Advertisement
ಕೋಟೇಶ್ವರದ ದಿ|ಕುಪ್ಪ ಐತಾಳ್ ಹಾಗು ಗಂಗಾ ಭಾಗೀರಥಿ ಯಮ್ಮನವರ ಪುತ್ರ ಶ್ರೀಧರ ಐತಾಳರು ಆಸುಪಾಸಿನ ಗ್ರಾಮಸ್ಥರಿಗೆಲ್ಲ ಹಾವು ಐತಾಳರೆಂದೇ ಪರಿಚಿತರು. ಕುಂದಾಪುರ ಹಾಗು ಬೈಂದೂರು ತಾಲೂಕಿನ ವಿವಿಧ ಗ್ರಾಮಗಳ ಮನೆ, ಅಂಗಡಿ ಹೀಗೆ ವಿವಿಧೆಡೆ ಕಾಣಿಸಿಕೊಳ್ಳುವ ವಿಷಪೂರಿತ ನಾಗರ ಹಾವು, ಕನ್ನಡಿ ಹಾವು ಹೀಗೆ ಯಾವುದೇ ಹಾವಿರಲಿ ಥಟ್ಟನೆ ಕರೆ ಹೋಗುವುದು ಐತಾಳರಿಗೆ. ಅಲ್ಲಿಗೆ ಆಗಮಿಸುವ ಐತಾಳರು ಹಾವಿರುವ ಜಾಗ ಗುರುತಿಸಿ ಚಾಕಚಕ್ಯತೆಯಿಂದ ಅವುಗಳನ್ನು ಹಿಡಿಯುತ್ತಾರೆ. ಅದನ್ನು ಕೊಡಪಾನವೊಂದಕ್ಕೆ ಹಾಕಿ ಬಾಯಿಕಟ್ಟಿ ಅರಣ್ಯ ಪ್ರದೇಶಕ್ಕೆ ಬಿಡುವ ಪರಿಪಾಠ ಹೊಂದಿದ್ದಾರೆ. ನಿತ್ಯ ಕನಿಷ್ಠ 3 -4 ನಾಗರಹಾವುಗಳನ್ನು ಹಿಡಿಯು ತ್ತಿರುವ ಐತಾಳರು ಈಗಾಗಲೇ 5 ಸಾವಿರ ಹಾವು ಹಿಡಿದಿದ್ದಾರೆ.
ಕರೆದಲ್ಲಿಗೆ ಕೋಲು ಹಿಡಿದು ಧಾವಿಸುವ ಐತಾಳರು ಹಾವು ಹಿಡಿಯಲು ಬಳಸುವುದು ಒಂದು ಕೋಲು ಮಾತ್ರ. ಹಾವು ಅಡಗಿ ರುವ ಜಾಗಕ್ಕೆ ಹೋಗಿ ಅದನ್ನು ಕಂಡೊ ಡನೆ ಕುಂದಾಪುರ ಕನ್ನಡದಲ್ಲಿ ಪ್ರೀತಿಯಿಂದ ಮಾತನಾಡಿಸುವ ಪರಿ ಎಂಥವರನ್ನೂ ಚಕಿತಗೊಳಿ ಸುತ್ತದೆ. ಕ್ಷಣಾರ್ಧದಲ್ಲಿ ಹಾವನ್ನು ಹಿಡಿಯುವ ಅವರ ಕೈಯಲ್ಲಿ ಗರುಡ ರೇಖೆ ಇದೆ ಎಂಬ ಜನರ ಭಾವನೆಗೆ ಅವರದ್ದು ನಗುವೇ ಉತ್ತರ. ದೂರದ ಸೋಮೇಶ್ವರ,ಬೆಳ್ವೆ, ಆರ್ಡಿ, ಮಡಾಮಕ್ಕಿ, ಬೈಂದೂರು, ಶಿರೂರು, ಕೊಲ್ಲೂರು, ಮುಂತಾದೆಡೆ ಹೋಗುತ್ತಾರೆ. ಕೇವಲ ಒಂದೋ ಎರಡೋ ಬಾರಿ ಹಾವಿನ ಕಡಿತದಿಂದ ಗಾಯಗೊಂಡಿದ್ದ ಅವರು ಸ್ವಯಂ ಔಷಧ ಪ್ರಯೋಗದಿಂದ ಗುಣಮುಖರಾಗಿದ್ದರು. ಹಾವು ಹಿಡಿಯು ವುದಕ್ಕೆ ನಿರ್ದಿಷ್ಟ ಶುಲ್ಕ ಬಯಸದ ಐತಾಳರು ಜನರು ಸಂತೋಷ ದಿಂದ ನೀಡುವ ಹಣವನ್ನಷ್ಟೇ ಪಡೆದು ತೃಪ್ತರಾಗುತ್ತಾರೆ.
