ಶೃಂಗೇರಿ: ತಾಲೂಕು ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಅ.22 ರಂದು ಸ್ವಯಂ ಪ್ರೇರಿತ ಶೃಂಗೇರಿ ಬಂದ್‌ಗೆ ಕರೆ ನೀಡಿದ್ದು, ಆಸ್ಪತ್ರೆ ನಿರ್ಮಾಣಕ್ಕಾಗಿ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು ಎಂದು ಹೋರಾಟ ಸಮಿತಿಯ ಆದರ್ಶ ತಿಳಿಸಿದ್ದಾರೆ.
2020 ರಲ್ಲಿ ಶೃಂಗೇರಿಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ| ಸುಧಾಕರ್, ಉಸ್ತುವಾರಿ ಸಚಿವರಾದ ಎಸ್. ಅಂಗಾರ, ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ ಸಹಿತ ಅನೇಕ ಮುಖಂಡರಿಗೆ ಮನವಿ ನೀಡುತ್ತಲೇ ಬರಲಾಗಿದೆ. ತಾಲೂಕಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಅಗತ್ಯವಿರುವ ನಿವೇಶನ ಕೊರತೆ ಇರುವುದರಿಂದ 2019 ರಲ್ಲಿ ವೈಕುಂಠಪುರದಲ್ಲಿ 5 ಎಕರೆ ಜಾಗ ಗುರುತಿಸಲಾಗಿತ್ತು. ಸ್ಥಳದ ಮಂಜೂರಾತಿಗಾಗಿ ಅರಣ್ಯ ಇಲಾಖೆಯ ಅನುಮತಿ ಕೋರಲಾಗಿತ್ತು. ಇದುವರೆಗೂ ಸ್ಥಳ ಮಂಜೂರಾತಿಯಾಗದೇ ನೆನಗುದಿಗೆ ಬಿದ್ದಿದೆ. ಜನಪ್ರತಿನಿ ಧಿಗಳ ಇಚ್ಛಾಶಕ್ತಿ ಕೊರತೆಯಿಂದ ತಾಲೂಕಿಗೆ ಅಗತ್ಯವಿರುವ ಆಸ್ಪತ್ರೆ ನಿರ್ಮಾಣವಾಗದೆ ಜನ ಸಾಮಾನ್ಯರು ಪರದಾಡುತ್ತಿದ್ದಾರೆ. ಹಾಲಿ ಸಾರ್ವಜನಿಕ ಆಸ್ಪತ್ರೆ ಇರುವ ಜಾಗ ಒತ್ತುವರಿಯಾಗಿದ್ದು,ಮೇಲ್ದರ್ಜೆಗೆ ಏರಿಸಲು ಸ್ಥಳದ ಅಭಾವ ಇದೆ. ಈಗಾಗಲೇ ಇರುವ ಆಸ್ಪತ್ರೆ ಜಾಗದಲ್ಲಿ ವೈದ್ಯರ ಹಾಗೂ ಸಿಬ್ಬಂದಿಗೆ ವಸತಿ ಗೃಹದ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ.
ಬಂದ್‌ಗೆ ಜೆಡಿಎಸ್ ಬೆಂಬಲ: ಕಳಸಪ್ಪ
ತಾಲೂಕಿಗೆ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಒತ್ತಾಯಸಿ ಅ.22 ರಂದು ಕರೆ ನೀಡಿರುವ ಶೃಂಗೇರಿ ಬಂದ್‌ಗೆ ಜಾತ್ಯತೀತ ಜನತಾದಳ ಬೆಂಬಲಿಸುತ್ತದೆ ಎಂದು ಜೆಡಿಎಸ್ ಅಧ್ಯಕ್ಷ ಟಿ.ಟಿ. ಕಳಸಪ್ಪ ಹೇಳಿದರು.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಕೇಂದ್ರದಿಂದ ಎಲ್ಲಾ ಪ್ರಮುಖ ಆಸ್ಪತ್ರೆಗಳು 100 ಕಿಮೀ ದೂರವಿದ್ದು, ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಹಲವಾರು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ,ಇದುವರೆಗೂ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ದೊರಕಿಲ್ಲ. ಸರಕಾರ ತಕ್ಷಣ ಸೂಕ್ತ ಸ್ಥಳ ಗುರುತಿಸಿ,ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು. ಜೆಡಿಎಸ್ ಮುಖಂಡ ಡಾ| ಅಣ್ಣಾದೊರೆ ಮಾತನಾಡಿ, ಜನ ಸಾಮಾನ್ಯರು, ಮಧ್ಯಮ ವರ್ಗದ ಜನತೆಗೆ ಅನುಕೂಲವಾಗುತ್ತಿದ್ದ ರಾಜ್ಯ ಸರಕಾರದ ಯಶಸ್ವಿನಿ ಯೋಜನೆ ಮರು ಜಾರಿ ಮಾಡಬೇಕು ಎಂದರು. ಜೆಡಿಎಸ್ ವಕ್ತಾರ ಸುಂಕುರ್ಡಿ ವಿವೇಕಾನಂದ ಮಾತನಾಡಿ, ಇತ್ತೀಚೆಗೆ ಮಕ್ಕಿಮನೆ ಸೈಟಿನಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದು,ಉಳಿದಿರುವ ಮನೆಯ ಯಜಮಾನ ಸುಧಾಕರ ಮನೆ ಇಲ್ಲದ ಹಿನ್ನೆಲೆಯಲ್ಲಿ ಶಿಡ್ಲೆಯಲ್ಲಿ ಶೆಡ್ ನಿರ್ಮಿಸಿಕೊಂಡಿದ್ದು,ಅರಣ್ಯ ಇಲಾಖೆ ಸಿಬ್ಬಂದಿ ಶೆಡ್ ತೆರವುಗೊಳಿಸಿರುವುದನ್ನು ಜೆಡಿಎಸ್ ಖಂಡಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ದಿನೇಶ್ ಹೆಗ್ಡೆ, ಜಿ.ಜಿ. ಮಂಜುನಾಥ್ ಇದ್ದರು.