Advertisement

ಅರ್ಥಪೂರ್ಣ ಅಭಿವ್ಯಕ್ತಿಗೆ ಸಾಕ್ಷಿಯಾದ ದ್ರೌಪದಿ ಪ್ರತಾಪ

07:49 PM Apr 04, 2019 | mahesh |

ಎಲ್ಲಿಯೂ ಕೂಡಾ ಹೆಜ್ಜೆ, ನೃತ್ಯ, ಅರ್ಥ ಲೋಪ ಕಂಡು ಬರಲಿಲ್ಲ. ಅರ್ಜುನ ಭೀಮರ ಸೋದರ ಸಮರ, ಮುಂದೆ ಅಕ್ಕ -ತಂಗಿಯರ ಜಗಳ, ಅಣ್ಣ-ತಂಗಿಯ ಯುದ್ಧ, ಅತ್ತೆ-ಅಳಿಯ ಸಮರ ಹೀಗೆ ಸಾಗುತ್ತಾ ಯಾಜ್ಞಸೇನೆ ಜಯಸಿರಿಗೆ ಶಿವನೆ ಕೈಸೋತಾಗ ಶಿವೆಯೇ ಸಮರಕ್ಕೆ ಎದುರಾಗುವ
ಸನ್ನಿವೇಶವನ್ನು ಸುಂದರವಾಗಿ ಅಭಿನಯಿಸಿದ್ದಾರೆ.

Advertisement

ದ್ರೌಪದಿಯ ವೀರಾವೇಷ‌, ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸುತ್ತ ಮುನ್ನುಗ್ಗುವ ಪರಿ, ಸ್ಪರ್ಧಾತ್ಮಕವಾಗಿ ಪ್ರತಿಭೆಯನ್ನು ಹೊರಸೂಸುವ ಉತ್ಸಾಹ, ಪ್ರಬುದ್ಧ ಹಿಮ್ಮೇಳಕ್ಕೆ ಅಷ್ಟೇ ಸಮನಾತ್ಮಕವಾಗಿ ಸವಾಲು ನೀಡುವ ಮುಮ್ಮೇಳ… ಒಟ್ಟಂದದಲ್ಲಿ ಮಧ್ಯಾಹ್ನ ವೇಳೆಯಲೊಂದು ಅಪೂರ್ವ ಮನೋರಂಜನೆ ಒದಗಿಸಿ, ಭಲೇ ಭೇಷ್‌ ಎನ್ನುವ ಉದ್ಗಾರಕ್ಕೆ ಸಾಕ್ಷಿಯಾಗಿದ್ದು ಬಸ್ರೂರು ಶಾರದಾ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಶ್ರೀ ಶಾರದಾ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನ ಕಡಂದಲೆ ಬಿ.ರಾಮರಾವ್‌ ವಿರಚಿತ ದ್ರೌಪದಿ ಪ್ರತಾಪ.
ಯಕ್ಷಗುರು ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಅವರ ನಿರ್ದೇಶನ, ಶ್ರೀ ಶಾರದಾ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ರಾಘವೇಂದ್ರ ಶೆಟ್ಟಿ ಅವರ ಸಂಯೋಜನೆಯಲ್ಲಿ ಮೂಡಿ ಬಂದ ಈ ಪ್ರದರ್ಶನ ಪೂರ್ಣ ಪ್ರಮಾಣದ ಸಾರ್ಥಕ ಪ್ರಯತ್ನ.

ಪ್ರಾರಂಭದಿಂದ ಅಂತ್ಯದ ತನಕ ಎಲ್ಲಿಯೂ ಕೂಡಾ ಹೆಜ್ಜೆ, ನೃತ್ಯ, ಅರ್ಥ ಲೋಪ ಕಂಡು ಬರಲಿಲ್ಲ. ಅರ್ಜುನ ಭೀಮರ ಸೋದರ ಸಮರ, ಮುಂದೆ ಅಕ್ಕ -ತಂಗಿಯರ ಜಗಳ, ಅಣ್ಣ-ತಂಗಿಯ ಯುದ್ಧ, ಅತ್ತೆ-ಅಳಿಯ ಸಮರ ಹೀಗೆ ಸಾಗುತ್ತಾ ಯಾಜ್ಞಸೇನೆ ಜಯಸಿರಿಗೆ ಶಿವನೆ ಕೈಸೋತಾಗ ಶಿವೆಯೇ ಸಮರಕ್ಕೆ ಎದುರಾಗುವ ಸನ್ನಿವೇಶವನ್ನು ಸುಂದರವಾಗಿ ಒಂದೂವರೆ ತಾಸಿನಲ್ಲಿ ಅಭಿನಯಿಸಿದ್ದಾರೆ.

