Advertisement

ಮುಕ್ತಿಮಂದಿರ ಶ್ರೀಗಳ ಆಶೀರ್ವಾದವೇ ಶ್ರೀರಕ್ಷೆ

06:36 PM Nov 19, 2022 | Team Udayavani |

ರಾಣಿಬೆನ್ನೂರ: ಜೀವಿತಾವಧಿಯ ಎಲ್ಲಾ ಸಮಯದಲ್ಲೂ ಧರ್ಮ ರಕ್ಷಣೆಗೆ ಶ್ರಮಿಸುತ್ತೇನೆ. ನನ್ನಜ್ಜ ಮುಕ್ತಿಮಂದಿರದ ಶ್ರೀಗಳ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದೆ. ಪಟ್ಟಾಧಿಕಾರ ಸಮಾರಂಭ ಭಕ್ತರಿಗೆ ಹರ್ಷ ಉಂಟು ಮಾಡಿದರೆ, ನನಗೆ ಜವಾಬ್ದಾರಿ ಹೆಚ್ಚಿಸಿದೆ ಎಂದು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ಪುಣ್ಯಕೋಟಿ ಮಠದಲ್ಲಿ 2023ನೇ ಮಾ.11ರಿಂದ 14ರ ವರೆಗೆ ನಡೆಯಲಿರುವ ಶ್ರೀ ಗುರು ಪಟ್ಟಾ ಧಿಕಾರ ಮಹೋತ್ಸವ ಮತ್ತು ತುಂಗಾರತಿ ಸಮಾರಂಭದ ಹಿನ್ನೆಲೆಯಲ್ಲಿ ಮಠದಲ್ಲಿ ನಡೆದ ಹರಗುರುಚರಮೂರ್ತಿಗಳ ಹಾಗೂ ಸಕಲ ಭಕ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಯುಗ ಯುಗಗಳಿಂದ ಧರ್ಮ, ಸಂಸ್ಕೃತಿ, ಪರಂಪರೆಯನ್ನುಳಿಸಿ ಬೆಳೆಸಿಕೊಂಡು ಬಂದಿರುವ ವೀರಶೈವ ಧರ್ಮ ಮಹಾಮತ ಸ್ಥಾಪಕರಾದ ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತಗೊಂಡು, ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಧರ್ಮ ಸಮನ್ವಯತೆಯ ಶಾಂತಿ ಸಂದೇಶ ಸಾರುತ್ತಿರುವ ಬಾಳೆಹೊನ್ನೂರಿನ ಶ್ರೀಮದ್‌ ರಂಭಾಪುರಿ ಪೀಠದ ಶಾಖಾ ಮಠವೇ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠವೆಂದು ತಿಳಿಸಲು ಹರ್ಷವೆನ್ನಿಸುತ್ತದೆ ಎಂದು ಶ್ರೀಗಳು ತಿಳಿಸಿದರು.

2023ನೇ ಮಾರ್ಚ್‌ ತಿಂಗಳಲ್ಲಿ ನಡೆಯಲಿರುವ ಪಟ್ಟಾಧಿಕಾರ ಹಾಗೂ ತುಂಗಾರತಿ ಸಮಾರಂಭಕ್ಕೆ ಈಗಾಗಲೇ ಭಕ್ತರು ತಮ್ಮ ತನು, ಮನ, ಧನಗಳಿಂದ ಸಹಾಯ ಮಾಡಲು ಮುಂದಾಗಿರುವುದು ಸಂತಸವೆನ್ನಿಸಿದೆ. ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್‌.ಶಂಕರ್‌ ಅವರು ಬೆಳ್ಳಿ ಕಿರೀಟ ನೀಡಿದ್ದರು. ಅದರ ಫಲವಾಗಿ ಇಂದು ಚಳ್ಳಕೇರಿ ತಾಲೂಕಿನ ದೊಡ್ಡೇರಿ ದತ್ತಾಶ್ರಮದ ತ್ರಿಕಾಲ ಜ್ಞಾನಿ ಶ್ರೀಗಳು ಬಂಗಾರದ ಕಿರೀಟ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಆರ್‌. ಶಂಕರ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಗಳಗೌರಿ ಅರುಣಕುಮಾರ ಪೂಜಾರ, ನೆಗಳೂರಿನ ಗುರುಶಾಂತ ಶ್ರೀಗಳು, ನಗರದ ಶನೇಶ್ವರ ಮಠದ ಶಿವಯೋಗಿ ಶಿವಾಚಾರ್ಯರು, ತಿಪ್ಪಾಯಿಕೊಪ್ಪದ ಮೂಕಪ್ಪಸ್ವಾಮಿಗಳ ಮಠದ ಗುರು ಮಹಾಂತಸ್ವಾಮಿಗಳು, ನಾಗವಂದದ ಶಿವಾಚಾರ್ಯರು, ಕೂಡಲಮಠದ ಅಕ್ಕಿಆಲೂರು ಮುತ್ತಿನಖಂತಿಮಠದ ಚಂದ್ರಶೇಖರ ಶಿವಾಚಾರ್ಯರು, ಹರಿಹರ ತಾಲೂಕು ದೊಡ್ಡಬಾತಿ ತಪೋವನದ ಮುಖ್ಯಸ್ಥ ಡಾ| ಶಶಿಕುಮಾರ ಮೆಹರವಾಡೆ, ಹೊಸದುರ್ಗದ ಆಂಜನೇಯ ಧರ್ಮಕ್ಷೇತ್ರದ ಶ್ರೀಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ ಶಿವು ಹಿರೇಮಠ, ದಾವಣಗೆರೆ ಕರ್ನಾಟಕ ರಾಜ್ಯ ಹಿಂದೂ ರಾಷ್ಟ್ರ ಸೇನೆಯ ಪ್ರವರ್ತಕ ಸಂದೀಪ್‌ ಜಿ., ಗ್ರಾಪಂ ಮಾಜಿ ಸದಸ್ಯ ಕರಿಯಪ್ಪ ಮಾಳಗಿ, ಭಾರತಿ ಜಂಬಗಿ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next