Advertisement

ಎಸೆಸೆಲ್ಸಿ: ಜಿಲ್ಲೆಯ ಚಿತ್ತ ನಂ.1ನತ್ತ

12:08 AM Jan 21, 2020 | Sriram |

ಎಸೆಸೆಲ್ಸಿ ಫ‌ಲಿತಾಂಶ ವೃದ್ಧಿಗೆ ಪ್ರಯತ್ನ ಮಾಡುವುದರೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸ್ಪರ್ಧಾತ್ಮಕವಾಗಿ ಎದುರಿಸುವತ್ತ ಧೈರ್ಯ, ಪ್ರೇರಣೆ ತುಂಬುವ ಕೆಲಸವೂ ಆಗಬೇಕು.

Advertisement

ಉಡುಪಿ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಜಿಲ್ಲೆ ಮತ್ತೆ ನಂಬರ್‌ ವನ್‌ ಸ್ಥಾನಗಿಟ್ಟಿಸುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಿದೆ. ಶಿಕ್ಷಕರು ಸಹಿತ ವಿದ್ಯಾರ್ಥಿಗಳು, ಪೋಷಕರಿಗೆ ವಿವಿಧ ಕಾರ್ಯಾಗಾರಗಳು, ತರಬೇತಿ ಶಿಬಿರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

5ನೇ ಸ್ಥಾನಕ್ಕೆ ಕುಸಿದ ಜಿಲ್ಲೆ
ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸತತವಾಗಿ ಪ್ರಥಮ ಸ್ಥಾನ ಅಲಂಕರಿಸಿದ್ದ ಜಿಲ್ಲೆ 2019ರಲ್ಲಿ 5ನೇ ಸ್ಥಾನಕ್ಕೆ ಕುಸಿದಿತ್ತು. ನಾಲ್ಕು ಸ್ಥಾನ ಇಳಿಕೆಯಾದರೂ ಶೇಕಡಾವಾರು ಪ್ರಮಾಣದಲ್ಲಿ ತೀರಾ ಕಡಿಮೆಯಾಗಿರಲಿಲ್ಲ. 2018ರಲ್ಲಿ ಶೇ.88.18 ಫ‌ಲಿತಾಂಶ ಪಡೆದಿತ್ತು. 2019ರಲ್ಲಿ ಶೇ.87.97 ಫ‌ಲಿತಾಂಶ ದಾಖಲಿಸಿದೆ.

ಎಡವಿದ್ದು ಎಲ್ಲಿ?
2019ರಲ್ಲಿ ಅನುತ್ತೀರ್ಣರಾಗಿರುವವರ ಪೈಕಿ ಸಮಾಜವಿಜ್ಞಾನ ಮತ್ತು ವಿಜ್ಞಾನ ವಿಷಯಗಳಲ್ಲಿ ಎಡವಿದ ವಿದ್ಯಾರ್ಥಿಗಳೇ ಅಧಿಕವಾಗಿದ್ದರು. ವಿಜ್ಞಾನ ಪಠ್ಯವೂ ಹೊಸದಾಗಿದ್ದ ಕಾರಣ ಅಧ್ಯಾಪಕರಿಗೂ ಸವಾಲಾಗಿತ್ತು. ಕೆಲ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿಯೂ ಅನುತ್ತೀರ್ಣರಾಗಿದ್ದರು. ಈ ಪರೀಕ್ಷೆಗೆ ಮೂರು ದಿನಗಳ ಬಿಡುವು ಇದ್ದ ಅವಧಿಯಲ್ಲಿ ಕೆಲವೆಡೆ ಅಧ್ಯಾಪಕರು ವಿಶೇಷ ತರಗತಿ ನಡೆಸಿದ ಪರಿಣಾಮ ಅನುತ್ತೀರ್ಣವಾಗಬಹುದಿದ್ದ ವಿದ್ಯಾರ್ಥಿಗಳು ಕೂಡ ತೇರ್ಗಡೆಗೊಂಡಿದ್ದರು. ಆದರೆ ಇಂಥ ಶಿಬಿರಗಳಿಗೆ ಹಾಜರಾಗದ ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು ಎಂದು ಹೇಳಲಾಗುತ್ತಿದೆ.

ವಿಶೇಷ ಶಿಬಿರ
4 ಜಿಲ್ಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುವ ಸವಾಲು ಉಡುಪಿ ಜಿಲ್ಲೆಗೆ ಇರುವುದರಿಂದ ಈಗಾಗಲೇ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ಪ್ರೇರಣಾ ಶಿಬಿರ, ಪ.ಪಂಗಡದ ಮಕ್ಕಳಿಗೆ ವಿಶೇಷ ಕಲಿಕಾ ಶಿಬಿರ, ವಿಷಯ ಆಧಾರಿತ ಕಾರ್ಯಕ್ರಮ, ಬೆಳಗ್ಗೆ ಮತ್ತು ಮಧ್ಯಾಹ್ನ ಒಂದೊಂದು ತಾಸು ಹೆಚ್ಚುವರಿ ತರಗತಿ ಮೊದಲಾದ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಿತ್ಯದ ತರಗತಿಗಳು ಮುಗಿದ ಬಳಿಕವೂ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.

