Advertisement
ಇನ್ನುಳಿದಂತೆ ಶೇ. 25.31ರಷ್ಟು ಎ ಗ್ರೇಡ್ (ಶೇ. 80ರಿಂದ 89 ಅಂಕ), ಶೇ.24.06 ರಷ್ಟು ಬಿ ಪ್ಲಸ್ ಗ್ರೇಡ್ (ಶೇ.70ರಿಂದ 79 ಅಂಕ), ಶೇ.19.95ರಷ್ಟು ವಿದ್ಯಾರ್ಥಿಗಳು ಬಿ ಗ್ರೇಡ್ (ಶೇ.60ರಿಂದ 69ಅಂಕ), ಶೇ.12.17ರಷ್ಟು ವಿದ್ಯಾರ್ಥಿಗಳು ಸಿ ಪ್ಲಸ್ ಗ್ರೇಡ್ (ಶೇ.50ರಿಂದ 59 ಅಂಕ) ಹಾಗೂ ಶೇ.2.03ರಷ್ಟು ಮಕ್ಕಳು ಸಿ ಗ್ರೇಡ್ (ಶೇ.35ರಿಂದ49)ನಲ್ಲಿ ಉತ್ತೀರ್ಣರಾಗಿದ್ದಾರೆ.
Related Articles
Advertisement
32 ಜಿಲ್ಲೆಗಳಿಗೆ ಎ’ ಶ್ರೇಣಿ ಫಲಿತಾಂಶ :
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 32 ಜಿಲ್ಲೆಗಳು ಎ’ ಶ್ರೇಣಿ (ಶೇ.75ರಿಂದ100 ಫಲಿತಾಂಶ) ಪಡೆದಿವೆ. 2 ಜಿಲ್ಲೆಗಳು ಬಿ’ ಶ್ರೇಣಿ (ಶೇ.60ರಿಂದ 75 ಫಲಿತಾಂಶ) ಪಡೆದಿವೆ. ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಉತ್ತರ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿಕ್ಕೋಡಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಮಧುಗಿರಿ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ಶಿರಸಿ, ತುಮಕೂರು, ಉಡುಪಿ, ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳು ಎ ಶ್ರೇಣಿ ಪಡೆದಿವೆ. ಬೆಂಗಳೂರು ದಕ್ಷಿಣ ಮತ್ತು ಯಾದಗಿರಿ ಜಿಲ್ಲೆಗಳು ಬಿ ಶ್ರೇಣಿ ಪಡೆದಿವೆ.
ಜೂ. 27ರಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ :
ಎಸೆಸೆಲ್ಸಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಜೂ.27ರಿಂದ ಜು.4ರ ವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆಗೆ ಇಂದಿನಿಂದ ಮೇ 30 ರವರೆಗೆ ನೋಂದಣಿ ಮಾಡಿಕೊಳ್ಳಲು ಸಮಯಾವ ಕಾಶ ಕಲ್ಪಿಸಿದೆ. ಒಂದು ವಿಷಯಕ್ಕೆ 370 ರೂ. ಎರಡು ವಿಷಯಕ್ಕೆ 461 ರೂ., ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 620 ರೂ. ನಿಗದಿಪಡಿಸಿದೆ. ಪೂರಕ ಪರೀಕ್ಷೆಯ ನೋಂದಣಿ ಇತ್ಯಾದಿ ವಿಷಯಗಳ ಕುರಿತು ಯಾವುದೇ ಮಾಹಿತಿ ಪಡೆಯಲು 080-23310075/76 ಇದಕ್ಕೆ ಕರೆ ಮಾಡಬಹುದು.
