Advertisement

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

01:19 AM Jan 25, 2022 | Team Udayavani |

ಉಡುಪಿ: ಅದಮಾರು ಮಠದ ವ್ಯವಹಾರವನ್ನು ಕಿರಿಯ ಪಟ್ಟದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಈ ಹಿಂದೆಯೇ ಬಿಟ್ಟು ಕೊಟ್ಟಿದ್ದ ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಈಗ ಅದಮಾರು ಮಠದ ಶಿಕ್ಷಣ ಮಂಡಳಿಯ ಅಧ್ಯಕ್ಷತೆಯನ್ನು ಬಿಟ್ಟುಕೊಟ್ಟಿದ್ದಾರೆ.

Advertisement

ಶ್ರೀಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಜ. 18ರಂದುಮುಗಿಯುತ್ತಿದ್ದಂತೆ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿ ನಡೆದ ಮಂಡಳಿಯ ಪದಾಧಿಕಾರಿಗಳು, ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಪ್ರಮುಖರು, ಮುಖ್ಯ ಶಿಕ್ಷಕರು, ಪ್ರಾಂಶುಪಾಲರ ಸಭೆಯಲ್ಲಿ ಕಿರಿಯ ಶ್ರೀಗಳು ಮುಂದೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆಂದು ಪ್ರಕಟಿಸಿದರು. ಕಾನೂನಾತ್ಮಕವಾಗಿ 10-15 ದಿನಗಳಲ್ಲಿ ಅಧಿಕೃತವಾಗಿ ಪ್ರಕಟವಾಗಲಿದೆ.

ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ವಿಬುಧೇಶತೀರ್ಥ ಶ್ರೀಪಾದರು 2009ರಲ್ಲಿ ನಿರ್ಯಾಣ ಹೊಂದಿದ ಬಳಿಕ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷರಾಗಿದ್ದರು. ಗುರುಗಳು ಕಾಲವಾಗುವಾಗ ದಿಲ್ಲಿ, ಮುಂಬಯಿ, ಬೆಂಗಳೂರು, ಭದ್ರಾವತಿ, ಸಂಗಮೇಶ್ವರಪೇಟೆ ಮೊದಲಾದೆಡೆ 24 ಸಂಸ್ಥೆಗಳಿದ್ದವು. ಶ್ರೀ ವಿಶ್ವಪ್ರಿಯತೀರ್ಥರ 11 ವರ್ಷಗಳ ಅಧ್ಯಕ್ಷತೆಯಲ್ಲಿ ಅದಮಾರಿನ ವಿದ್ಯಾರ್ಥಿನಿಲಯ, ನರ್ಸಿಂಗ್‌ನಿಂದ ಪ್ರೌಢಶಾಲೆ ವರೆಗೆ ಆಂಗ್ಲ ಮಾಧ್ಯಮ ಶಾಲೆ, ಆಲ್ದೂರಿನಲ್ಲಿ ಪ್ರೌಢಶಾಲೆ ಹೀಗೆ ಹೊಸ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಒಟ್ಟು ಸಂಸ್ಥೆಗಳ ಸಂಖ್ಯೆ 40ಕ್ಕೇರಿದೆ.
ಶಿಷ್ಯ ಶ್ರೀ ಈಶಪ್ರಿಯತೀರ್ಥರು ಎಂಜಿನಿಯರಿಂಗ್‌ ಶಿಕ್ಷಣ ಪಡೆದಕಾರಣ ಲೌಕಿಕ ಶಿಕ್ಷಣದ ಜ್ಞಾನವಿದೆ.

ಪರ್ಯಾಯ ಕೂರುವ ಮುನ್ನ ಮಠದ ಆಡಳಿತವನ್ನು ಕೊಡು ವಾ ಗಲೇ ಶಿಷ್ಯರಿಗೆ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಯನ್ನೂ ಕೊಡಬೇಕೆಂದಿದ್ದೆ. ಅವರು ಒಪ್ಪದಿದ್ದ ಕಾರಣ ಈಗ ಕೊಟ್ಟಿದ್ದೇವೆ ಎಂದು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.

1958ರಲ್ಲಿ ಜನಿಸಿದ ಶ್ರೀ ವಿಶ್ವಪ್ರಿಯತೀರ್ಥರು 1972ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದ್ದರು. ಈಗ 64 ವರ್ಷ. 1985ರಲ್ಲಿ ಜನಿಸಿದ ಶ್ರೀ ಈಶಪ್ರಿಯತೀರ್ಥರು 2014ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿ ಒಂದು ಪರ್ಯಾಯ ಪೂಜೆಯನ್ನು ಈಗಷ್ಟೇ ಮುಗಿಸಿದ್ದಾರೆ. ಇವರಿಗೆ ಈಗ 36 ವರ್ಷ.

