Advertisement

ಮಾರ್ಚ್‌ನಲ್ಲೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ

06:00 AM Oct 27, 2017 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಬೆನ್ನಲ್ಲೇ, ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್‌ 4ರೊಳಗೆ ಎರಡೂ ಪರೀಕ್ಷೆಗಳು ಪೂರ್ಣಗೊಂಡು, ಆ ತಿಂಗಳ ಅಂತ್ಯಕ್ಕೇ ಫ‌ಲಿತಾಂಶ ಪ್ರಕಟಗೊಳಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

Advertisement

2018ರ ಮಾರ್ಚ್‌ 1ರಿಂದ 16ರ ತನಕ ಪಿಯುಸಿ ಪರೀಕ್ಷೆ ನಡೆಯಲಿದೆ. ಇದಾದ ಒಂದೇ ವಾರದಲ್ಲಿ ಅಂದರೆ, ಮಾರ್ಚ್‌ 23 ರಿಂದ ಏ.4ರ ತನಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಲಿದ್ದು, ಕನ್ನಡ, ತಮಿಳು, ಮಲೆಯಾಳಂ ಹಾಗೂ ಅರೇಬಿಕ್‌ ವಿಷಯದ ಪರೀಕ್ಷೆಯೊಂದಿಗೆ ಕೊನೆಯಾಗಲಿದೆ. ಎಲ್ಲಾ ಪರೀಕ್ಷೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ ನಡೆಯಲಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಥಮ ಭಾಷೆ ಕನ್ನಡದಿಂದ ಆರಂಭವಾಗಿ ಸಮಾಜ ವಿಜ್ಞಾನ ಪರೀಕ್ಷೆಯೊಂದಿಗೆ ಕೊನೆಯಾಗಲಿದೆ. ಬೆಳಗ್ಗಿನ ಪರೀಕ್ಷೆ 9.30ರಿಂದ 12.15ರ ತನಕ ಹಾಗೂ ಮಧ್ಯಾಹ್ನ ಪರೀಕ್ಷೆ 2 ಗಂಟೆಯಿಂದ 5.15ರ ತನಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಎರಡು ಪ್ರಮುಖ ಪರೀಕ್ಷೆಯನ್ನು ಮಾರ್ಚ್‌ ತಿಂಗಳಲ್ಲೇ ನಡೆಸಲು ಪೂರಕವಾದ ರೀತಿಯಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಈ ತಾತ್ಕಾಲಿಕ ವೇಳಾಪಟ್ಟಿಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಚುನಾವಣಾಕಾರ್ಯಕ್ಕೆ ಶಿಕ್ಷ ಕರ ಬಳಕೆ ಆಗುವುದರಿಂದ ಏಪ್ರಿಲ್‌ ಅಂತ್ಯದೊಳಗೆ ಮೌಲ್ಯಮಾಪನ ಮುಗಿಸಲು ಇಲಾಖೆ ಯೋಜಿಸಿದೆ.

ಆಕ್ಷೇಪಣೆ ಆಹ್ವಾನ
ಎಸ್ಸೆಸ್ಸೆಲ್ಸಿ ಬೋರ್ಡ್‌ ಮಾ.23ರಿಂದ ಏ.4ರ ತನಕ ನಡೆಸಲಿರುವ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಅಂಚೆ ಮೂಲಕ ಅಥವಾ ನೇರವಾಗಿ ನವೆಂಬರ್‌ 24ರೊಳಗೆ ಆಕ್ಷೇಪಣೆಗಳನ್ನು ತಲುಪಿಸಬೇಕು. ಹಾಗೆಯೇ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದರೆ ನ.24ರೊಳಗೆ ಜಂಟಿ ನಿರ್ದೇಶಕರು (ಪರೀಕ್ಷೆ) ಪದವಿ ಪೂರ್ವ ಶಿಕ್ಷಣ ಇಲಾಖೆ, 18ನೇ ಅಡ್ಡರಸ್ತೆ, ಮಲ್ಲೇಶ್ವರ ಇಲ್ಲಿಗೆ ತಲುಪಿಸಬೇಕು. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ.

