Advertisement

ಶ್ರೀದೇವಿ ಪುಣ್ಯಸ್ಮರಣೆ : ಬೊಗಸೆ ಕಂಗಳ ನಟಿ ಅಭಿಮಾನಿಗಳಿಗೆ ಆಘಾತ ನೀಡಿದ ದಿನವಿದು..!

12:19 PM Feb 24, 2021 | Team Udayavani |

ಭಾರತ ಚಲನಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರು. 80 – 90ರ ದಶಕದಲ್ಲಿ ಬಹು ಬೇಡಿಕೆಯ ಹಾಗೂ ಜನಪ್ರಿಯ ಮನಮೋಹಕ ನಟಿ ಶ್ರೀದೇವಿ. ಶ್ರೀದೇವಿಯವರ ನಟನೆಗೆ ಮನಸೋಲದವರಿಲ್ಲ. ಸಿನಿ ಪ್ರೇಮಿಗಳ ಹೃದಯಾಲಯದಲ್ಲಿ ಶ್ರೀದೇವಿ ಇಂದೂ ಸ್ಥಾನ ಪಡೆದಿದ್ದಾರೆ ಅಂದರೇ ಅದು ನಟನೆಯ ಹೆಚ್ಚುಗಾರಿಕೆ.

Advertisement

ಕನ್ನಡ ಸಿನೆಮಾಗಳೂ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನೆಮಾಗಳಲ್ಲಿ ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸಿದ ಶ್ರೀದೇವಿ ಎಷ್ಟೋ ಸಿನಿ ರಸಿಕರ ಪಾಲಿಗೆ ಇನ್ನೂ ಅಚ್ಚುಮೆಚ್ಚು ಮಾತ್ರವಲ್ಲ, ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆ ಕಾಲಮಾನದ ಸಿನಿರಂಗದ ಬ್ಯೂಟಿ ಕೂಡ ಹೌದು.

ಹಲವು ಸಿನೆಮಾಗಳ ನಿರ್ಮಾಪಕರೂ ತಮ್ಮನ್ನು ತಾವು ತೊಡಗಿಸಿಕೊಂಡ ಬೊಗಸೆ ಕಂಗಳ ನಟಿ ಶ್ರೀದೇವಿ, ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಗಿಟ್ಟಿಸಿಕೊಂಡಿದ್ದರು.

ಇಂದಿಗೂ ಶ್ರೀದೇವಿಯವರನ್ನು ಭಾರತೀಯ ಚಿತ್ರರಂಗದ “ಮೊದಲ ಮಹಿಳಾ ಸೂಪರ್ ಸ್ಟಾರ್” ಎಂದು ಪರಿಗಣಿಸಲಾಗುತ್ತದೆ ಎಂದರೇ ಅವರ ಮನೋಜ್ಞ ನಟನೆಯೇ ಅದಕ್ಕೆ ಮೂಲ ಕಾರಣ.

Advertisement

ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಸೇರಿದಂತೆ , ಫಿಲ್ಮ್‌ಫೇರ್ ಪ್ರಶಸ್ತಿಗಳು, ಫಿಲ್ಮ್‌ ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಮೂರು ಸೌತ್ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದ ಭಾರತೀಯ ಚಿತ್ರರಂಗದ ಮೇರು ನಟಿ.

ಓದಿ : ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಧಾನ ಸೌಧ ಚಲೋ

ಶ್ರೀದೇವಿ ಅವರು ಆಗಸ್ಟ್ 13, 1963ರಲ್ಲಿ ತಮಿಳುನಾಡಿನ ಶಿವಕಾಶಿ ಎಂಬಲ್ಲಿ ಅಯ್ಯಪ್ಪನ್ ಮತ್ತು  ರಾಜೇಶ್ವರಿ ದಂಪತಿಗಳ ಮಗಳಾಗಿ ಜನಿಸಿದರು.

ತಮ್ಮ ನಾಲ್ಕು ವರ್ಷವಿದ್ದಾಗಲೇ ಶ್ರೀದೇವಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1975ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದಿ ಚಲನಚಿತ್ರ ‘ಜೂಲಿ’ಯಲ್ಲಿಯೂ ಅವರು ಬಾಲನಟಿಯಾಗಿ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ ಭಕ್ತಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ರಜನೀಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ ಚಿತ್ರದಲ್ಲಿ ಅವರು ನಾಯಕಿಯಾಗಿಯೂ ಅಭಿನಯಿಸಿದ್ದರು.

