ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಣಿತ ಶಿಕ್ಷಕರೊಬ್ಬರು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಕಾರ್ಯ ನಿರ್ವಹಿಸುವ, ಮರ್ಸಿಡಿಸ್, ಆಡಿ, ಬಿಎಂಡಬ್ಲ್ಯೂನಂಥ ಕಾರುಗಳಲ್ಲಿರುವ ಐಶಾರಾಮಿ ಸೌಲಭ್ಯಗಳನ್ನು ಹೊಂದಿರುವ, ಆದರೆ, ಜನಸಾಮಾನ್ಯರ ಕೈಗೆಟಕುವ ಬೆಲೆಯಲ್ಲಿ ಸಿಗುವಂಥ ಕಾರೊಂದನ್ನು ತಯಾರಿಸಿದ್ದಾರೆ.
ಶ್ರೀನಗರದ ಬಿಲಾಲ್ ಅಹ್ಮದ್, ಇಂಥದ್ದೊಂದು ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ದಶಕದ ಹಿಂದೆ ತಾವು ಕಂಡಿದ್ದ ಈ ಕನಸನ್ನು ನನಸು ಮಾಡುವ ಸಲುವಾಗಿ ಸತತ 11 ವರ್ಷ ತಪಸ್ಸಿನಂತೆ ಕೆಲಸ ಮಾಡಿ ಈ ಕಾರನ್ನು ಸಿದ್ಧಗೊಳಿಸಿದ್ದಾರೆ.
ಈ ಕಾರಿನ ಮೇಲ್ಮೈನ ಎಲ್ಲಾ ಕಡೆಗಳಲ್ಲೂ ಸೌರಫಲಕಗಳಿವೆ. ಇದರ ಮೇಲೆ ಬಿದ್ದ ಸೂರ್ಯನ ಬೆಳಕನ್ನು ವಿದ್ಯುತ್ತನ್ನಾಗಿ ಪರಿವರ್ತಿಸಿ, ಗಾಡಿಗೆ ಚಾಲನಾ ಶಕ್ತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇನ್ನು, ಕಾರಿನ ಬಾಗಿಲುಗಳನ್ನು ಐಶಾರಾಮಿ ಕಾರುಗಳಲ್ಲಿರುವಂತೆ ಮೇಲಕ್ಕೆತ್ತಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಆಸನಗಳ ವ್ಯವಸ್ಥೆ, ತಂತ್ರಜ್ಞಾನ ಎಲ್ಲವೂ ಆಧುನಿಕವಾಗಿವೆ. ಕೇವಲ ಬಿಡಿಭಾಗಗಳನ್ನು ಬೇರೆಡೆಯಿಂದ ತಂದು ಸ್ಥಳೀಯವಾಗಿ ತಯಾರಿಸಿರುವುದರಿಂದ ಈ ಕಾರು 15 ಲಕ್ಷ ರೂ.ಗಳಲ್ಲಿ ತಯಾರಾಗಿದೆ.
ನನ್ನ 11 ವರ್ಷಗಳ ಈ ಪ್ರಯತ್ನದಲ್ಲಿ ಯಾರೂ ನನಗೆ ಹಣಕಾಸಿನ ನೆರವು ಕೊಡಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಈ ಕಾರು ತಯಾರಾಗುವುದು ಕೆಲವೊಮ್ಮೆ ನನೆಗುದಿಗೆ ಬಿದ್ದಿದ್ದೂ ಉಂಟು. ಕಡೆಗೂ ನನ್ನ ಕನಸಿನ ಕಾರು ಈಗ ಸಿದ್ಧವಾಗಿದೆ. – ಬಿಲಾಲ್ ಅಹ್ಮದ್, ಕಾರು ತಯಾರಕ