ಬೆಂಗಳೂರು:ಬಳ್ಳಾರಿ ಸಂಸದ ಹಾಗೂ ಜನಾರ್ಧನರೆಡ್ಡಿ ಆಪ್ತ ಶ್ರೀರಾಮುಲು ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಜನಾರ್ಧನರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದರಿಂದ ಆತಂಕಗೊಂಡಿರುವ ಶ್ರೀರಾಮುಲು ದಿಢೀರ್ ಬೆಂಗಳೂರಿಗೆ ಆಗಮಿಸಿ ಯಡಿಯೂರಪ್ಪ ಜತೆ ಸುಮಾರು ಒಂದು ಗಂಟೆ ಕಾಲ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.
ಜನಾರ್ಧನರೆಡ್ಡಿ ಅವರು ಬಳ್ಳಾರಿಯಷ್ಟೇ ಅಲ್ಲದೆ ರೆಡ್ಡಿ ಸಮುದಾಯ ಇರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದರೆ ಕಷ್ಟವಾಗುತ್ತದೆ ಎಂದು ಶ್ರೀರಾಮುಲು ಯಡಿಯೂರಪ್ಪ ಅವರ ಬಳಿ ಅವಲತ್ತುಕೊಂಡರು.
ಜನಾರ್ಧನರೆಡ್ಡಿ ವಿರುದ್ಧದ ಆರೋಪಗಳಲ್ಲೂ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಕ್ಲೀನ್‌ಚಿಟ್ ಸಿಕ್ಕಿವೆ. ಪಕ್ಷಕ್ಕೆ ಅವರಿಂದ ಶಕ್ತಿ ತುಂಬಲಿದೆ. ರಾಷ್ಟ್ರೀಯ ಅಧ್ಯಕ್ಷರು ಬಹಿರಂಗವಾಗಿಯೇ ಈ ರೀತಿ ಹೇಳಿರುವುದು ಬೆಂಬಲಿಗರಲ್ಲೂ ಗೊಂದಲ ಮೂಡಿದೆ ಎಂದು ಹೇಳಿದರು ಎನ್ನಲಾಗಿದೆ.
ಆದರೆ, ಶ್ರೀರಾಮುಲು ಅವರನ್ನು ಸಮಾಧಾನಪಡಿಸಿದ ಯಡಿಯೂರಪ್ಪ, ಪ್ರಸಕ್ತ ಸನ್ನಿವೇಶದಲ್ಲಿ ಅಮಿತ್ ಶಾ ಅವರು ಆ ರೀತಿ ಹೇಳಲೇಬೇಕಿದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಿಮ್ಮಷ್ಟಕ್ಕೆ ನೀವು ಪಕ್ಷದ ಕೆಲಸ ಮಾಡಿ ಎಂದು ಹೇಳಿ ಕಳುಹಿಸಿದರು ಎಂದು ಹೇಳಲಾಗಿದೆ.
ಯಡಿಯೂರಪ್ಪ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಶ್ರೀರಾಮುಲು. ಅಮಿತ್ ಶಾ ಪ್ರವಾಸ ರದ್ದಾಗಿರುವ ಬಗ್ಗೆ ಯಡಿಯೂರಪ್ಪ ಅವರ ಜತೆ ಮಾತನಾಡಲು ಬಂದಿದ್ದೇನೆ. ಜನಾರ್ಧನರೆಡ್ಡಿ ಬಗ್ಗೆ ಅಮಿತ್ ಹೇಳಿಕೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದರು.