ಬ್ರಹ್ಮಾವರ: ತಂದೆ, ತಾಯಿಯ ಮೇಲಿನ ಗೌರವ, ತಾಳ್ಮೆ, ಅಧಿಕಾರ ತ್ಯಾಗ, ಹಸನ್ಮುಖ ಹೀಗೆ ಸರ್ವರೀತಿಯಲ್ಲೂ ಶ್ರೀರಾಮಚಂದ್ರ ನಮಗೆ ಆದರ್ಶ ಪುರುಷ ಎಂದು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಅವರು ಶುಕ್ರವಾರ ಪೇತ್ರಿ ಗೊದ್ದನಕಟ್ಟೆ ಶ್ರೀರಾಮ ಭಜನ ಮಂದಿರ ಸುವರ್ಣ ಸಂಭ್ರಮ ಸಂದರ್ಭ ಪುನರ್ ನವೀಕರಣ ಅಶ್ವತ್ಥಕಟ್ಟೆ ಮತ್ತು ಮಂದಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಾವು ಉದ್ಯೋಗ ನಿಮಿತ್ತ ಎಲ್ಲೇ ಇದ್ದರೂ ತಂದೆ, ತಾಯಿ ಹಾಗೂ ತಾಯ್ನಾಡನ್ನು ಮರೆಯಬಾರದು. ಎಷ್ಟೋ ವರ್ಷಗಳ ಕನಸಾದ ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ನನಸಾಗುವ ಈ ಸಂದರ್ಭದಲ್ಲೇ ಗೊದ್ದನಕಟ್ಟೆ ರಾಮ ಭಜನ ಮಂದಿರ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಸ್ಮರಣೀಯ ವಿಚಾರ ಎಂದರು.
ಭಜನೆಯು ಶ್ರದ್ಧೆ ಭಕ್ತಿಯ ಪ್ರತೀಕ. ಇದರಿಂದ ಯುವ ಜನತೆ ಸನ್ಮಾರ್ಗದಲ್ಲಿ ಸಾಗಲು ಸಾಧ್ಯ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು. ನೆಮ್ಮದಿಯ ಜೀವನಕ್ಕೆ ಭಜನೆ, ಮಂದಿರ ಪೂರಕ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಅತಿಥಿಗಳಾಗಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಪಂಚಾಯತ್ ಅಧ್ಯಕ್ಷ ನಾರಾಯಣ ನಾಯ್ಕ, ಕನ್ನಾರು ದುರ್ಗಾಪರಮೇಶ್ವರೀ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧನಂಜಯ ಅಮೀನ್, ಪ್ರಮುಖರಾದ ಗಂಗಾಧರ ಸಾಮಂತ್ , ಸತೀಶ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಶರತ್ಚಂದ್ರ ಪ್ರಭು ಮತ್ತು ಕಾಳು ನಾಯ್ಕ ಅವರನ್ನು ಗೌರವಿಸಲಾಯಿತು. ರಕ್ಷಿತ್ ಆಚಾರ್ಯ ಸ್ವಾಗತಿಸಿ, ಗೋಪಾಲಕೃಷ್ಣ ಪ್ರಭು ಪ್ರಸ್ತಾವನೆಗೈದರು. ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು.
ಇಂದು ಶ್ರೀನಿವಾಸ ಕಲ್ಯಾಣೋತ್ಸವ
ಭಜನ ಮಂದಿರದಲ್ಲಿ ಜ. 6ರ ಸಂಜೆ 5ರಿಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಜರಗಲಿದೆ.