Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ತರಬೇತಿ ಜೋರು

10:54 AM Mar 03, 2020 | Suhan S |

ಧಾರವಾಡ: ಶಿಕ್ಷಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಧಾರವಾಡ ಜಿಲ್ಲೆ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಡಿದ ಕಳಪೆ ಸಾಧನೆಯಿಂದ ಹೊರಗೆ ಬಂದು, ಈ ವರ್ಷ ಕನಿಷ್ಠ ಮೊದಲ ಹತ್ತು ಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕೆ ಶತ ಪ್ರಯತ್ನ ಮಾಡುತ್ತಿದೆ. ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಕಳೆದ ಎಂಟು ತಿಂಗಳ ಹಿಂದೆಯೇ ಈ ಬಗ್ಗೆ ಬರೋಬ್ಬರಿ ಯೋಜನೆ ರೂಪಿಸಿ ಕಾರ್ಯಾರಂಭ ಮಾಡಿದ್ದು, ಈಗಾಗಲೇ 85 ಸಾವಿರಕ್ಕೂ ಅಧಿಕ ಕಳಪೆ ಸಾಧನೆ ವಿದ್ಯಾರ್ಥಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪರೀಕ್ಷೆ ಪಾಸು ಮಾಡುವುದಕ್ಕೆ ಸಿದ್ಧಗೊಳಿಸುವಲ್ಲಿ ಯಶಸ್ವಿಯಾಗಿವೆ.

Advertisement

ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪಟ್ಟಿ ಮಾಡಿ ಅವರನ್ನು ಕನಿಷ್ಠ ಪಾಸು ಮಾಡುವ ಮತ್ತು ಹೆಚ್ಚಿನ ಅಂಕ ಪಡೆದುಕೊಳ್ಳುವ ಮಟ್ಟಕ್ಕೆ ತಂದು ನಿಲ್ಲಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದಕ್ಕಾಗಿ ವಿಶೇಷ ತರಗತಿ ಮತ್ತು ತರಬೇತಿಗಳನ್ನು ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿಯೂ ನಡೆಸಿದ್ದು, ಇದೀಗ ಜಿಲ್ಲಾ ಶಿಕ್ಷಣ ಇಲಾಖೆ ಕೊಂಚ ಆತ್ಮವಿಶ್ವಾಸದೊಂದಿಗೆ ಪರೀಕ್ಷೆಗೆ ಸಜ್ಜಾಗುತ್ತಿದೆ. ಸ್ಪೇಶಲ್‌ ಪಾಸಿಂಗ್‌ ಪ್ಯಾಕೇಜ್‌: ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪಟ್ಟಿಯಲ್ಲಿ 28ನೇ ಸ್ಥಾನಕ್ಕೆ ಕುಸಿದು ಹೋಗಿದ್ದರಿಂದ ಜಿಲ್ಲೆಗೆ ತೀವ್ರ ಮುಜುಗರ ಉಂಟಾಗಿತ್ತು. ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲೆಯ ಪ್ರಜ್ಞಾವಂತ ಜನಪ್ರತಿನಿಧಿಗಳು ಒಟ್ಟಿಗೆ ಸೇರಿ ಈ ಬಗ್ಗೆ ಚಿಂತನೆ ನಡೆಸಿ ಮುಂದಿನ ವರ್ಷ ಇದನ್ನು ಸುಧಾರಿಸಲೇಬೇಕೆಂದು ಪ್ರಯತ್ನ ಮಾಡಿದ್ದಾರೆ.

ಕಡಿಮೆ ಅಂಕಗಳಿರುವ ಶಾಲೆಗಳಿಗೆ ಮೊದಲು ನೋಟಿಸ್‌ ನೀಡಿ ಅವರ ಗಮನ ಸೆಳೆದು ಹೆಚ್ಚಿನ ವ್ಯಾಸಂಗಕ್ಕೆ ಒತ್ತು ನೀಡುವಂತೆ ಮಾಡಲಾಗಿದೆ. ಶೇ. 40ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಸಭೆ ನಡೆಸಿ ಅವರ ಶಾಲೆ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಮತ್ತು ತರಗತಿ ನಡೆಸಲಾಗಿದೆ. ಇನ್ನು ಬ್ರಿಡ್ಜ್ ಕೋರ್ಸ್‌ಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಗಳಿಕೆಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗಿದೆ.

ಶಾಲೆಗಳಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಫೇಲ್‌ ಆಗದಂತೆ ಎಚ್ಚರಿಕೆ ವಹಿಸುವುದಕ್ಕಾಗಿ ತೀವ್ರ ನಿಗಾ ವಹಿಸಲಾಗಿದೆ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಸಿಂಗ್‌ ಪ್ಯಾಕೇಜ್‌ ಮಾಡಲಾಗಿದೆ. ಈ ಪ್ಯಾಕೇಜ್‌ ಪ್ರಕಾರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದೊಂದು ವಿಷಯದ ಮೇಲೆ ಒಂದೊಂದು ಗಂಟೆ ವಿಶೇಷ ತರಗತಿ ಮತ್ತು ಬೋಧನೆ ಮಾಡಲಾಗುತ್ತಿದೆ. ಇದರ ಅನ್ವಯ ಪ್ರತಿ ವಿದ್ಯಾರ್ಥಿ ಕನಿಷ್ಠ ಪಾಸಾಗುವುದಕ್ಕೆ ಅಗತ್ಯವಾದ 28 ಅಂಕಗಳನ್ನು ಪಡೆದುಕೊಳ್ಳಲೇಬೇಕು.

ಕಬ್ಬಿಣದ ಕಡಲೆಗೆ ಒತ್ತು : ಜಿಲ್ಲೆಯ ವಿದ್ಯಾರ್ಥಿಗಳು ಕಳೆದ ವರ್ಷ ಹೆಚ್ಚು ಸಂಖ್ಯೆಯಲ್ಲಿ ಅನುತ್ತೀರ್ಣರಾಗಲು ಕಾರಣವಾಗಿದ್ದು ಗಣಿತ, ಇಂಗ್ಲಿಷ್‌ ಕಳಪೆ ಸಾಧನೆ. ಹೀಗಾಗಿ ಈ ವರ್ಷ ಗಣಿತ, ಇಂಗ್ಲಿಷ್‌, ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳು ಸರಾಗವಾಗಿ ಪಾಸಾಗುವಂತೆ ಮಾಡಲು ತಂತ್ರಾಧಾರಿತ ತರಬೇತಿ ನೀಡಲಾಗಿದೆ. ಇಲ್ಲಿ ಚಿತ್ರಗಳನ್ನು ಬರೆದರೆ 16 ಅಂಕ ಪಡೆಯುವ ಅವಕಾಶವಿದೆ. 70 ಸಾವಿರ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಚಿತ್ರಗಳ ವಿಶೇಷ ಚಾರ್ಟ್‌ಗಳನ್ನು ಮುದ್ರಿಸಿ ನೀಡಲಾಗಿದೆ. ಇದಕ್ಕೆ ಸಂಸದ ಪ್ರಹ್ಲಾದ

Advertisement

ಜೋಶಿ ಅವರು ಕೈ ಜೋಡಿಸಿದ್ದು, ಚಾರ್ಟ್‌ಗಳನ್ನು ಮಾಡಿಕೊಡಲು ಹಣಕಾಸಿನ ನೆರವು ನೀಡಿದ್ದಾರೆ. ಇನ್ನು ಬಿಡಿಸ ಲಾಗದ ಸಮಸ್ಯೆಗಳು ಮಕ್ಕಳನ್ನು ಕಾಡುತ್ತಿದ್ದರೆ, ಅಂತಹ ಮಕ್ಕಳಿಗೆ ಧಾರವಾಡ ಅಂಬೇಡ್ಕರ್‌ ಭವನ ಸೇರಿದಂತೆ ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಪ್ರತಿ ಸೋಮವಾರ ವಿಶೇಷ ವರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಮಕ್ಕಳು ತಮ್ಮ ಸಮಸ್ಯೆಗಳನ್ನು ಲೀಲಾಜಾಲವಾಗಿ ಕೇಳಿ ಪರಿಹರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಭಯ ನಿವಾರಣೆಗೆ ಆದ್ಯತೆ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯವೇ ದೊಡ್ಡ ಸವಾಲಾಗಿ ನಿಂತಿದೆ. ಇದನ್ನು ಹೋಗಲಾಡಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ಕಳೆದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮಕ್ಕಳಿಗೆ ತೋರಿಸುವುದು, ಸರಳ ಪ್ರಶ್ನೆಗಳಿರುವ ಪ್ರಶ್ನೆಪತ್ರಿಕೆಗಳನ್ನು ಕೊಟ್ಟು ಮನೆಯಲ್ಲಿ ಉತ್ತರ ಬರೆದುಕೊಂಡು ಬರುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. 90 ಶೇ. ಅಂಕ ಪಡೆದ ಮಕ್ಕಳಿದ್ದರೂ ಅವರು ಶೇ.100 ಅಂಕ ಪಡೆಯುವುದಕ್ಕೆ ಅಗತ್ಯವಾದ ಕೀ ಪೇಪರ್‌ಗಳನ್ನು ತೋರಿಸಿ ತರಬೇತಿ ನೀಡಲಾಗಿದೆ. ಮಕ್ಕಳ ಮನೆಗೆ ಪ್ರಶ್ನೆಪತ್ರಿಕೆ ಕೊಟ್ಟು ಅವರು ಕೇಳಿ ಬರೆದುಕೊಂಡು ಬರಬೇಕು. ಕೊನೆಗೆ ಪುಸ್ತಕ ನೋಡಿಯಾದರೂ ಸರಿ ಅವರು ಉತ್ತರ ಬರೆಯಬೇಕು. ಅವರಲ್ಲಿನ ಭಯ ನಿವಾರಣೆಯಾಗುತ್ತದೆ. ನಂತರ ಅವರಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ.

ಈ ವರ್ಷ ಖಂಡಿತವಾಗಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮಕ್ಕಳು ಉತ್ತಮ ಸಾಧನೆ ಮಾಡುತ್ತಾರೆ. ಅದಕ್ಕೆ ಪೂರ್ವಭಾವಿಯಾಗಿ ನಾವು ಕಳೆದ ಎಂಟು ತಿಂಗಳಿನಿಂದ ವಿಭಿನ್ನ ಕಾರ್ಯಯೋಜನೆಗಳ ಮೂಲಕ ಮಕ್ಕಳನ್ನು ಸಜ್ಜುಗೊಳಿಸಿದ್ದೇವೆ. -ಮೋಹನಕುಮಾರ್‌ ಹಂಚಾಟೆ, ಡಿಡಿಪಿಐ

 

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next