ಇಂದಿನಿಂದ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಕೆ :
ಉತ್ತರ ಪತ್ರಿಕೆಯ ಸ್ಕ್ಯಾನ್‌ಪ್ರತಿ, ಮರು ಎಣಿಕೆ, ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಮೇ 30ರ ವರೆಗೆ ಅವಕಾಶವಿದೆ. ಶುಲ್ಕ ಪಾವತಿಸಲು ಮೇ 31 ಕೊನೆಯ ದಿನ. ಉತ್ತರ ಪತ್ರಿಕೆಗಳ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 24ರಿಂದ ಜೂ.6ರ ವರೆಗೆ ಅವಕಾಶ ಕಲ್ಪಿಸಿದೆ. ಶುಲ್ಕ ಪಾವತಿಗೆ ಜೂ.7 ಕೊನೆಯ ದಿನ. ಸ್ಕ್ಯಾನ್ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ಸ್ಕ್ಯಾನ್ ಪ್ರತಿ ಒಂದಕ್ಕೆ 410 ರೂ., ಮರು ಮೌಲ್ಯಮಾಪನಕ್ಕೆ 810 ರೂ. ಶುಲ್ಕ ನಿಗದಿ ಪಡಿಸಿದೆ. ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಮಂಡಳಿಯ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಉತ್ತರ ಪತ್ರಿಕೆಗಳನ್ನು ಅಪ್‌ಲೋಡ್ ಮಾಡಿದ ಮಾಹಿತಿಯನ್ನು ವಿದ್ಯಾರ್ಥಿಗಳು ಅರ್ಜಿಯಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ರವಾನಿಸಲಿದೆ. ಈ ಮಾಹಿತಿ ಸ್ವೀಕೃತವಾದ ಅನಂತರ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯನ್ನು www.sslc.karnataka.gov.in ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
ತಂದೆ-ಮಗ ಉತ್ತೀರ್ಣ :
ಕಂಪ್ಲಿ: ದೇವಲಾಪುರ ಗ್ರಾಮದಲ್ಲಿ ಹತ್ತನೇ ತರಗತಿ ಓದುತ್ತಿರುವ ಮಗನ ಜತೆಗೆ ತಂದೆಯೂ ಹತ್ತನೇ ತರಗತಿ ಪರೀಕ್ಷೆ ಬರೆದು ಏಕಕಾಲದಲ್ಲಿ ಇಬ್ಬರೂ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ. ದೇವಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಗೌಡ್ರು ಭರತ್ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ತಂದೆ ಗೌಡ್ರು ಷಣ್ಮುಖಪ್ಪ ಇದೇ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿ ಗೌಡ್ರು ಭರತ್ 500 ಅಂಕ ಪಡೆದು ಉತ್ತೀರ್ಣರಾಗಿದ್ದರೆ, ತಂದೆ ಗೌಡ್ರು ಷಣ್ಮುಖಪ್ಪ 307 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಸಹಾಯವಾಣಿ ಆರಂಭ :
ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾದರೆ ಅಥವಾ ಇನ್ನೂ ಹೆಚ್ಚಿನ ಅಂಕಗಳು ಬರಬೇಕು ಎಂಬ ಅನುಮಾನಗಳಿದ್ದರೆ, ಮಂಡಳಿ ಸಹಾಯವಾಣಿಗೆ ಕರೆ ಮಾಡಿ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. 080-23310075/76 ಹಾಗೂ 080-23562267, 23561271 ಸಂಖ್ಯೆಗೆ ಕರೆ ಮಾಡಬಹುದು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳು ಎದೆಗುಂದ ಬೇಕಿಲ್ಲ. ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಅವಕಾಶಗಳು ಇವೆ. ಧೈರ್ಯದಿಂದ ಇರಬೇಕು. ಪರೀಕ್ಷೆಗಿಂತ ನಮ್ಮ ಜೀವನ ಮುಖ್ಯ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳನ್ನು ಆಯಾ ಶಾಲೆಗಳ ಶಿಕ್ಷಕರು ಸಂಪರ್ಕಿಸಿ ಅವರಿಗೆ ಧೈರ್ಯ, ವಿಶ್ವಾಸ ತುಂಬುವ ಜತೆಗೆ ಪೂರಕ ಪರೀಕ್ಷೆ ಬರೆಯಲು ನೆರವಾಗಬೇಕು. – ಬಿ.ಸಿ. ನಾಗೇಶ್, ಶಿಕ್ಷಣ ಸಚಿವರು