Related Articles
ವಾಹನಗಳ ಚಕ್ರಕ್ಕೆ ಸಿಲುಕಿ ಅಥವಾ ಮುಂಗುಸಿಯಂತಹ ಪ್ರಾಣಿಗಳಿಂದ ದಾಳಿಗೊಳಗಾಗಿ ಗಾಯಗೊಂಡ ಹಾವುಗಳು ಕಂಡುಬಂದರೆ ಅವುಗಳನ್ನು ತಮ್ಮ ಮನೆಯ ಪ್ರತ್ಯೇಕ ಕೊಠಡಿಯಲ್ಲಿರಿಸಿ ಗಿಡಮೂಲಿಕೆಗಳನ್ನು ಬಳಸಿ ಶುಶ್ರೂಷೆ ಮಾಡಿ ಗುಣವಾದ ಮೇಲೆ ಬಿಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಹಾವುಗಳು ಮೃತಪಟ್ಟರೆ ವಿಧಿವಿಧಾನ ಪೂರೈಸಲು ಸಂಬಂಧಪಟ್ಟವರಿಗೆ ಹೇಳುತ್ತಾರೆ. ಚಿಕಿತ್ಸೆಗೆ ಸ್ಪಂದಿಸುವ ನಾಗರ ಹಾವಿಗೆ ನೀರು, ಮೊಟ್ಟೆ ಇನ್ನಿತರ ಆಹಾರವನ್ನು ನೀಡಿ ಅವುಗಳ ಮೈ ಸವರುವ ಪರಿ ಎಂಥವರನ್ನು ಮೈ ಜುಮ್ ಎನ್ನಿಸುತ್ತದೆ.
Advertisement
ಉರಗೋದ್ಯಾನದ ಆಶಯಸರಕಾರವು ಗ್ರಾಮೀಣ ಪ್ರದೇಶದ ಸರಕಾರಿ ಜಾಗದಲ್ಲಿ ಉರಗೋದ್ಯಾನಕ್ಕೆ ಅವಕಾಶ ನೀಡಿದಲ್ಲಿ ಅವುಗಳ ಸಂತತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಸೇವೆ ಮಾಡಲು ಸಿದ್ಧನಿದ್ದೇನೆ. ಆ ಮೂಲಕ ನಶಿಸುತ್ತಿರುವ ಸಂತತಿ ಉಳಿಸಲು ಬದ್ಧನಾಗಿದ್ದೇನೆ ಎಂದು ಹೇಳುತ್ತಾರೆ. ಶ್ರೀಧರ ಐತಾಳರ ಸಾಹಸ ಪ್ರವೃತ್ತಿಯು ನಶಿಸಿ ಹೋಗುತ್ತಿರುವ ಹಾವುಗಳ ಸಂತತಿಗೊಂದು ಪ್ರೇರಕ ಶಕ್ತಿ. ಅವರ ಉರಗೋದ್ಯಾನದ ಕನಸು ನನಸಾಗಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು.
-ಗಣೇಶ್ ಶೆಟ್ಟಿ ಮೊಳಹಳ್ಳಿ ಪರಿಸರಪ್ರೇಮಿ -ಡಾ| ಸುಧಾಕರ ನಂಬಿಯಾರ್