ವಿಟ್ಲ: ಪರೀಕ್ಷೆಯ ಅಂತಿಮ ಹಂತದಲ್ಲಿಯೇ ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ನಿರೀಕ್ಷಿಸಿದ್ದೆ. ಪ್ರಥಮ ರ್‍ಯಾಂಕ್ ಬಂದಿರುವುದು ಸಂತಸವಾಗಿದೆ. ಮುಂದೆ ಬಿಕಾಂ ಜತೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗುವ ಗುರಿ ಇಟ್ಟುಕೊಂಡಿದ್ದೇನೆ ಎಂದು ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿರುವ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ ತಿಳಿಸಿದರು.
ಅವರು ಉದಯವಾಣಿ ಪ್ರತಿನಿಧಿ ಜತೆ ಮಾತನಾಡಿ, ಅಳಿಕೆ ಸಂಸ್ಥೆಯ ಉಪನ್ಯಾಸಕ ವೃಂದದ ಉತ್ತಮ ಬೋಧನೆ, ಸಂಪೂರ್ಣ ತೊಡಗಿಸುವಿಕೆ ಮತ್ತು ಅತ್ಯುತ್ತಮ ಮಾರ್ಗದರ್ಶನದಿಂದ ಹಾಗೂ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಹೆತ್ತವರ ಹಾಗೂ ಹಿರಿಯರೆಲ್ಲರ ಆಶೀರ್ವಾದದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಅಳಿಕೆಯಲ್ಲಿ ಕಲಿತ ವಿಷಯಗಳನ್ನು ಮಾತ್ರ ಓದಿದ್ದೇನೆ. ಯಾವುದೇ ವಿಶೇಷ ತರಬೇತಿಗಳನ್ನಾಗಲಿ ಟ್ಯೂಷನ್ ಆಗಲಿ ಪಡೆದಿಲ್ಲ. ರಾಜ್ಯದಲ್ಲಿ ಪ್ರಥಮ ಸ್ಥಾನ ಬಂದುದಕ್ಕೆ ಅತೀವ ಸಂತಸವಾಗಿದೆ ಎಂದು ಹೇಳಿದರು.
ಶ್ರೀಕೃಷ್ಣ ಶರ್ಮ ಅವರು ಬದಿಯಡ್ಕ ಸಮೀಪದ ಪೆರಡಾಲ ಗ್ರಾಮದ ಕಡಪ್ಪು ನಿವಾಸಿ, ಕೃಷಿಕ ಸುಬ್ರಹ್ಮಣ್ಯ ಭಟ್ ಮತ್ತು ಗೃಹಿಣಿ ಶಾರದಾ ದಂಪತಿಯ ಏಕಮಾತ್ರ ಪುತ್ರ. ಶ್ರೀಕೃಷ್ಣ ಶರ್ಮ ಅವರು ಮನೆಯಿಂದಲೇ ಪ್ರತಿದಿನ ಅಳಿಕೆ ಕಾಲೇಜಿಗೆ ತೆರಳಿ ವಾಪಸಾಗುತ್ತಿದ್ದರು. ಮನೆಯಿಂದ ಬಸ್ ನಿಲ್ದಾಣಕ್ಕೆ ಒಂದು ಕಿ.ಮೀ. ದೂರ. ಸರಿಯಾದ ಸಮಯಕ್ಕೆ ಬಸ್ ಬಂದರೆ 5.45ಕ್ಕೆ ಮನೆಗೆ ತಲುಪುತ್ತಿದ್ದರು. ಇಲ್ಲವಾದಲ್ಲಿ 7 ಗಂಟೆಯಾಗುತ್ತಿತ್ತು.
ತಂದೆ ಸುಬ್ರಹ್ಮಣ್ಯ ಭಟ್ ಮಾತನಾಡಿ, ಪುತ್ರ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿ ರುವುದು ಅತ್ಯಂತ ಸಂತಸವಾಗಿದೆ. ಅವನ ಭವಿಷ್ಯ ಉತ್ತಮವಾಗಿ ರೂಪು ಗೊಳ್ಳುವುದಕ್ಕೆ ಅವನೇ ಮಾರ್ಗ ಕಂಡು ಕೊಂಡಿದ್ದಾನೆ ಎಂದರು.
ಮುಂದಿನ ವರ್ಷ ನನ್ನ ಫೋಟೋ ಬರಲಿದೆ ಎಂದಿದ್ದ ಮಗ ತಾಯಿ ಶಾರದಾ ಮಾತನಾಡಿ, ಅವನುಎಸೆಸೆಲ್ಸಿಯಲ್ಲಿ ರ್‍ಯಾಂಕ್ ಪಡೆಯಬೇಕಿತ್ತು. ಬಂದಿರಲಿಲ್ಲ. ಪಿಯುಸಿಯಲ್ಲಾ ದರೂ ಗಳಿಸಲೇಬೇಕು ಎಂಬ ಛಲ ಆತನಲ್ಲಿತ್ತು. ಅದನ್ನೀಗ ಸಾಧಿಸಿ ತೋರಿಸಿದ್ದಾನೆ. ಕಳೆದ ವರ್ಷ ಅಳಿಕೆಯ ಸಾಧಕ ವಿದ್ಯಾರ್ಥಿ ಸಮರ್ಥ್ ಅವರ ಫೋಟೋವನ್ನು ಪತ್ರಿಕೆಯಲ್ಲಿ ತೋರಿಸಿ, ಮುಂದಿನ ವರ್ಷ ಇದೇ ರೀತಿ ನನ್ನ ಫೋಟೋ ನೋಡಬಹುದಮ್ಮ ಎಂದಿದ್ದ. ಹಾಗೇ ಆಯಿತು. ಅತೀವ ಆನಂದವಾಗಿದೆ ಎಂದರು.