ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಭಾರೀ ಶಸ್ತ್ರಾಸ್ತ್ರಗಳ ವಶ ಹಾಗೂ ವಿಚಾರವಾದಿ ದಾಭೋಲ್ಕರ್ ಹತ್ಯೆ ಪ್ರಕರಣ ಸಂಬಂಧ ವಶಕ್ಕೆ ಪಡೆಯಲಾಗಿದ್ದ ಶಿವಸೇನೆಯ ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪಂಗಾರ್ಕರ್‌ರನ್ನು ಆ.28 ರವರೆಗೆ ಉಗ್ರ ನಿಗ್ರಹ ದಳ(ಎಟಿಎಸ್)ಕ್ಕೆ ಒಪ್ಪಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಪಡಾಲ್ಕರ್ ಆದೇಶ ಹೊರಡಿಸಿದ್ದಾರೆ. ಆ.10ರಂದು ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿದ್ದ ಮೂವರು ವಿಚಾರಣೆ ವೇಳೆ ಶ್ರೀಕಾಂತ್ ಹೆಸರನ್ನು ಬಾಯಿಬಿಟ್ಟಿದ್ದರು. ಅವರು ನೀಡಿದ್ದ ಸುಳಿವಿನ ಆಧಾರದಲ್ಲಿ ಶ್ರೀಕಾಂತ್‌ರನ್ನು ಭಾನುವಾರ ರಾತ್ರಿ ವಶಕ್ಕೆ ಪಡೆಯಲಾಗಿತ್ತು. ಈಗ ಎಲ್ಲ ಮೂವರೂ ಎಟಿಎಸ್ ವಶದಲ್ಲಿದ್ದಾರೆ ಎಂದು ಉಗ್ರ ನಿಗ್ರಹ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ, ಇವರು ಸ್ವಾತಂತ್ರ್ಯ ದಿನಾಚರಣೆ ಹಾಗೂ ಬಕ್ರೀದ್ ಹಬ್ಬದ ವೇಳೆ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.