ಮುಂದೆ ಶ್ರೀದೇವಿ ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಖ್ಯಾತ ಚಿತ್ರಗಳಾದ ಮೂಂಡ್ರು ಮುಡಿಚ್ಚು, ಪಡಿನಾರು ವಯದಿನಿಲೆ, ಸಿಗಪ್ಪು ರೋಜಾಕ್ಕಳ್, ಮೀನ್ಡುಂ ಕೋಕಿಲಾ, ಮೂನ್ರಾಂ ಪಿರೈ, ವರುಮಯಿನ್ ನಿರಂ ಸಿವಪ್ಪು, ಪ್ರೆಮಾಭಿಷೇಕಂ, ಆಖರೀ ಪೋರಾಟಂ, ಜಗದೇಕ ವೀರುಡು ಅತಿಲೋಕ ಸುಂದರಿ, ಕ್ಷಣಂ ಕ್ಷಣಂ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮತ್ತು ಜನಪ್ರಿಯತೆ ಎರಡರಲ್ಲೂ ತಾವೊಬ್ಬ ಮಹತ್ವದ ನಟಿ ಎಂದು ಸಾಬೀತು ಪಡಿಸಿದ್ದರು ಶ್ರೀದೇವಿ.

ಹಿಂದಿ ಚಿತ್ರರಂಗದಲ್ಲಿ ಸೊಲ್ವ ಸಾವನ್, ಹಿಮ್ಮತ್ ವಾಲಾ, ಮಾವಾಲಿ, ತೋಹ್ಫ, ಮಾಸ್ಟರ್ಜಿ, ಕರ್ಮ, ಮಿಸ್ಟರ್ ಇಂಡಿಯಾ, ವಕ್ತ್ ಕಿ ಆವಾಜ್, ಚಾಂದನಿ, ಸದ್ಮಾ, ನಗೀನ, ಚಾಲ್ ಬಾಜ್, ಲಮ್ಹೆ, ಖುದಾ ಗವಾಹ್, ಗುಮ್ರಾಹ್, ಲಾಡ್ಲಾ, ಜುದಾಯಿ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.

ಓದಿ :  ಹಲವು ದಾಖಲೆಗಳ ಸರದಾರ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣ

ಹಿರಿಯ ನಿರ್ಮಾಪಕ ಬೋನಿ ಕಫೂರ್ ಅವರನ್ನು ವರಿಸಿದ ಶ್ರೀದೇವಿ 1997ರ ನಂತರದಲ್ಲಿ ಸುಮಾರು ಹದಿನೈದು ವರ್ಷಗಳ ತನಕ ಅವರು ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ.

2012ರಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಎಂಬ ಯಶ ಚಿತ್ರದಲ್ಲಿ ತಮ್ಮ ಸುಂದರ ಅಭಿನಯದೊಂದಿಗೆ ಮೋಡಿ ಮಾಡಿ ಮತ್ತೊಮ್ಮೆ ತಾನೆಷ್ಟು ಪ್ರತಿಭಾವಂತೆ ಎಂದು ಜಗಜ್ಜಾಹೀರು ಮಾಡಿದ ಶ್ರೇಷ್ಠ ನಟಿ ಶ್ರೀದೇವಿ.

ಹಾಸ್ಯ, ಸಂವೇದನೆ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡ ಶ್ರೀದೇವಿ, ಪ್ರೇಕ್ಷಕರು ಮತ್ತು ವಿಮರ್ಶಕರ ಪಾಲಿಗೆ ಇಂದಿಗೂ  ಮೆಚ್ಚು ಎನ್ನುವುದರಲ್ಲಿ ಯಾವುದೇ ಸಂಶಯ ಪಡಬೇಕಾಗಿಲ್ಲ. ಮತ್ತು ಶ್ರೀದೇವಿಯವರಂತಹ ಅಪೂರ್ವ ಪಡಿಯಚ್ಚನ್ನು ಬಿಟ್ಟು ಹೋದ ಕಲಾವಿದೆಯರು ಭಾರತೀಯ ಚಿತ್ರರಂಗದಲ್ಲಿ ಬಹಳ ವಿರಳ ಅಂದರೇ ಖಂಡಿತಾ ತಪ್ಪಿಲ್ಲ.

ಬಹಳ ಪ್ರಮುಖವಾಗಿ ಶ್ರೀದೇವಿಯವರನ್ನು ಮಾಧ್ಯಮಗಳು “ಫ್ಯಾಷನ್ ಐಕಾನ್ “ಎಂದು ಗುರುತಿಸಿವೆ. ತಾವು ಧರಿಸುವ ಧಿರಿಸುಗಳ ಮೇಲೆ ಅಪಾರ ಅಭಿರುಚಿ ಹೊಂದಿದವರಾಗಿದ್ದರು ಶ್ರೀದೇವಿ.

2007 ರಲ್ಲಿ, ಹಾಯ್ ಬ್ಲಿಟ್ಜ್‌ ನ ಮುಖಪುಟದಲ್ಲಿ “ದಿ ಗಾಡೆಸ್ ರಿಟರ್ನ್ಸ್” ಎಂಬ ಟ್ಯಾಗ್‌ ಲೈನ್‌ ನೊಂದಿಗೆ ಅವರು ಕಾಣಿಸಿಕೊಂಡಿದ್ದರು. 2011 ರಲ್ಲಿ, ಅವರು ಮೇರಿ ಕ್ಲೇರ್, ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು ಮತ್ತು 2012 ರಲ್ಲಿ ಅವರು ಎಲ್’ ಓ ಫಿ ಸಿ ಯ ಲ್ ಮುಖಪುಟದಲ್ಲಿ, 2013 ರಲ್ಲಿ ವೋಗ್ ಮುಖಪುಟ ಸೇರಿ ಹಲವಾರು ಜಾಗತಿಕ ಮಟ್ಟದ ಫ್ಯಾಷನ್ ನಿಯತಕಾಲಿಕೆಗಳ ಮುಖಪುಟದಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಮೋಹಕ ನಟಿ ಶ್ರೀದೇವಿಯವರದ್ದು.

ಓದಿ : ತುಳು ಅಕಾಡೆಮಿ ಪ್ರಶಸ್ತಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ

ಶ್ರೀದೇವಿ 2015 ರಲ್ಲಿ ಸಿರೋಕ್ ಫಿಲ್ಮ್‌ಫೇರ್ ಗ್ಲಾಮರ್ ಮತ್ತು ಸ್ಟೈಲ್ ಪ್ರಶಸ್ತಿಗಳಲ್ಲಿ ‘ಅಲ್ಟಿಮೇಟ್ ದಿವಾ’ ಪ್ರಶಸ್ತಿಗಳನ್ನೊಳಗೊಂಡು ಚಿತ್ರರಂಗದಲ್ಲಿ ಪ್ರಸಿದ್ಧಿಗೆ ದ್ಯೋತಕವಾಗಿರುವ ಹಲವು ರೀತಿಯ ನೂರಾರು ಪ್ರಶಸ್ತಿಗಳನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಶ್ರೀದೇವಿ ತಮ್ಮುಡಿಗೇರಿಸಿಕೊಂಡಿದ್ದರು. ಹಾಗೂ 2013 ರಲ್ಲಿ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಅಂದಿನ ಕೇಂದ್ರ ಸರ್ಕಾರ ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಬೊಗಸೆ ಕಂಗಳ ಚೆಲುವೆ, ಭಾರತೀಯ ಚಿತ್ರ ರಂಗದ ಮೇರು ನಟಿ ಶ್ರೀದೇವಿ ಇಹಲೋಕ ತ್ಯಜಿಸಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ. ಎರಡು ವರ್ಷಗಳ ಹಿಂದೆ ಶ್ರೀದೇವಿಯವರ ಸಹಸ್ರ ಸಹಸ್ರ ಅಭಿಮಾನಿಗಳು ಇಂತಹದ್ದೊಂದು ದುರಂತ ಘಟನೆ ಸಂಭವಿಸುತ್ತದೆ ಎಂದು ಊಹಿಸಿರಲೇ ಇಲ್ಲ. ಶ್ರೀದೇವಿಯವರ ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದವರು ಮರಳಿ ತವರಿಗೆ ಬರಲೇ ಇಲ್ಲ. ಅಂದು ಇಡೀ ಭಾರತೀಯ ಚಿತ್ರರಂಗ ಶ್ರೀದೇವಿಯವರ ಸಾವಿನ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿತ್ತು.

ಇಂದು ಅವರ ಪುಣ್ಯ ಸ್ಮರಣೆ. ಅಭಿಮಾನಿಗಳ ಹೃದಯದಲ್ಲಿ ಶ್ರೀದೇವಿಯವರ ಸಾವಿನ ಆ ನೋವು ಇನ್ನೂ ಒಣಗಲಿಲ್ಲ. ಭಾರತೀಯ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟವಾದ ದಿನವಿದು. ಶ್ರೀದೇವಿಯವರ ಆತ್ಮಕ್ಕೆ ಚಿರಶಾಂತಿ ಕೋರುವ. ಅವರ ಪಡಿಯಚ್ಚುಗಳು ಯುವ ನಟ ನಟಿಯರಿಗೆ ಆದರ್ಶವಾಗಲಿ ಎಂದು ಪ್ರಾರ್ಥಿಸೋಣ.

ಸಂಗ್ರಹ ಬರಹ :  ಶ್ರೀರಾಜ್ ವಕ್ವಾಡಿ

ಓದಿ : ಉತ್ತರ, ದಕ್ಷಿಣ ಭಾರತವನ್ನು ವಿಭಜಿಸುತ್ತಿದ್ದಾರೆ : ರಾಹುಲ್ ವಿರುದ್ಧ ಬಿಜೆಪಿ ನಾಯಕರ ಆರೋಪ..!

Advertisement

Udayavani is now on Telegram. Click here to join our channel and stay updated with the latest news.

Next