ಪ್ರತಿ ದಿವಸವೂ ಬೆಳಗ್ಗೆ ಧ್ಯಾನ, ಜಪ, ಸ್ತೋತ್ರ, ಪೂಜೆ ಈ ನಾಲ್ಕರ ಪೈಕಿ ಒಂದನ್ನಾದರೂ ಮಾಡಬೇಕು. ಧ್ಯಾನವೆಂದರೆ, ಏಕಾಗ್ರತೆಯಿಂದ ದೇವರನ್ನು ಗಮನಿಸುವುದು. ನಮ್ಮ ಶರೀರದ ಒಳಗೇ ಇರುವ ದೇವರನ್ನು ಗಮನಿಸುವುದು. ಜಪವು, ಮಂತ್ರದ ಮೂಲಕ ದೇವರನ್ನು ಗಮನಿಸುವ ಕೆಲಸವನ್ನು ಮಾಡುತ್ತದೆ.
ಮಂತ್ರ ಎಂದರೆ, ಭಗವಂತನನ್ನು ನೆನಪಿಸುವ ಶಬ್ದ. ಶಬ್ದದ ಸ್ವಭಾವವೇನೆಂದರೆ, ಅದರ ಅರ್ಥದ ಕಡೆ ನಮ್ಮ ಗಮನವನ್ನು ಸೆಳೆದೊಯ್ಯುತ್ತದೆ. ಹಾಗೆ ದೇವರ ಶಬ್ದವನ್ನು, ದೇವರ ನಾಮವನ್ನು ಮತ್ತೆ ಮತ್ತೆ ಹೇಳಿಕೊಳ್ಳುವುದರ ಮೂಲಕ ಮನಸ್ಸನ್ನು ದೇವರತ್ತ ಕಳುಹಿಸಬೇಕು. ಸ್ತೋತ್ರ ಎಂದರೆ ಭಕ್ತಿಸಾಹಿತ್ಯದ ಮೂಲಕ ದೇವರ ಚಿಂತನೆ. ಆರಂಭದ ಸಾಧಕನಿಗೆ ಮನಸ್ಸು ತುಂಬಾ ಚಂಚಲವಾಗಿರುವುದರಿಂದ ಧ್ಯಾನವು ಸಾಧ್ಯವೇ ಇಲ್ಲ.
ಎಷ್ಟೋ ಸಲ, ಜಪವೂ ಆರಂಭದ ಸಾಧಕನಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರಿಗೆ ದೀರ್ಘಕಾಲ ಕುಳಿತುಕೊಳ್ಳಲೂ ಸಾಧ್ಯವಾಗುವುದಿಲ್ಲ. ಸೊಂಟನೋವು, ಮಂಡಿನೋವು, ನಿದ್ರೆ ಮೊದಲಾದ ವಿಘ್ನಗಳು ಬರುತ್ತವೆ. ಆರಂಭದ ಸಾಧಕನಿಗೆ ಸುಲಭವಾದ ಸಾಧನವೆಂದರೆ ಸ್ತೋತ್ರ, ಭಜನೆ. ಭಕ್ತಿಯನ್ನು ಉದ್ದೀಪನಗೊಳಿಸುವ ರಾಗಸಂಯೋಜನೆ ಮಾಡಿ ಹಾಡಿದರೆ ಬಹಳ ಉತ್ತಮವಾಗಿ, ಮನಸ್ಸು ಬೇಗ ದೇವರಲ್ಲಿ ಏಕಾಗ್ರಗೊಳ್ಳುತ್ತದೆ.
ಅಂತೆಯೇ ದೇವರಲ್ಲಿ ಮನಸ್ಸನ್ನು ಇಡಲು ಪೂಜೆಯು ಎಲ್ಲಕ್ಕಿಂತಲೂ ಸುಲಭವಾದ ಸಾಧನ. ಏಕೆಂದರೆ, ಪೂಜೆಯಲ್ಲಿ ಅನೇಕ ಅನುಕೂಲಗಳಿವೆ. ಪೂಜೆಯ ವೇಳೆ ಒಂದು ಪ್ರತ್ಯೇಕವಾದ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ. ಎದುರಿಗೆ ದೇವರ ಚಿತ್ರ ಅಥವಾ ಮೂರ್ತಿ ಇರುತ್ತದೆ. ಕಣ್ಣುಗಳು ಆ ಮೂರ್ತಿಯನ್ನು ಅಥವಾ ಚಿತ್ರವನ್ನು ನೋಡುತ್ತಿರುತ್ತವೆ. ಕೈಗಳು ಪೂಜೆ ಮಾಡುತ್ತಿರುತ್ತವೆ. ಅಂದರೆ, ಹೂವು ಮೊದಲಾದವುಗಳನ್ನು ಸಮರ್ಪಣೆ ಮಾಡುತ್ತಿರುತ್ತವೆ.
ಹೀಗೆ ಕುಳಿತಿರುವ ಸ್ಥಳ, ನೋಡುತ್ತಿರುವ ಮೂರ್ತಿ, ಕೈಗಳಿಂದ ಪೂಜೆ, ಬಾಯಿಂದ ಮಂತ್ರ ಅಥವಾ ಸ್ತೋತ್ರ ಪಠನ- ಇವೆಲ್ಲವೂ ಮನಸ್ಸಿಗೆ ಸುಲಭವಾಗಿ ದೇವರ ಕಡೆ ಹೋಗಲು ಅನುಕೂಲಮಾಡಿಕೊಡುತ್ತವೆ. ಪೂಜೆಯ ಮೂಲಕ ಬೇಗ ಮನಸ್ಸಿಗೆ ಏಕಾಗ್ರತೆ ಬರಲು ಸಾಧ್ಯವಾಗುತ್ತದೆ.
ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ,
ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸೋಂದಾ, ಶಿರಸಿ