Advertisement

ಗೋಟಬಯಾ ಅಧ್ಯಕ್ಷ, ಮಹಿಂದಾ ಪ್ರಧಾನಿ ನಾಜೂಕಿನ ನಡೆ ಅಗತ್ಯ

11:54 PM Nov 20, 2019 | mahesh |

ನಿರೀಕ್ಷೆಯಂತೆಯೇ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸೆ ಕುಟುಂಬದ ಸದಸ್ಯ, ಗೋಟಬಯಾ ರಾಜಪಕ್ಸೆ ಜಯಭೇರಿ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ಈಗ ತಮ್ಮ ಸಹೋ ದರ ಮಹಿಂದ ರಾಜ ಪಕ್ಸೆಯನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಿ ದ್ದಾರೆ. ಮತ್ತೆ ಶ್ರೀಲಂಕಾ ಮೇಲಿನ ಹಿಡಿತ ರಾಜ ಪಕ್ಸೆ ಕುಟುಂಬಕ್ಕೆ ದಕ್ಕಿದೆ. ದ್ವೀಪರಾಷ್ಟ್ರ ರಾಜಕೀಯವಾಗಿ, ಸೈದ್ಧಾಂತಿಕವಾಗಿ ಸ್ಥಿತ್ಯಂತರದ ಮಹತ್ವದ ಕಾಲಘಟ್ಟದಲ್ಲಿದ್ದು, ಈ ಸಂದರ್ಭದಲ್ಲಿ ಕಡು ರಾಷ್ಟ್ರವಾದಿಯೂ, ಹಿಂಸೆಯ ಬಗ್ಗೆ ಒಲವು ಹೊಂದಿರುವವರು ಎಂಬ ಆರೋಪಕ್ಕೆ ಗುರಿಯಾಗಿರುವ ಗೋಟಬಯಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಳವಣಿಗೆಯನ್ನು ಭಾರತ ಸೇರಿದಂತೆ, ಇಡೀ ಜಗತ್ತು ಎಚ್ಚರಿಕೆಯಿಂದ ಗಮನಿಸುತ್ತಿದೆ.

Advertisement

ಮುಖ್ಯವಾಗಿ ಕಳೆದ ಏಪ್ರಿಲ್‌ನಲ್ಲಿ ಈಸ್ಟರ್‌ ಭಾನುವಾರದಂದು ಇಸ್ಲಾಮಿಕ್‌ ಭಯೋತ್ಪಾದಕರು ಚರ್ಚ್‌ಗಳ ಮೇಲೆ ದಾಳಿ ಮಾಡಿ 250ಕ್ಕೂ ಹೆಚ್ಚು ಮಂದಿಯನ್ನು ಸಾಯಿಸಿದ ಬಳಿಕ ಶ್ರೀಲಂಕಾದಲ್ಲಿ ಸಮುದಾಯಗಳ ನಡುವಿನ ಅಂತರ ಹೆಚ್ಚಿದೆ. ರಾಜಪಕ್ಸೆ ಸಹೋದರರು ಈ ಘಟನೆಯನ್ನು ಅಸ್ತ್ರವಾಗಿರಿಸಿಕೊಂಡು ಪ್ರಖರ ರಾಷ್ಟ್ರವಾದವನ್ನು ಪ್ರತಿಪಾದಿಸಲು ತೊಡಗಿದ್ದಾರೆ. ಹೀಗಾಗಿ ಗೋಟಬಯಾ-ಮಹಿಂದಾ ಅಧಿಕಾರದಲ್ಲಿ ಸಮುದಾಯಗಳ ನಡುವಿನ ಬಿಕ್ಕಟ್ಟು ಇನ್ನಷ್ಟು ಆಳವಾಗುವ ಭೀತಿ ಇದೆ. ಗೋಟಬಯಾ ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಚಾರ ಮಹತ್ವ ಪಡೆದಿತ್ತು.

ಇನ್ನು ಗೋಟಬಯಾ ಅವರ ತಮಿಳು ದ್ವೇಷವೂ ಜನಜನಿತ. ಗೋಟಬಯಾ ಶ್ರೀಲಂಕಾದ ರಕ್ಷಣಾ ಸಚಿವರಾಗಿದ್ದಾಗ ಎಲ್‌ಟಿಟಿಇ ಉಗ್ರರನ್ನು ಸಮರ್ಥವಾಗಿ ಮಟ್ಟ ಹಾಕಿದರು ಎನ್ನುವುದು ನಿಜ. ಆದರೆ ಇದೇ ವೇಳೆ ಸಾವಿರಾರು ಅಮಾಯಕ ತಮಿಳರು ಒಂದೋ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಇಲ್ಲವೇ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ತಮಿಳರ ವಿರುದ್ಧ ಅಂದು ನಡೆದ ಕಾರ್ಯಾ ಚರಣೆಯನ್ನು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಕಾನೂನಿನ ಮೇಲಾದ ಗಂಭೀರ ದಾಳಿ ಎಂಬುದಾಗಿ ವ್ಯಾಖ್ಯಾನಿಸಿರುವುದನ್ನು ನೆನಪಿಸಿಕೊಳ್ಳಬಹುದು. ಈ ದಾಳಿಯ ಮುಂಚೂಣಿಯಲ್ಲಿ ಇದ್ದವರು ಗೋಟಬಯಾ.