Advertisement

ವಿಶೇಷ ಕಾರ್ಯಾಗಾರ
ಜಿಲ್ಲೆಯಲ್ಲಿ ಜನವರಿ ತಿಂಗಳಿನಿಂದ ತರಬೇತಿ ಪ್ರಕ್ರಿಯೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆೆ. ಬಿಇಒಗಳು ಮನೆಮನೆಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಓದಿನಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರಗಳನ್ನು ಕೂಡ ನಡೆಸಲಾಗುತ್ತಿದೆ.

ಶೇಕಡಾ ನೂರರಷ್ಟು ಫ‌ಲಿತಾಂಶ ದಾಖಲಿಸಲು ಜಿಲ್ಲೆಯ ತಾಲೂಕುಗಳು ಯತ್ನಿಸುತ್ತಿದ್ದು ಇದರೊಂದಿಗೆ ಜಿಲ್ಲೆ ಸಮಗ್ರವಾಗಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆಯಲು ಮತ್ತೆ ಪ್ರಯತ್ನ ನಡೆಸಲಾಗುತ್ತಿದೆ. ಎಸೆಸೆಲ್ಸಿ ಪಠ್ಯ ಬೋಧನೆ, ತರಬೇತಿ, ವಿಶೇಷ ತರಗತಿಗಳೊಂದಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ನೈತಿಕ ಬಲ ತುಂಬುವುದರೊಂದಿಗೆ ಉತ್ತಮ ಫ‌ಲಿತಾಂಶ ಪಡೆಯಲು ಸಾಧ್ಯವಿದೆ.

2019ರಲ್ಲಿ ಶೇ.87.97 ಫ‌ಲಿತಾಂಶ
2019ರಲ್ಲಿ ಉಡುಪಿ ಜಿಲ್ಲೆ 87.97ಶೇ.ಫ‌ಲಿತಾಂಶ ದಾಖಲಿಸಿ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಒಟ್ಟು 625 ಅಂಕಗಳಲ್ಲಿ 620 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ 12 ವಿದ್ಯಾರ್ಥಿಗಳಲ್ಲಿ ಉಡುಪಿ ತಾಲೂಕಿನವರು ಕೇವಲ 4 ಮಂದಿ ಮಾತ್ರ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 6,527 ಮಂದಿ ಗಂಡುಮಕ್ಕಳಲ್ಲಿ 5,555 ಮಂದಿ ಹಾಗೂ 6,476 ಹೆಣ್ಮಕ್ಕಳಲ್ಲಿ 5,902 ಮಂದಿ ತೇರ್ಗಡೆಯಾಗಿದ್ದರು. ಪ್ರಥಮ ಭಾಷೆಯಲ್ಲಿ ಶೇ.98.66, ದ್ವಿತೀಯ ಭಾಷೆಯಲ್ಲಿ ಶೇ.97.06, ತೃತೀಯ ಭಾಷೆಯಲ್ಲಿ 96.83, ಗಣಿತ ಶೇ.91.18, ವಿಜ್ಞಾನ ಶೇ.94.38 ಹಾಗೂ ಸಮಾಜವಿಜ್ಞಾನದಲ್ಲಿ ಶೇ.94.10 ಫ‌ಲಿತಾಂಶ ದಾಖಲಾಗಿತ್ತು.

ನಂಬರ್‌ 1 ಸ್ಥಾನ: ವಿಶ್ವಾಸ
ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ 5ನೇ ಸ್ಥಾನಕ್ಕೆ ಇಳಿದಿತ್ತು. ಕನಿಷ್ಠ ಫ‌ಲಿತಾಂಶ ದಾಖಲಾಗಿರುವ ವಲಯಗಳನ್ನು ಗುರುತಿಸಿ ಈಗಾಗಲೇ ಶಿಬಿರ, ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಮೂಲಕ ಮತ್ತೆ ನಂ. 1 ಸ್ಥಾನ ಗಿಟ್ಟಿಸಿಕೊಳ್ಳುವ ವಿಶ್ವಾಸವಿದೆ.
-ಶೇಷಶಯನ ಕಾರಿಂಜ
ಡಿಡಿಪಿಐ, ಉಡುಪಿ

ಹಲವಾರು ತರಬೇತಿ
ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ. ಪೋಷಕರ ಸಭೆ, ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಚರ್ಚೆ, ಪ್ರತೀ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ.
-ಮಂಜುಳಾ,
ಬಿಇಒ, ಉಡುಪಿ ವಲಯ

ಗುಣಮಟ್ಟದಲ್ಲಿ ದ್ವಿತೀಯ
2019ರ ಒಟ್ಟಾರೆ ಫ‌ಲಿತಾಂಶದಲ್ಲಿ ಇಳಿಕೆಯಾಗಿದ್ದರೂ ಗುಣಮಟ್ಟದ ಶಿಕ್ಷಣದಲ್ಲಿ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿತ್ತು. ವಿಶಿಷ್ಟ ದರ್ಜೆ, ಪ್ರಥಮ ದರ್ಜೆ ಮತ್ತು ಒಟ್ಟು ತೇರ್ಗಡೆಯ ಪ್ರಮಾಣವನ್ನು ಮಾನದಂಡವನ್ನಾಗಿರಿಸಿಕೊಂಡು ಗುಣಮಟ್ಟ ಮಾಪನ ಮಾಡಲಾಗಿತ್ತು.

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next