್ಲೇ ಜಿಲ್ಲೆಯಲ್ಲೊಂದು ಮೊಕ್ ಟೆಸ್ಟ್(ಅಣಕು ಪರೀಕ್ಷೆ) ನಡೆಸಲು ಇಲಾಖೆಯಿಂದ ಯೋಚನೆ ನಡೆಯುತ್ತಿದೆ. ವಾರ್ಷಿಕ ಪರೀಕ್ಷೆಯ ಮಾದರಿಯಲ್ಲೇ ಇದನ್ನು ನಡೆಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ದೂರಮಾಡುವುದು ಇದರ ಉದ್ದೇಶವಾಗಿದೆ.
ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಈ ಹಿಂದಿನ ವರ್ಷಗಳಲ್ಲಿ ತೆಗೆದುಕೊಂಡಿರುವ ಉತ್ತಮ ವಿಧಾನಗಳನ್ನು ಈ ವರ್ಷವೂ ಮುಂದುರಿಸುವ ಜತೆಗೆ ಕೆಲವೊಂದು ಹೊಸ ಉಪಕ್ರಮಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ. ತರಗತಿಯಲ್ಲಿ ವಿದ್ಯಾರ್ಥಿಗಳ ಗುಂಪು ರಚನೆ, ಕಲಿಕೆಯ ಆಧಾರದಲ್ಲಿ ವಿಶೇಷ ಆದ್ಯತೆ ನೀಡುವುದು, ವಿಶೇಷ ತರಗತಿ ಇತ್ಯಾದಿಗಳು ನಿರಂತರವಾಗಿ ನಡೆಯುತ್ತಿರುತ್ತವೆ.
– ಕೆ. ಗಣಪತಿ, ಸುಧಾಕರ್, ಡಿಡಿಪಿಐ, ಉಡುಪಿ ಮತ್ತು ದ.ಕ.
– ರಾಜು ಖಾರ್ವಿ ಕೊಡೇರಿ