ಇದೆಲ್ಲ ದ್ವೀಪರಾಷ್ಟ್ರದ ಆಂತರಿಕ ವಿಚಾರಗಳಾದರೆ ರಾಜಪಕ್ಸೆ ಸಹೋದರರ ಚೀನ ಪ್ರೇಮ ನೆರೆ ರಾಷ್ಟ್ರಗಳಿಗೆಲ್ಲ ಗಂಡಾಂತರಕಾರಿ ಎಂಬ ಭೀತಿಯಿದೆ. ಮಹಿಂದ ರಾಜಪಕ್ಸೆ ಕಾಲದಲ್ಲಿ ಚೀನದ ಸಾಲದ ಸುಳಿಗೆ ಸಿಲುಕಿದ ಶ್ರೀಲಂಕ ಅನಂತರ ತನ್ನ ಆಯಕಟ್ಟಿನ ಹಂಬನ್‌ತೋಟ ಬಂದರನ್ನು ಚೀನಕ್ಕೆ ಅಡವಿಡಬೇಕಾಗಿ ಬಂದಿದೆ. ಜೊತೆಗೆ ಸುಮಾರು 15,000 ಎಕರೆ ಭೂಮಿಯನ್ನು ಬಿಟ್ಟುಕೊಟ್ಟಿದೆ. ಅಲ್ಲದೆ ಶ್ರೀಲಂಕದ ಹಲವು ಮೂಲಸೌಕರ್ಯ ಯೋಜನೆಗಳನ್ನು ಚೀನ ಅಭಿವೃದ್ಧಿಪಡಿಸುತ್ತಿದೆ. ಇದೀಗ ಮತ್ತೂಮ್ಮೆ ರಾಜಪಕ್ಸೆ ಕುಟುಂಬವೇ ದೇಶದ ಸಾರಥ್ಯ ವಹಿಸುವುದರಿಂದ ಶ್ರೀಲಂಕದಲ್ಲಿ ಚೀನದ ಪ್ರಭಾವ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಚೀನ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಿ ಮರು ಸ್ಥಾಪಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಗೋಟಬಯಾ-ಮಹಿಂದ ಬಹಿರಂಗವಾಗಿಯೇ ಹೇಳಿದ್ದರು. ಜಗತ್ತಿನ ಅತಿ ನಿಬಿಡ ಜಲಮಾರ್ಗದ ಪಕ್ಕದಲ್ಲಿ ಇರುವ ದೇಶ ಶ್ರೀಲಂಕ. ಅದು ಕೈಗೊಳ್ಳುವ ಯಾವುದೇ ಅಂತಾರಾಷ್ಟ್ರೀಯ ನಿರ್ಧಾರಗಳು ಭಾರತವೂ ಸೇರಿದಂತೆ ಹಲವು ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಅಂಶ ನಮಗೆ ಹೆಚ್ಚು ಮುಖ್ಯವಾಗುತ್ತದೆ. ಕೇಂದ್ರ ಸರಕಾರ ಈಗಾಗಲೇ ರಾಜಪಕ್ಸೆಯವರತ್ತ ಸ್ನೇಹದ ಹಸ್ತ ಚಾಚಿದೆ. ಅವರಿಗೆ ದಿಲ್ಲಿಗೆ ಅತಿಥಿಯಾಗಿ ಆಗಮಿಸಲು ಆಹ್ವಾನವನ್ನೂ ನೀಡಿದೆ. ಅಲ್ಲದೆ ಈಸ್ಟರ್‌ ದಾಳಿಯಾದ ಬಳಿಕ ಶ್ರೀಲಂಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯನ್ನು ಮಹಿಂದ ರಾಜಪಕ್ಸೆ ಭೇಟಿಯಾಗಿ ಭದ್ರತೆಯ ವಿಚಾರವಾಗಿ ಮಾತುಕತೆ ನಡೆಸಿದ್ದರು. ಶ್ರೀಲಂಕ ಚೀನದ ಕಪಿಮುಷ್ಟಿಯಲ್ಲಿದ್ದರೂ ಆ ದೇಶದ ಜೊತೆಗಿನ ನಮ್ಮ ಸ್ನೇಹ ಸಂಬಂಧ ಸಂಪೂರ್ಣ ಹದಗೆಟ್ಟಿಲ್ಲ ಎನ್ನುವುದು ಸಮಾಧಾನ ತರುವ ಅಂಶ.

ಈ ಸ್ನೇಹವನ್ನು ಉಪಯೋಗಿಸಿಕೊಂಡು ಶ್ರೀಲಂಕವನ್ನು ಮರಳಿ ಒಲಿಸಿಕೊಳ್ಳುವ ನೀತಿಯನ್ನು ಭಾರತ ಅನುಸರಿಸಬೇಕು. ಆರ್ಥಿಕ ಮತ್ತು ಭದ್ರತಾ ಸಹಕಾರವನ್ನು ಇನ್ನಷ್ಟು ಉತ್ತೇಜಿಸುವ ಮೂಲಕ ದ್ವೀಪರಾಷ್ಟ್ರ ಭಾರತವನ್ನು ಆದ್ಯತೆಯ ಮಿತ್ರನಾಗಿ ಪರಿಗಣಿಸುವ ವಾತಾವರಣವನ್ನು ಸೃಷ್ಟಿಸಬೇಕು. ಶ್ರೀಲಂಕದಲ್ಲಿ ಚೀನದ ಉಪಸ್ಥಿತಿ ಹೆಚ್ಚಿದಷ್ಟು ಅದರಿಂದ ಹೆಚ್ಚು ಅಪಾಯವಿರುವುದು ಭಾರತಕ್ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next