Advertisement
ಮೊದಲ ದಿನ ಜು.21ರಂದು ಉದ್ಘಾಟನಾ ಪೂರ್ವದಲ್ಲಿ ಹಿರಿಯ ಕಲಾವಿದರಿಂದ ತಾಳಮದ್ದಳೆ “ದಿಗ್ವಿಜಯ’ (ತಾಮ್ರಧ್ವಜ ಕಾಳಗ) ಸಂಪನ್ನಗೊಂಡಿತು. ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆ, ಸಾಥಿಗಳಾಗಿ ವಿನಯ ಆಚಾರ್, ದಯಾನಂದ ಮಿಜಾರ್ ಅನುಕೂಲಿಗಳಾದರು. ಸೀಮಿತ ಅವಧಿಯ ತಾಳಮದ್ದಳೆ ಯಾದರೂ ಗುಣಮಟ್ಟದಲ್ಲಿ ಮೇಲಾದ ಪ್ರದರ್ಶನ. ಮಯೂರಧ್ವಜ (ಉಮಾಕಾಂತ ಭಟ್), ಶ್ರೀಕೃಷ್ಣ (ಕುಂಬಳೆ ಸುಂದರ ರಾವ್ ಮತ್ತು ಮೂಡಂಬೈಲು ಗೋಪಾಲಕೃಷ್ಣ ಶಾಸಿŒ), ತಾಮ್ರಧ್ವಜ (ಶಂಭು ಶರ್ಮ), ಅರ್ಜುನ (ಸರ್ಪಂಗಳ ಈಶ್ವರ ಭಟ್) ತಮ್ಮ ಅನುಭವ ವನ್ನು ಕೆಲವೇ ಮಾತುಗಳಿಗೆ ಸೀಮಿತಗೊಳಿಸಿಯೂ ಪ್ರೌಢಮಟ್ಟವನ್ನು ಉಳಿಸಿದರು. ಅಶ್ವಮೇಧ ಯಜ್ಞದ ಕುರಿತು ಉಮಾಕಾಂತ ಭಟ್ಟರು ನೀಡಿದ ಮಾಹಿತಿ, ಶಾಸಿŒಗಳ ಪುರಾಣ ವಿವರ ಸಂಗ್ರಾಹ್ಯ ವಿಚಾರ.
ಎರಡನೇ ದಿನದ ಮೊದಲ ಕಾರ್ಯಕ್ರಮ ಹಾಸ್ಯ ಕಲಾವಿದ ರಿಂದ “ಚೂಡಮಣಿ ವಿವಾಹ’. ಇದು ಅಮೃತ ಸೋಮೇಶ್ವರರ “ಅಮರೇಂದ್ರ ಪದವಿಜಯ’ ಪ್ರಸಂಗದ ಒಂದು ಭಾಗ. ಇಲ್ಲೊಂದು ವಿಶೇಷ, ಭಾಗವತರಲ್ಲದ ಅಡೂರು ಗಣೇಶ್ ರಾವ್, ಪದ್ಮನಾಭ ಉಪಾಧ್ಯ ಭಾಗವತರಾಗಿದ್ದರು. ಸ್ತ್ರೀವೇಷ ಕಲಾವಿದರು ಹಾಸ್ಯಗಾರ ರಾಗಿದ್ದು, ಪುರುಷ ವೇಷಧಾರಿಗಳು ಸ್ತ್ರೀ ಪಾತ್ರ ಮಾಡಿದರು. ಕೊನೆಗೂ ಚೂಡಮಣಿಗೆ ವಿವಾಹ ಆಗಲೇ ಇಲ್ಲ! ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟರು ಪ್ರಧಾನ ಭೂಮಿಕೆಯಲ್ಲಿದ್ದು, ತುಳು ಹಾಸ್ಯ ಕಲಾವಿದರಾದ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಯಕ್ಷಗಾನ ಕಲಾವಿದರಾಗಿ ಭಾಗವಹಿಸಿದರು. ಗಂಭೀರ ಭಾಗದಲ್ಲಿ ಯಕ್ಷಗಾನದ ಬಿಗು ಕಾಣಿಸಿದರೂ ಕಥೆಯ ಹೆಚ್ಚಿನ ಭಾಗ ತುಳು ನಾಟಕದತ್ತ ಜಾರುತ್ತಿತ್ತು. ತುಳು ಭಾಷೆಯನ್ನು ಪೌರಾಣಿಕ ಯಕ್ಷಗಾನಕ್ಕೆ ತರುವಲ್ಲಿ ಬಹುತೇಕ ಕಲಾವಿದರು ಯಶಸ್ವಿಯಾಗಲಿಲ್ಲ ಎಂಬುದಕ್ಕಿಂತ ಪ್ರಯತ್ನಿಸಲಿಲ್ಲ ಎಂಬುದೇ ಸರಿ.
Related Articles
Advertisement
ಮೂರನೇ ದಿನ, ಜುಲೈ 23ರಂದು ಇಡೀ ದಿನದ ಕಾರ್ಯಕ್ರಮ ಅದ್ದೂರಿ ಯಾಗಿ, ಆಕರ್ಷಣೀಯವಾಗಿ ದೇವಾನಂದ ಭಟ್ಟರಿಂದ ಸಂಯೋಜಿತವಾದದ್ದು ವಿಶೇಷವಾಗಿತ್ತು. ಬೆಳಗಿನ ಕಾರ್ಯಕ್ರಮ “ಯಕ್ಷಗಾಯನ-ವಾದನಗೋಷ್ಠಿ’. ಮೈಸೂರು ನಾರಾಯಣ ಸ್ವಾಮಿಯವರ ವಯಲಿನ್‌ನಿಂದ ಮೊದಲ್ಗೊಂಡು, ಪಟ್ಲ ಸತೀಶ ಶೆಟ್ಟರ ಭಾಗವತಿಕೆ ಮುಂತಾಗಿ ಇಪ್ಪತ್ತು ಕಲಾವಿದರು ಸುಮಾರು ನಾಲ್ಕು ಗಂಟೆಗಳಲ್ಲಿ ಕಾರ್ಯಕ್ರಮವಿತ್ತರು. ತೆಂಕು- ಬಡಗು ಭಾಗವತಿಕೆ, ಎರಡು ತಿಟ್ಟಿನಲ್ಲಿ ಏಳೇಳು ಚೆಂಡೆಗಳ ಅಬ್ಬರ, ಕೊಳಲು, ವಯಲಿನ್, ತಬಲ, ಮದ್ದಲೆ, ರಿದಂಪ್ಯಾಡ್, ಗಿಟಾರ್, ಚಕ್ರತಾಳ ಮುಂತಾದ ವಾದ್ಯಗಳು ಝೇಂಕರಿಸಿದವು. ವಾದ್ಯಗಳ ಬಳಕೆಯ ನಡುವೆ ಯಕ್ಷಗಾನದ ಪದ್ಯಗಳನ್ನು ಕೇಳಲು ಸುಖವಾದರೂ ವಾದ್ಯಗಳ ಮೆರೆದಾಟದಲ್ಲಿ ಪದ್ಯಗಳು ಹಿಂದೆ ಬಿದ್ದವೋ ಎಂಬ ಹಾಗೆ ನಡೆಯಿತು. ಕದ್ರಿ ನವನೀತ ಶೆಟ್ಟರ ನಿರ್ವಹಣೆ, ನಡುವೆ ಯಕ್ಷ ರಸಪ್ರಶ್ನೆಯ ಒಗ್ಗರಣೆಯೂ ರಂಜಿಸಿತು.
ಅಪರಾಹ್ನದ ಕಾರ್ಯಕ್ರಮವಾಗಿ ಈ ವೇದಿಕೆಯಲ್ಲಿ ಹರಿಕಥಾ ಕಲಾಕ್ಷೇಪಕ್ಕೂ ಅವಕಾಶ ನೀಡಿ ಪ್ರೋತ್ಸಾಹಿಸುವ ಉದ್ದೇಶ ಹೊಂದಿ ಅಭಿಲಾಷಾ ಶೆಟ್ಟಿ ಕೊಪ್ಪ ಇವರಿಂದ ವೀರ ಅಭಿಮನ್ಯು ಪ್ರಸ್ತುತಿಗೊಂಡಿತ್ತು.ಅಪರಾಹ್ನದ ಎರಡನೇ ಕಾರ್ಯಕ್ರಮ “ಯಕ್ಷಗಾನ ರಂಗಾಂತರಂಗ’. ಇದು ಯಕ್ಷಗಾನದಲ್ಲಿ ಈಗ ಬಿಟ್ಟುಹೋಗುತ್ತಿರುವ ರಂಗ ನಡೆಗಳನ್ನು ಸೂಚಿಸುವ ಕೆಲವು ದೃಶ್ಯಗಳನ್ನು ತೋರಿಸುವ ಕಾರ್ಯಕ್ರಮ. ಆಯ್ದುಕೊಂಡ ಕಥಾಭಾಗ ಕಿರಾತಾರ್ಜುನ, ರಾವಣ-ಮೈರಾವಣ, ದಾಕ್ಷಾಯಣಿ ದಹನ. ಸುಮಾರು ಇಪ್ಪತ್ತರಷ್ಟು ಕಲಾವಿದರು ಭಾಗವಹಿಸಿದ್ದರು. ಸಮಾರೋಪ ಸಮಾರಂಭ ಸಂಸದರಾದ ನಳಿನ್ ಕುಮಾರ್ ಕಟೀಲು ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ವೆ| ಮೂ| ಹರಿನಾರಾಯಣದಾಸ ಆಸ್ರಣ್ಣರು, ಡಾ| ಎಂ. ಪ್ರಭಾಕರ ಜೋಶಿ ಯಕ್ಷಗಾನ ಅದರ ಸಂಘಟನೆ ಮತ್ತು ಮಹತ್ವಗಳ ಕುರಿತು ಮಾತನಾಡಿ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ ವೈವಿಧ್ಯಪೂರ್ಣ ನಡೆಗಳನ್ನು ಮೆಚ್ಚಿ ಅರ್ಥಪೂರ್ಣ ಮಾತುಗಳಿಂದ ಹಾರೈಸಿದರು. ಅನಂತರ ಸುಮಾರು 30 ಕಲಾವಿದರ ಸಹಯೋಗದೊಂದಿಗೆ “ರಾಮಾಂಜನೇಯ – ಪುರುಷಾಮೃಗ’ ಎಂಬ ಎರಡು ಅಖ್ಯಾನಗಳ ಬಯಲಾಟ ನಡೆಯಿತು. ಇದು ಪ್ರಸಿದ್ಧ ಬಡಗು -ತೆಂಕು ಕಲಾವಿದರ ಕೂಡಾಟವಾಗಿತ್ತು. ಪೈವಳಿಕೆಯ ಗಣೇಶ ಕಲಾವೃಂದದವರ ವೇಷಭೂಷಣ, ಆರ್.ಕೆ. ಎಂಟರ್‌ಪ್ರೈಸಸ್‌ನವರ ಧ್ವನಿ ಬೆಳಕು, ರಂಗಸಜ್ಜಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ವಲಯದ ಸಹಕಾರ, ದಾನಿಗಳ ಹರಕೆ, ಕಲಾಸಕ್ತ ಪ್ರೇಕ್ಷಕರ ತುಂಬಿದ ಸಭೆಯ ಸಹಕಾರ ಎಲ್ಲದಕ್ಕೂ ಕಳಸವಿದ್ದಂತೆ. ಗೌರಾವಾಧ್ಯಕ್ಷ ಕೆ. ಶ್ರೀಪತಿ ಭಟ್, ಧನಲಕ್ಷ್ಮೀ ಕ್ಯಾಶ್ಯೂ ಸಮೂಹ ಸಂಸ್ಥೆಯ ಪೂರ್ಣ ಸಹಕಾರ ಮತ್ತು ದೇವಾನಂದ ಭಟ್ಟರ ಶ್ರೀ ಯಕ್ಷದೇವ ಮಿತ್ರರೆಂಬ ಶಿಸ್ತಿನ ಒಕ್ಕೂಟ ಎಲ್ಲವೂ ಅಚ್ಚುಕಟ್ಟು, ಸುಂದರ, ಕಾಲದ ಕುರಿತು ಎಚ್ಚರಿಕೆಯ ನಿರ್ವಹಣೆ ಎಲ್ಲ ಚಂದವಾಯಿತು. ಸುಮಾರು ನೂರೈವತ್ತು ಕಲಾವಿದರನ್ನು ಮೂರು ದಿವಸಗಳಲ್ಲಿ ಏಕತ್ರಗೊಳಿಸಿದ ಸಾಧನೆಯೂ ಸಣ್ಣದಲ್ಲ. ಶ್ರೀಧರ ಡಿ. ಎಸ್.