Advertisement

ಇನ್ನು ಏಕಾಂತ ಸಾಧನೆ
ಅದಮಾರು ಮಠದ ಪಟ್ಟದ ದೇವರನ್ನು ಶ್ರೀ ವಿಶ್ವಪ್ರಿಯತೀರ್ಥರು ಪರ್ಯಾಯಕ್ಕೆ ಮುನ್ನವೇ ಶ್ರೀ ಈಶಪ್ರಿಯತೀರ್ಥರಿಗೆ ಕೊಟ್ಟಿದ್ದಾರೆ. ನಿತ್ಯದ ಪೂಜೆಗಾಗಿ ಮಧ್ವಾಚಾರ್ಯರು ಪೂಜಿಸುತ್ತಿದ್ದ ಅಷ್ಟಭುಜಲಕ್ಷ್ಮೀನಾರಾಯಣ ವಿಗ್ರಹವನ್ನು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಪಡೆದುಕೊಂಡಿದ್ದಾರೆ. ಮುಂದೆ ಮಠದ ವ್ಯವಹಾರಕ್ಕಾಗಿ ಉಡುಪಿಗೆ ಬರುವುದು ಕಡಿಮೆ, ಬಂದಾಗ ಶ್ರೀಕೃಷ್ಣಮಠದಲ್ಲಿ ಪೂಜೆ ಮಾಡುತ್ತಾರೆ. ಮುಂದಿನ ಕೆಲವು ತಿಂಗಳು ಮಣಿಪುರದ ಶಾಖಾ ಮಠದಲ್ಲಿ, ಅನಂತರ ಕೆಲವು ತಿಂಗಳು ಕುಂಜಾರು ದೇವಸ್ಥಾನ, ಅನಂತರ ಹರಿದ್ವಾರದಲ್ಲಿರುವ ಪಲಿಮಾರು ಮಠ ಹೀಗೆ ವಿವಿಧೆಡೆ ಇದ್ದು ಸಾರ್ವಜನಿಕರ ಸಂಪರ್ಕವಿಲ್ಲದೆ ಜಪತಪದ ಮೂಲಕ ಸಾಧನೆ ಮಾಡುವ ಸಂಕಲ್ಪ ಮಾಡಿದ್ದಾರೆ. ಇವರು 16 ವರ್ಷಗಳ ಹಿಂದೆ 2ನೇ ಪರ್ಯಾಯ ಮುಗಿದ ಬಳಿಕ ಮಣಿಪುರ ಶಾಖಾ ಮಠದಲ್ಲಿ ನಾಲ್ಕು ತಿಂಗಳು ಅನ್ನಾಹಾರ ತ್ಯಜಿಸಿ ಹಣ್ಣು ಹಾಲು ಸೇವಿಸಿ ಮೌನವ್ರತ ಕೈಗೊಂಡಿದ್ದರು.

ಕರ್ಮಣ್ಯೇವಾಧಿಕಾರಸ್ತೇ..
ಮೊನ್ನೆಯಷ್ಟೇ ಜವಾಬ್ದಾರಿಯನ್ನು ಗುರುಗಳು ಕೊಟ್ಟಿದ್ದಾರೆ. ಗೀತೆಯಲ್ಲಿ ಶ್ರೀಕೃಷ್ಣ “ಕರ್ಮಣ್ಯೇವಾಧಿಕಾರಸ್ತೇ ಮಾ ಫ‌ಲೇಷು ಕದಾಚನ’ ಹೇಳಿದಂತೆ ಫ‌ಲ ನಿರೀಕ್ಷಿಸದೆ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಲ್ಲಿ ಅಧ್ಯಯನವಿನ್ನೂ ಮುಗಿದಿಲ್ಲ. ಅಧ್ಯಯನಕ್ಕೆ ಗ್ರಂಥಗಳು ಸಮುದ್ರದಷ್ಟಿವೆ. ಅದರ ಜತೆ ಶಿಕ್ಷಣ ಸಂಸ್ಥೆಗಳಂತಹ ಇತರ ಜವಾಬ್ದಾರಿಗಳನ್ನೂ ನಿರ್ವಹಿಸಬೇಕಾಗಿದೆ. ಸದ್ಯ ಬೆಂಗಳೂರಿನಲ್ಲಿ ಮೂರು ದಿನವಿದ್ದು ಸಂಸ್ಥೆಗಳ ಕುರಿತು ತಿಳಿದುಕೊಳ್ಳುತ್ತಿದ್ದೇವೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next