ಪ್ರಮುಖವಾಗಿ ಕಥಾನಾಯಕಿ ದ್ರೌಪದಿಯ ಪಾತ್ರ ನಿರ್ವಹಣೆ ಮಾಡಿದ ದ್ವಿತೀಯ ಬಿ.ಕಾಂನ ಕಾವ್ಯಾ ಮತ್ತು ಶ್ರುತಿ ಪ್ರಶಂಸೆಯ ಅಭಿನಯ ನೀಡಿದರೆ ವೀರಗಸೆಯ ದ್ರೌಪದಿ ಆವೇಶ ಉತ್ಸಾಹ ಮತ್ತು ಭಾವ ಪ್ರಕಟ, ನಿಲುವು ಪ್ರಖರವಾಗಿದ್ದವು. ಸುಭದ್ರೆಯಾಗಿ ತೃತೀಯ ಬಿಕಾಂನ ಅಕ್ಷತಾ ಮತ್ತು ರಂಜಿತಾ ಕೂಡಾ ಮಾತು ಹಾಗೂ ಕುಣಿತ ಮತ್ತು ರಸಾಭಿವ್ಯಕ್ತಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಭೀಮನಾಗಿ ತೃತೀಯ ಬಿ.ಎ ವಿದ್ಯಾರ್ಥಿ ನಿತಿನ್‌ ಪಾತ್ರಕ್ಕೆ ನಿಜವಾದ ನ್ಯಾಯ ಒದಗಿಸಿದ್ದರೆ, ಅರ್ಜುನನಾಗಿ ದ್ವಿತೀಯ ಬಿಕಾಂನ ಶ್ರೀನಿಧಿ ಹಾಗೂ ಸುಶ್ಮಿತಾ ವೀರೋಚಿತ ಅಭಿನಯದಿಂದ ಗೆದ್ದಿದ್ದಾರೆ. ಪುಟ್ಟ ಪಾತ್ರವಾದರೂ ಮನ್ಮಥನಾಗಿ ತೃತೀಯ ಬಿಎಯ ಜಯಕರ ದ್ರೌಪದಿಗೆ ಎದುರಾಗುವ ಸನ್ನಿವೇಶದಲ್ಲಿ ಅತ್ತೆ ಕೇಳು ಮೊಗೆಬೆಟ್ಟು ಅವರ ಸುಶ್ರಾವ್ಯ ಶೈಲಿಯ ಪದ್ಯಕ್ಕೆ ಅಷ್ಟೇ ಚೆನ್ನಾಗಿ ಕುಣಿದಿದ್ದಾರೆ. ನಡುನಡುವೆ ಹಿನ್ನಲೆ ಸ್ತಬ್ದತೆ ಹೊಸತನ ನೀಡಿತು. ಕೃಷ್ಣನ ಪಾತ್ರಧಾರಿ ತೃತೀಯ ಬಿ.ಕಾಂನ ಸ್ವಾತಿಯದ್ದು ಕೂಡಾ ಉತ್ತಮ ಅಭಿವ್ಯಕ್ತಿ. ಸೋದರಿಗೆ ಎದುರಾದ ಪದ್ಯಕ್ಕೆ ಕುಣಿದ ಪರಿ ಅನನ್ಯ. ಉಳಿದಂತೆ ಈಶ್ವರನಾಗಿ ಪ್ರಥಮ ಬಿ.ಕಾಂ ಶುಭಶ್ರೀ, ಸಾಂಬನಾಗಿ ತೃತೀಯ ಬಿ.ಕಾಂನ ಅರುಣರಾಜ್‌, ವೀರಭದ್ರನಾಗಿ ದ್ವಿತೀಯ ಬಿಕಾಂನ ಕಾರ್ತಿಕ್‌, ಭೃಂಗಿ-ಭೃಕುಟಿಯರಾಗಿ ತೃತೀಯ ಬಿಎಯ ಮೋಹನ್‌ ಮತ್ತು ಸುಕೇತ ಅಭಿನಯಿಸಿದ್ದಾರೆ.

Advertisement

ಬಾಲಗೋಪಾಲ ವೇಷದಲ್ಲಿ ದ್ವಿತೀಯ ಬಿಕಾಂನ ಸೌಭಾಗ್ಯ ಲಕ್ಷ್ಮೀ, ಪೂಜಾ, ನವಮಿ, ವಿದ್ಯಾಶ್ರೀ, ರಶ್ಮಿತಾ, ಪೀಠಿಕಾ ಸ್ತ್ರೀವೇಶದಲ್ಲಿ ತೃತೀಯ ಬಿಕಾಂನ ರೂಪಾ, ಪ್ರಥಮ ಬಿ.ಎ ವಿದ್ಯಾರ್ಥಿನಿಯರಾದ ಐಶ್ಚರ್ಯ, ಸ್ವಾತಿ, ಕಾವ್ಯ ಅಭಿನಯಿಸಿದ್ದಾರೆ. ವಿಶೇಷವೆಂದರೆ ಇಡೀ ಆಖ್ಯಾನದಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕಾಕತಾಳೀಯವೆಂದರೆ ಆಯ್ದ ಕಥಾವಸ್ತು ಕೂಡಾ ಸ್ತ್ರೀಪ್ರಧಾನವೇ ಆಗಿದ್ದು ಕಾರ್ಯಕ್ರಮದ ವೈಶಿಷ್ಟ್ಯತೆ.
ಇಡೀ ಪ್ರಸಂಗದಲ್ಲಿ ಪ್ರತಿಯೊಂದು ಪದ್ಯಗಳನ್ನು ಕೂಡಾ ಚಿರಸ್ಥಾಯಿಯಾಗಿ ಕರ್ಣಂಗಳಿಗೆ ಕಟ್ಟಿಕೊಟ್ಟವರು ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು. ಏರುಸ್ಥಾಯಿಯಲ್ಲಿ ಛಂದೋಬದ್ದ ಪದ್ಯಗಳನ್ನು ಮತ್ತೆ ಮತ್ತೆ ಅನುರಣಿಸುವಂತೆ ಮಾಡಿದರು. ಮದ್ದಳೆಯಲ್ಲಿ ರಾಘವೇಂದ್ರ ರಾವ್‌ ಸಕ್ಕಟ್ಟು, ಚಂಡೆಯಲ್ಲಿ ಭಾಸ್ಕರ ಆಚಾರ್ಯ ಹೆಮ್ಮಾಡಿ ಉತ್ತಮ ಸಾಥ್‌ ನೀಡಿದ್ದಾರೆ.

ನಾಗರಾಜ್‌ ಬಳಗೇರಿ

Advertisement

Udayavani is now on Telegram. Click here to join our channel and stay updated with the latest news.

Next