ಬಾಗಲಕೋಟೆ: ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲಂನಲ್ಲಿ ಕರ್ನಾಟಕದ ಪಾದಯಾತ್ರಿಕರು ಹಾಗೂ ಅಲ್ಲಿನ ವ್ಯಾಪಾರಸ್ಥರೊಂದಿಗೆ ನಡೆದ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೀಳಗಿ ತಾಲೂಕು ಜಾನಮಟ್ಟಿಯ ಶ್ರೀಶೈಲ ವಾರಿಮಠನನ್ನು ಕರ್ನೂಲ್ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ತೆಂಗಿನಕಾಯಿ ಸುಲಿಯುವ ಕಬ್ಬಿಣದ ರಾಡ್‌ನಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸುಮಾರು 10ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ಕರ್ನೂಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರವೇ ಮಾಡಿದ್ದು, ರಾಯಚೂರಿನ ಡಿವೈಎಸ್ಪಿ, ಶುಕ್ರವಾರ ಬೆಳಗ್ಗೆ ಕರ್ನೂಲ್ ಆಸ್ಪತ್ರೆಗೆ ಭೇಟಿ ನೀಡಿ, ಬೆಂಗಳೂರಿಗೆ ರವಾನಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದಾರೆ ಎಂದು ಗಾಯಗೊಂಡಿರುವ ಶ್ರೀಶೈಲ ವಾರಿಮಠ ಅವರ ಸಹೋದರ ಶಿವು ವಾರಿಮಠ “ಉದಯವಾಣಿ’ಗೆ ತಿಳಿಸಿದ್ದಾರೆ.
ನಮ್ಮ ಸಹೋದರ ಶ್ರೀಶೈಲ ವಾರಿಮಠ ನಮ್ಮೂರಿನಿಂದ ಒಬ್ಬನೇ ಶ್ರೀಶೈಲಕ್ಕೆ ಬಂದಿದ್ದರು. ಬಾಗಲಕೋಟೆಯಿಂದ ಕರ್ನೂಲ್‌ವರೆಗೆ ರೈಲ್ವೆ ಮೂಲಕ ಬಂದಿದ್ದು, ಇಲ್ಲಿನ ಅಸಂಪುರದಿಂದ ಪಾದಯಾತ್ರೆ ಮೂಲಕ ತೆರಳಿದ್ದರು. ಈ ಗಲಾಟೆ ಹೇಗಾಯಿತು, ಏಕಾಯಿತು ಎಂಬುದು ಯಾವುದೂ ನನಗೆ ಗೊತ್ತಿಲ್ಲ. ಜಾನಮಟ್ಟಿಯ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಮೊದಲು ಸುದ್ದಿ ತಿಳಿಯಿತು. ಬಳಿಕ ಮೃತಪಟ್ಟಿದ್ದಾನೆ ಎಂದು ವದಂತಿಯೂ ಹರಡಿತ್ತು. ನಮಗೆ ತೀವ್ರ ಭಯವಾಗಿತ್ತು. ಹೀಗಾಗಿ ನಾನೇ ಸ್ವತಃ ಕರ್ನೂಲ್‌ಗೆ ಬಂದಿದ್ದೇನೆ ಎಂದರು.
ಕರ್ನೂಲ್‌ಗೆ ಬಂದಾಗ ಇಲ್ಲಿನ ವೈದ್ಯರು, ಪೊಲೀಸರು ಇದ್ದರು. ತಲೆಗೆ ಹೊಲಿಗೆ ಹಾಕಿರುವುದು ಮಾತ್ರ ಕಾಣುತ್ತಿತ್ತು. ನಮ್ಮ ಸಹೋದರನಿಗೆ ಪ್ರಜ್ಞೆ ಇದ್ದು, ನನ್ನನ್ನು ಗುರುತಿಸಿದ್ದಾನೆ. ಆದರೆ, ಮಾತು ಬರುತ್ತಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಕರ್ನೂಲ್‌ನಲ್ಲಿ ಭಾಷಾ ಸಮಸ್ಯೆಯಿಂದ ಅಲ್ಲಿನ ವೈದ್ಯರು, ಪೊಲೀಸರು ಏನು ಹೇಳಿದರು ಎಂಬುದೇ ತಿಳಿದಿಲ್ಲ. ರಾಯಚೂರು ಡಿವೈಎಸ್ಪಿಯವರು, ನೀವು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದರು. ಅವರೇ ವ್ಯವಸ್ಥೆ ಮಾಡಿರುವ ವಾಹನದಲ್ಲಿ ಬೆಂಗಳೂರಿಗೆ ಆಗಮಿಸಿದ್ದೇವೆ ಎಂದರು.