Advertisement

ಎಸ್ಸೆಸ್ಸೆಲ್ಸಿ ತಾತ್ಕಾಲಿಕ ವೇಳಾಪಟ್ಟಿ
ದಿನಾಂಕ              ವಿಷಯ
ಮಾ.23        ಪ್ರಥಮ ಭಾಷೆ(ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌ ಮತ್ತು ಸಂಸ್ಕೃತ)
ಮಾ.24        ಎಲಿಮೆಂಟ್ಸ್‌ ಆಫ್ ಎಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌, ಅರ್ಥಶಾಸ್ತ್ರ,(ಮಧ್ಯಾಹ್ನ-ಡ್ರಾಯಿಂಗ್‌)
ಮಾ.26        ಗಣಿತ(ಮಧ್ಯಾಹ್ನ-ಸಮಾಜ ಶಾಸ್ತ್ರ)
ಮಾ.28        ದ್ವಿತೀಯ ಭಾಷೆ(ಕನ್ನಡ, ಇಂಗ್ಲಿಷ್‌)
ಮಾ. 31       ವಿಜ್ಞಾನ, ರಾಜ್ಯಶಾಸ್ತ್ರ (ಮಧ್ಯಾಹ್ನ- ಕರ್ನಾಟಕ ಸಂಗೀತ, ಹಿಂದುಸ್ಥಾನಿ ಸಂಗೀತ)
ಏ.2             ತೃತೀಯ ಭಾಷೆ(ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು,ಸಂಸ್ಕೃತ, ಕೊಂಕಣಿ, ತುಳು)(ಎನ್‌ಎಸ್‌ಕ್ಯೂಎಫ್ ಪರೀಕ್ಷೆ)
ಏ.4             ಸಮಾಜ ವಿಜ್ಞಾನ

ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ
ದಿನಾಂಕ              ವಿಷಯ
ಮಾ. 1        ಅರ್ಥಶಾಸ್ತ್ರ, ಭೌತಶಾಸ್ತ್ರ
ಮಾ.2         ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಕ ವಿಜ್ಞಾನ
ಮಾ.3         ಹಿಂದಿ, ತೆಲಗು, ಮರಾಠಿ, ಫ್ರೆಂಚ್‌
ಮಾ.5         ವ್ಯವಹಾರ ಅಧ್ಯಯನ, ಜೀವಶಾಸ್ತ್ರ
ಮಾ.6         ರಾಜ್ಯಶಾಸ್ತ್ರ
ಮಾ.7         ಮಾಹಿತಿ ತಂತ್ರಜ್ಞಾನ, ರೀಟೇಲ್‌, ಅಟೋಮೋಟೀವ್‌, ಹೆಲ್ತ್‌ ಕೇರ್‌, ಬ್ಯೂಟಿ ಮತ್ತು ವೆಲ್‌ನೆಸ್‌(ಎನ್‌ಎಸ್‌ಕ್ಯೂಎಫ್)
ಮಾ.8        ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ರಸಾಯಶಾಸ್ತ್ರ
ಮಾ. 9       ತರ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಶಿಕ್ಷಣ
ಮಾ.10      ಇತಿಹಾಸ, ಗೃಹವಿಜ್ಞಾನ
ಮಾ.12      ಸಮಾಜಶಾಸ್ತ್ರ, ಗಣಿತ, ಬೇಸಿಕ್‌ ಮ್ಯಾಥ್ಸ್
ಮಾ.13      ಸಂಸ್ಕೃತ, ಉರ್ದು
ಮಾ.14      ಇಂಗ್ಲಿಷ್‌
ಮಾ.15      ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ಥಾನಿ ಸಂಗೀತ, ಭೂಗರ್ಭಶಾಸ್ತ್ರ
ಮಾ.16      ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್‌

ಚುನಾವಣಾ ಆಯೋಗದೊಂದಿಗೆ ಚರ್ಚೆ ಮಾಡಿಯೇ ಎಸ್ಸೆಸ್ಸೆಲ್ಸಿ,ಪಿಯುಸಿ ಪರೀಕ್ಷೆ ದಿನಾಂಕ ನಿಗದಿಗೊಳಿಸಲಾಗಿದೆ. ಏಪ್ರಿಲ್‌ ಮಾಸಾಂತ್ಯದ ವೇಳೆಗೆ ಪರೀಕ್ಷೆ ಹಾಗೂ ಫ‌ಲಿತಾಂಶ ಎಲ್ಲಾ ಪ್ರಕ್ರಿಯೆ ಮುಗಿಯಲಿದೆ. ಎಸ್ಸೆಸ್ಸೆಲ್ಸಿ ಮೌಲ್ಯ ಮಾಪನಕ್ಕೆ 60,000 ಶಿಕ್ಷಕರು ಹಾಗೂ ಪಿಯುಸಿ ಮೌಲ್ಯ ಮಾಪನಕ್ಕೆ 20,000 ಉಪನ್ಯಾಸಕರನ್ನು ನಿಯೋಜಿಸಲಾಗುವುದು. ಚುನಾವಣೆಗೆ ಶಿಕ್ಷಣ ಇಲಾಖೆಯ ಸಿಬ್ಬಂದಿ ಬಳಕೆಗೆ ತೊಂದರೆಯಾಗುತ್ತಿಲ್ಲ.
– ತನ್ವೀರ್‌ ಸೇಠ್ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next