Advertisement

ಭತ್ತ ಕಟಾವಿಗೆ ಯಂತ್ರಗಳದ್ದೇ ಕೊರತೆ!

01:14 PM Dec 23, 2019 | Naveen |

ರಮೇಶ ಕರುವಾನೆ
ಶೃಂಗೇರಿ:
ತಾಲೂಕಿನಾದ್ಯಾಂತ ಭತ್ತದ ಕಟಾವು ಕಾರ್ಯ ಚುರುಕುಗೊಂಡಿದ್ದು, ಬಹುತೇಕ ರೈತರು ಕಟಾವು ಯಂತ್ರಗಳನ್ನೇ ಬಳಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವವರ ಸಂಖ್ಯೆ ಕುಸಿತವಾಗುತ್ತಿದೆ. ಅತಿವೃಷ್ಟಿ ನಡುವೆಯೂ ಈ ವರ್ಷ ಭತ್ತದ ಪೈರು ಉತ್ತಮವಾಗಿದ್ದರೂ, ಪ್ರತಿಕೂಲ ಹವಾಮಾನ, ಕಾರ್ಮಿಕರ ಕೊರತೆ, ಸಕಾಲಕ್ಕೆ ದೊರಕದ ಕಟಾವು ಯಂತ್ರಗಳಿಂದ ಭತ್ತ ಬೆಳೆದಿರುವ ರೈತರಿಗೆ ಸಂಕಷ್ಟ ಎದುರಾಗಿದೆ.

Advertisement

ತಾಲೂಕಿನಲ್ಲಿ 2000 ಹೆಕ್ಟೇರ್‌ಗೂ ಅಧಿಕ ಜಾಗದಲ್ಲಿಭತ್ತ ಬೆಳೆಯಲಾಗುತ್ತಿದ್ದು, ಕಳೆದ ಒಂದು ದಶಕದಲ್ಲಿ ಭತ್ತ ಬೆಳೆಯುವವರ ಸಂಖ್ಯೆ ತೀವ್ರ ಕುಸಿತಗೊಂಡಿದ್ದು, ಅಂದಾಜು 1000 ಹೆಕ್ಟೇರ್‌ ಪ್ರದೇಶ ಭತ್ತ ಬೆಳೆ ಕೈ ಬಿಡಲಾಗಿದೆ. ಹೈಬ್ರಿಡ್‌ ತಳಿ ಭತ್ತವನ್ನೇ ಹೆಚ್ಚಾಗಿ ಬೆಳೆಯುತ್ತಿದ್ದು, ಇದೀಗ ಕಟಾವಿಗೆ ಸಿದ್ಧವಾಗಿದೆ. ಸಾಂಪ್ರದಾಯಿಕ ತಳಿಗಳು ಈಗ ಕೈ ಬಿಡಲಾಗುತ್ತಿದೆ. ಈ ವರ್ಷ ಮುಂಗಾರು ಆರಂಭದಲ್ಲಿ ತಡವಾಗಿದ್ದರಿಂದ ಬಿತ್ತನೆ ಕಾರ್ಯ ವಿಳಂಬವಾಗಿತ್ತು.ನವೆಂಬರ್‌ ಕೊನೆಯ ವಾರದಿಂದ ಆರಂಭವಾಗಬೇಕಿದ್ದ ಕಟಾವು ಇದೀಗ ಆರಂಭವಾಗಿದೆ.

ಕಟಾವು ಯಂತ್ರಗಳ ಕೊರತೆ: ಕಳೆದ ಎರಡು ವರ್ಷದಿಂದ ತಾಲೂಕಿನಲ್ಲಿ ಜನಪ್ರಿಯವಾಗಿರುವ ಕಂಬೈನ್ಡ್ ಹಾರ್ವೆಸ್ಟರ್‌ ಇದೀಗ ರೈತರ ಬೇಡಿಕೆಯಾಗಿದ್ದರೂ, ಹಾರ್ವೆಸ್ಟರ್‌ ಕೊರತೆಯಿಂದ
ಕೊಯ್ಲಿಗೆ ಹಿನ್ನಡೆಯಾಗಿದೆ. ಕಂಬೈನ್ಡ್ ಹಾರ್ವೆಸ್ಟರ್‌ ಕಟಾವು, ಒಕ್ಕಣೆ ಒಟ್ಟಿಗೆ ಮಾಡುವುದರಿಂದ ರೈತರಿಗೆ ಹೆಚ್ಚು ಉಪಯುಕ್ತವಾಗಿದೆ. ಬಯಲು ಸೀಮೆಯಿಂದ ಬರುವ ಯಂತ್ರಗಳ ಸಂಖ್ಯೆ ಈ ವರ್ಷ ಕಡಿಮೆಯಾಗಿದ್ದು, ಕಾರ್ಮಿಕರು ಅಥವಾ ಕಟಾವು ಯಂತ್ರದ ಮೂಲಕ ಕೊಯ್ಲು ಮಾಡಬೇಕಾಗಿದೆ. ಮಲೆನಾಡಿನ ಗದ್ದೆ ಏರು ತಗ್ಗಿನಿಂದ ಕೂಡಿದ್ದು, ಯಂತ್ರ ಎಲ್ಲಾ ಗದ್ದೆಯಲ್ಲಿ ಕಟಾವು ಮಾಡುವುದು ಕಷ್ಟವಾಗಿದೆ. ಬಿಸಿಲಿನಲ್ಲಿ ದಿನವಿಡೀ ಕೊಯ್ಲು ಮಾಡುವ ಕಾರ್ಮಿಕರ ಸಂಖ್ಯೆಯೂ ಇಳಿಮುಖವಾಗಿರುವುದು, ಯಂತ್ರದ ಬೇಡಿಕೆ ಹೆಚ್ಚುವಂತೆ ಮಾಡಿದೆ.

