ಹುಬ್ಬಳ್ಳಿ: ಶ್ರೀರಾಮನು ವನವಾಸದ 12 ವರ್ಷಗಳನ್ನು ಕಳೆದ ಚಿತ್ರಕೂಟ ಪರ್ವತ ಪ್ರತಿಯೊಬ್ಬ ಭಾರತೀಯ ಸಂದರ್ಶಿಸಬೇಕಾದ ಸ್ಥಳ ಎಂದು ಉಡುಪಿ ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀರಾಮನವಮಿ ಹಬ್ಬ ಹಾಗೂ ಶ್ರೀ ಕೃಷ್ಣ ದೇವರ ಪ್ರತಿಷ್ಠಾ ಸುವರ್ಣ ಮಹೋತ್ಸವ ನಿಮಿತ್ತ ರಾಮಾಯಣ ಪ್ರವಚನ ನೀಡಿದ ಶ್ರೀಗಳು, ಅಲ್ಲಿ ಭರತನು ಅಣ್ಣ ರಾಮನನ್ನು ಭೇಟಿ ಮಾಡಿದ ಭರತ ಮಿಲಾಪ್ ಎಂಬ ಪವಿತ್ರ ಸ್ಥಳವಿದ್ದು, ಅದನ್ನು ಸಂದರ್ಶಿಸಿದರೆ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಎಂದರು.
ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಗಡಿ ಪ್ರದೇಶದ ಉತ್ತರ ವಿಂಧ್ಯಪರ್ವತ ಶ್ರೇಣಿಯಲ್ಲಿರುವ ಚಿತ್ರಕೂಟದಲ್ಲಿರುವ ಭರತ ಮಿಲಾಪ್ ಎಂಬ ಪ್ರದೇಶವು ಪಾವಿತ್ರ್ಯತೆ ಹೊಂದಿದೆ. ಅಲ್ಲಿ ವಿಶ್ವಾತ್ಮಕ ಶಕ್ತಿಗಳ ಕಂಪನಗಳಿವೆ. ಆ ಸ್ಥಳವನ್ನು ಸ್ಪರ್ಶಿಸಿ, ಅದಕ್ಕೆ ನಮಸ್ಕಾರ ಮಾಡಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇಡೀ ಪರ್ವತವನ್ನೇ ಒಂದೆರಡು ಗಂಟೆಗಳಲ್ಲಿ ಪ್ರದಕ್ಷಿಣೆ ಮಾಡಬಹುದು. ಒಡೆದು ಹೋದ ಕುಟುಂಬವನ್ನು ಒಟ್ಟು ಸೇರಿಸುವ ಶಕ್ತಿ ಅದಕ್ಕಿದೆ ಎಂದು ಹೇಳಿದರು.
ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮಿಜಿ ಮಾತನಾಡಿ, ರಾಮನ ಅಶ್ವಮೇಧ ಯಾಗ ಕುರಿತ ಸಿದ್ಧತೆಗಳ ಕುರಿತು ವಿವರಣೆ ನೀಡಿದರು. ಉದ್ಯಮಿ ಗೋಪಾಲಕೃಷ್ಣ ನಾಯಕ ಮುಖ್ಯ ಅತಿಥಿಯಾಗಿದ್ದರು. ಪಂಡಿತ ವೆಂಕಟೇಶಾಚಾರ್ಯ ಕೊರ್ಲಹಳ್ಳಿ, ಗಿರೀಶ ಆಚಾರ್ಯ ಪ್ರವಚನ ನೀಡಿದರು. ಶ್ರೀ ಮಹಾಲಕ್ಷ್ಮೀ ಮಹಿಳಾ ಮಂಡಳ ಸದಸ್ಯರು ಭಜನೆ ಮಾಡಿದರು. ದಯಾನಂದ ರಾವ್ ನಿರೂಪಿಸಿದರು.
Related Articles
ಮಾ. 30ರಂದು ಪ್ರವಚನ ಸಮಾರೋಪ
ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಕೃಷ್ಣ ದೇವರ ಪ್ರತಿಷ್ಠಾ ಸುವರ್ಣ ಮಹೋತ್ಸವ ಮತ್ತು ಶ್ರೀರಾಮ ನವಮಿ ಉತ್ಸವದ ನಿಮಿತ್ತ ನಡೆದ ಶ್ರೀ ರಾಮಾಯಣ ಪ್ರವಚನ ಸಮಾರೋಪ ಸಮಾರಂಭ ಮಾ. 30ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಉಡುಪಿ ಪಲಿಮಾರು ಮಠದ ಹಿರಿಯ ಯತಿ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶ್ರೀರಾಮ ಜನ್ಮೋತ್ಸವ, ತೊಟ್ಟಿಲೋತ್ಸವ, ಶ್ರೀಗಳವರಿಂದ ಸಂಸ್ಥಾನ ಪೂಜೆ, ಶ್ರೀಗಳವರಿಗೆ ಭಿಕ್ಷೆ, ಭಕ್ತಾದಿಗಳಿಗೆ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ.