Advertisement

ಅಪ್ಪಿಕೊಂಡಾಗಲೆಲ್ಲ ದೇಶದಲ್ಲಿ ಕಾಂಗ್ರೆಸ್‌ ಸೋತಿದೆ: ರಾಮುಲು

09:34 PM Aug 04, 2022 | Team Udayavani |

ಬಳ್ಳಾರಿ: ಅಪ್ಪಿಕೊಂಡಾಗಲೆಲ್ಲ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಮಗುಚಿ ಬಿದ್ದಿದೆ. ದಾವಣಗೆರೆಯಲ್ಲಿ ನಡೆದ ಸಿದ್ದು ಜನ್ಮದಿನ ಕಾರ್ಯಕ್ರಮದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಪ್ಪಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದು ಎಷ್ಟು ದಿನ ಇರಲಿದೆ ನೋಡೋಣ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ದಾವಣಗೆರೆಯಲ್ಲಿ ಆಚರಿಸಿಕೊಂಡಿದ್ದು ಜನ್ಮದಿನದಂತೆ ಇರಲಿಲ್ಲ. ಮತಸಮರಕ್ಕೆ ಸಜ್ಜಾಗಿದ್ದಾರೆಂಬ ಸಂದೇಶ ನೀಡಲು ಮಾಡಿದ ಸಮಾವೇಶದಂತಿತ್ತು. ಅವರಿಗೆ ಆರೋಗ್ಯ ಚೆನ್ನಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.

ಜನ್ಮದಿನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಪರಸ್ಪರ ಆಲಿಂಗನದ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಅವರಿಬ್ಬರು ಅಪ್ಪಿಕೊಂಡ ಮಾತ್ರಕ್ಕೆ ಜನ ಮರುಳಾಗೋಲ್ಲ. ಅಪ್ಪಿಕೊಳ್ಳುವುದು ದೊಡ್ಡ ಕೆಲಸವಲ್ಲ. ಈ ಅಪ್ಪಿಕೊಂಡಾಗಲೆಲ್ಲ ದೇಶದಲ್ಲಿ ಕಾಂಗ್ರೆಸ್‌ ಮಗುಚಿ ಬಿದ್ದಿದೆ. ದೇಶಾದ್ಯಂತ ಅಪ್ಪಿಕೊಂಡಾಗಲೆಲ್ಲ ಸರ್ಕಾರಗಳೂ ಬದಲಾಗಿವೆ ಎಂದು ಛೇಡಿಸಿದರು.

ಜನ್ಮದಿನ ಆಚರಿಸಿಕೊಂಡ ಸಿದ್ದರಾಮಯ್ಯನವರು ಎದ್ದರಾಮಯ್ಯನವರಂತೆ ಕಾರ್ಯಕ್ರಮದಲ್ಲಿ ಎಗರಾಡಿದ್ದಾರೆ ಎಂದು ವ್ಯಂಗ್ಯವಾಡಿದ ಶ್ರೀರಾಮುಲು, ಮುಂದಿನ ದಿನಗಳಲ್ಲಿ ಅವರು ಬಿದ್ದರಾಮಯ್ಯ ಆಗುತ್ತಾರೆ ಎಂದರು.

ಅವರಿಬ್ಬರೂ ಅಧಿಕಾರಕ್ಕಾಗಿ ಅಪ್ಪಿಕೊಂಡಿದ್ದಾರೆ. ಅದು ಘನಂಧಾರಿ ಕೆಲಸವಲ್ಲ. ಅವರು ಎಷ್ಟೇ ಜನರನ್ನು ಸೇರಿಸಲಿ. ಮುಂದಿನ ದಿನಗಳಲ್ಲಿ ನಾವೂ ಅದಕ್ಕಿಂತ ಜಾಸ್ತಿ ಜನರನ್ನು ಸೇರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಅವರನ್ನು ಒಂದು ಮಾಡಲು ದೆಹಲಿಯಿಂದ ಅಂಪೈರ್‌ ಬಂದಿದ್ದರು. ಆ ಅಂಪೈರ್‌ಗೂ ಸಹ ಯಾರನ್ನು ಇನ್‌ ಮಾಡಬೇಕು. ಯಾರನ್ನು ಔಟ್‌ ಮಾಡಬೇಕು ಅನ್ನೋದು ತಿಳಿಯಲಿಲ್ಲ. ಅದಕ್ಕಾಗಿ ಸಾಮೂಹಿಕ ನಾಯಕತ್ವ ದಲ್ಲಿ ಚುನಾವಣೆಗೆ ಹೋಗುತ್ತೇವೆ ಎನ್ನುತ್ತಿದ್ದಾರೆ. ಮೇನ್‌ ಅಂಪೈಯರ್‌ ಕೂಡಾ ತೀರ್ಪು ನೀಡಲು ಆಗಿಲ್ಲ ಎಂದರು.

ಸಿದ್ದರಾಮಯ್ಯ ತಾನು ಸಮಾಜವಾದಿ ಅಂತಾರೆ. ಸಮಾಜವಾದಿ ತತ್ವಗಳನ್ನು ಮರೆತು ಆಡಂಬರದಿಂದ ಜನ್ಮದಿನ ಆಚರಿಸಿಕೊಂಡಿದ್ದಾರೆ. ಹೊಸ ಆಚರಣೆಗೆ ಸಿದ್ದರಾಮಯ್ಯ ಮುನ್ನುಡಿ ಬರೆದಿದ್ದಾರೆ. ದೆಹಲಿಯಿಂದ ಬಂದ ಅಂಪೈರ್‌ ಎದುರು ಶಕ್ತಿ ತೋರಿಸಲು ಅಷ್ಟೊಂದು ಜನರನ್ನು ಸೇರಿಸಿದ್ದಾರೆ. ಪಕ್ಷ ತೀರ್ಮಾನ ಮಾಡಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಮತ್ತೂಮ್ಮೆ ಸ್ಪರ್ಧೆ ಮಾಡುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next