ಉಡುಪಿ: ಪೇಜಾವರ ಮಠದ ಅಂಗಸಂಸ್ಥೆ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್‌ನ ನೂತನ ವಿಸ್ತೃತ ಕಟ್ಟಡ “ಶ್ರೀವಿಶ್ವೇಶತೀರ್ಥ ಸೇವಾಧಾಮ’ದ ಉದ್ಘಾಟನೆಯನ್ನು ಶನಿವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೆರವೇರಿಸಿದರು.
ಪೇಜಾವರ ಹಿರಿಯ ಶ್ರೀಗಳು ಹಿಂದೂ ಸಮಾಜದ ಏಕತೆ, ಅಭಿವೃದ್ಧಿಗೆ ಜೀವನ ಪರ್ಯಂತ ತಮ್ಮನ್ನು ಸಮರ್ಪಿಸಿ ಕೊಂಡವರು. ಯಾವುದೇ ಮಕ್ಕಳು ಅನಾಥ ರಾಗಿರುವುದಿಲ್ಲ, ಅವಕಾಶ ವಂಚಿತರಷ್ಟೇ ಆಗಿರುತ್ತಾರೆ. ಅಂತಹ ಮಕ್ಕಳಿಗೆ ಶೈಕ್ಷಣಿಕ ಬದುಕಿನ ಅವಕಾಶ ನೀಡಿ “ನರ ಸೇವೆಯೆ ನಾರಾಯಣ ಸೇವೆ’ ಎಂಬುದನ್ನು ಬಾಲ ನಿಕೇತನ ಸಾಕಾರಗೊಳಿಸಿದೆ. ಜತೆಗೆ ಪ್ರಧಾನಿ ಮೋದಿ ಮಹಿಳಾ ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸಲು ಜಾರಿಗೆ ತಂದಿ ರುವ ಚೈಲ್ಡ್‌ಲೈನ್ ಯೋಜನೆ ಇಲ್ಲಿ ನಿರ್ವಹಿಸಲ್ಪ ಡುತ್ತಿರುವುದು ಶ್ಲಾಘನೀಯ ಎಂದರು.
ಪೋಷಕರಿಲ್ಲದ ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗಬಾರದು. ಶೋಷಿತ ಮಕ್ಕಳಾ ಗದೆ ಸಮಾಜದ ಆಸ್ತಿ ಆಗಬೇಕು ಎಂಬ ಆಶಯದಲ್ಲಿ ಗುರುಗಳು ಶ್ರೀ ಕೃಷ್ಣ ಬಾಲ ನಿಕೇತನ ಹುಟ್ಟು ಹಾಕಿದರು. ಸಮಾಜದ ಎಲ್ಲರ ಸಹಕಾರ ಸಂಸ್ಥೆಯ ಮೇಲಿರಲಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾರೈಸಿ ದರು.
ಶಿಕ್ಷಣ ಎಲ್ಲೆಡೆ ಸಿಗುತ್ತದೆ. ಉತ್ತಮ ಸಂಸ್ಕಾರ, ನೈತಿಕ ಶಿಕ್ಷಣ ಈ ರೀತಿಯ ಶೈಕ್ಷಣಿಕ ಕೇಂದ್ರಗಳಲ್ಲಿ ಮಾತ್ರ ಸಾಧ್ಯ. ಎಲ್ಲ ಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮೆಚ್ಚುಗೆ ಸೂಚಿಸಿದರು.
ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸಂಸ್ಥೆಯ ಉಪಾಧ್ಯಕ್ಷ ಪ್ರೊ| ಕಮಲಾಕ್ಷ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಲಕ್ಷ್ಮೀ ನಾರಾಯಣನ್ ಉಪಸ್ಥಿತರಿದ್ದರು. ಟ್ರಸ್ಟಿ ರಾಮಚಂದ್ರ ರಾವ್ ಸ್ವಾಗತಿಸಿ ಶ್ಯಾಮಲಾ ಪ್ರಸಾದ್ ನಿರೂಪಿಸಿದರು.