ಪ್ರಾಣಿಗಳ ಉಪಟಳ: ಭತ್ತ ಬೆಳೆಯುವ ಪ್ರದೇಶ ಕಡಿಮೆಯಾದಂತೆ ಬೆಳೆಯುತ್ತಿರುವ ಪ್ರದೇಶಕ್ಕೆ ಪ್ರಾಣಿಗಳ ಉಪಟಳ ತೀವ್ರವಾಗಿದೆ. ಮಂಗ, ಹಂದಿ, ನವಿಲು, ಕಾಡುಕೋಣಗಳು ಹೆಚ್ಚಾಗಿ ಭತ್ತದ ಗದ್ದೆಗೆ ನುಗ್ಗಿ ಬೆಳೆ ಹಾಳು ಮಾಡುತ್ತಿದೆ. ಹೈನುಗಾರಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಒಣ ಹುಲ್ಲಿನ ಬೇಡಿಕೆಯೂ ಕಡಿಮೆಯಾಗಿದ್ದು, ಭತ್ತಕ್ಕೂ ಉತ್ತಮ ದರ ದೊರಕದೆ ಭತ್ತ ಬೆಳೆಯುವುದೇ ನಷ್ಟ ಎನ್ನುವಂತಾಗಿದೆ. ಆದರೂ ಮನೆಗೆ ಅಗತ್ಯವಿರುವಷ್ಟು ಭತ್ತ, ಹುಲ್ಲು ಪಡೆಯಲು ಅನೇಕ ರೈತರು ಇನ್ನೂ ಆಸಕ್ತಿಯಿಂದ ಭತ್ತ ಬೆಳೆಯಲು ಮುಂದಾಗಿದ್ದಾರೆ.

ಭತ್ತ ಬೆಳೆಯಲು ರೈತರಿಗೆ ಕೃಷಿ ಇಲಾಖೆ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ರೈತರಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಅಗತ್ಯವಿರುವ ಬಿತ್ತನೆ ಬೀಜ, ಕೀಟನಾಶಕವನ್ನು ಇಲಾಖೆ ಸಹಾಯಧನದ ರೂಪದಲ್ಲಿ ನೀಡುತ್ತಿದೆ. ರೈತರು ಭತ್ತ ಬೆಳೆಯುವುದನ್ನು ಕೈಬಿಡಬಾರದು.
ಸಚಿನ್‌ ಹೆಗಡೆ,
ಸಹಾಯಕ ಕೃಷಿ ನಿರ್ದೇಶಕ, ಶೃಂಗೇರಿ.

Advertisement

ಕಟಾವು ತಡವಾದಂತೆ ಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ಕಂಬೈನ್ಡ್ ಹಾರ್ವೆಸ್ಟರ್‌ ನಮಗೆ ಅನುಕೂಲವಾಗಿದ್ದರೂ, ನಾವು ಹೇಳಿದ ನಿಗದಿತ ವೇಳೆಗೆ ದೊರಕದೆ ತೊಂದರೆಯಾಗುತ್ತಿದೆ. ಭತ್ತದ ನಾಟಿಯನ್ನು ಕಾರ್ಮಿಕರೇ ಮಾಡಬಹುದಾಗಿದ್ದು, ಕಟಾವಿಗೆ ಕಾರ್ಮಿಕರು ದೊರಕುತ್ತಿಲ್ಲ. ಕಂಬೈನ್ಡ್ ಹಾರ್ವೆಸ್ಟರ್‌ ಯಂತ್ರ ಮಲೆನಾಡಿನ ಗದ್ದೆಗೆ ಸೂಕ್ತವಾಗುವಂತಹ ಸಣ್ಣ ಯಂತ್ರ ಅಗತ್ಯವಿದೆ.
ಕೆ.ಆರ್‌.ನಾಗೇಂದ್ರ,
ನೇರಳಕೊಡಿಗೆ, ಬೆಳಂದೂರು ಗ್ರಾಮಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next