ಶ್ರೀಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ 20ರಂದು
Team Udayavani, Apr 16, 2018, 5:16 PM IST
ಬಳ್ಳಾರಿ: ಉಜ್ಜಯಿನಿ ಪೀಠದ ಶ್ರೀ ಮರುಳಸಿದ್ದೇಶ್ವರ ರಥೋ ತ್ಸವ ಏ.20 ರಂದು ನಡೆಯಲಿದೆ. ಮರುದಿನ ದೇವಸ್ಥಾನದ ಶಿಖರಕ್ಕೆ (ಗೋಪುರ) ತೈಲಾಭಿಷೇಕ ಜರುಗಲಿದ್ದು, ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.
ಉಜ್ಜಯಿನಿ ಶ್ರೀಮರುಳಸಿದ್ದೇಶ್ವರ ಜಾತ್ರೆಯನ್ನು ಅತ್ಯಂತ ಅದ್ಧೂರಿಯಾಗಿ ನಡೆಸಲಾಗುತ್ತದೆ. ಏ.15 ರಿಂದ ಏ.25ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ನಾನಾ ಕಾರ್ಯಕ್ರಮ, ಧರ್ಮಸಭೆ, ಪ್ರಶಸ್ತಿ ಪ್ರದಾನ ಸಮಾರಂಭ ಸೇರಿದಂತೆ ರೈತರಿಗೆ ಅನುಕೂಲವಾಗುವ ಜಿಲ್ಲಾ ಮಟ್ಟದ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದ್ದು, ರೈತರು ಮೇಳದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಏ.6 ರಂದು ರಥದ ಗಾಲಿಗಳನ್ನು ಹೊರ ತೆಗೆಯಲಾಗಿದ್ದು, ಏ.15 ರಂದು ಅಕ್ಷತ್ತ ತದಿಗೆ, ಅಮಾವಾಸ್ಯೆಯಂದು ಸ್ವಾಮಿಗೆ ಕಂಕಣ ಧಾರಣೆ, ನಾಗವಾಹನೋತ್ಸವ ಮಾಡಲಾಯಿತು. ಏ.16 ರಂದು ಸೋಮವಾರ ಮಯೂರ ವಾಹನೋತ್ಸವ, ಏ.17ರಂದು ವಾಹನೋತ್ಸವ, ಏ.18 ರಂದು ಸಿಂಹವಾಹನೋತ್ಸವ, ಏ.19 ರಂದು ವೃಷಭ ವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಏ.20 ರಂದು ಶ್ರೀಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಏ.21ರಂದು ದೇವಸ್ಥಾನದ ಶಿಖರ ತೈಲಾಭಿಷೇಕ ಜರುಗಲಿದೆ.
ಏ.22 ರಂದು ಶಿವದೀಕ್ಷಾ ಕಾರ್ಯಕ್ರಮ, ಏ.24 ರಂದು ಸ್ವಾಮಿಯ ಕಂಕಣ ವಿಸರ್ಜನೆ, ದೇವಾಲಯ ಶುದ್ಧೀಕರಣ ಕಾರ್ಯಕ್ರಮ ಜರುಗಲಿದೆ. ಏ.25 ರಂದು ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ವಿವಾಹಗಳು ಹಾಗೂ ಅಂದು ಮಧ್ಯಾಹ್ನ 12 ಗಂಟೆಗೆ ಧರ್ಮಸಭೆ ನಡೆಯಲಿದೆ.
ಜಿಲ್ಲಾ ಮಟ್ಟದ ಕೃಷಿ ಮೇಳ: ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಉಜ್ಜಯಿನಿಯ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರೈತರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ರಾಯಚೂರು ಕೃಷಿ ವಿವಿ, ಹಡಗಲಿ ಕೃಷಿ ವಿಸ್ತರಣಾ ಕೇಂದ್ರ, ತೋಟಗಾರಿಕೆ ಇಲಾಖೆ, ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ಮೇಳವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ರೈತರು ಮೇಳದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಧರ್ಮ ಸಮಾರಂಭ: ಏ.20 ರಂದು ಸಂಜೆ 4 ಗಂಟೆಗೆ ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭ ಜರುಗಲಿದೆ. ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೊಟ್ಟೂರು ಸ್ವಾಮಿ ಮಠದ ಡಾ| ಸಂಗನಬಸವ ಸ್ವಾಮೀಜಿಗಳು, ವೀರಶೈವ ಧರ್ಮ ಸಮನ್ವಯಾಚಾರ್ಯ ಪ್ರಶಸ್ತಿ ಪ್ರದಾನ ಮಾಡುವರು. ನಾಡೋಜ ಅನ್ನದಾನೇಶ್ವರ ಸ್ವಾಮೀಜಿಗಳು ವೀರಶೈವ ಧರ್ಮ ಶಿರೋಮಣಿ ಪ್ರಶಸ್ತಿ ಪ್ರದಾನ ಮಾಡುವರು.
ದೇವಸ್ಥಾನದ ವೈಶಿಷ್ಟ್ಯತೆ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನವು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರ ಶೈಲಿಯನ್ನು ಹೋಲುವ ದೇವಸ್ಥಾನವನ್ನು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ವಿಜಯನಗರ ಕಾಲದ ಹಂಪಿಯ ವಿವಿಧ ದೇವಸ್ಥಾನಗಳಲ್ಲಿರುವ ಎಲ್ಲ ಶೈಲಿಯ ಶಿಲಾಕಲಾಕೃತಿಗಳನ್ನು ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ನೋಡಬಹುದಾಗಿದೆ.
ಸುಂದರ ಕುಸುರಿ ಕೆತ್ತನೆಯಿಂದ ವಿಸ್ತಾರವಾದ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ದೇವಸ್ಥಾನವು ಐದು ಗರ್ಭಗುಡಿ, ಸಭಾಮಂಟಪ, ಮಹಾಮಂಟಪ, ಅಂತರಾಳ, ದ್ವಾರ ಗೋಪುರಗಳಿಂದ ಕೂಡಿದೆ. ದೇವಸ್ಥಾನದಲ್ಲಿ ಮರಳಸಿದ್ದೇಶ್ವರ ಲಿಂಗವನ್ನು ದಕ್ಷಿಣ ದಿಕ್ಕಿನಲ್ಲಿರುವ ಅಂತರಾಳದಲ್ಲಿ ಪ್ರತಿಷ್ಠಾಪಿಸಲಾಗಿದೆ. ಜತೆಗೆ ದೇವಸ್ಥಾನದಲ್ಲಿ ಹಲವು ಸಣ್ಣ ಸಣ್ಣ ದೇಗುಲಗಳಿದ್ದು, ಅವುಗಳಲ್ಲಿ ವಿಶ್ವಾರಾದ್ಯ, ಗಣೇಶ, ಮಳೆಸ್ವಾಮಿ ದೇವರ ಶಿಲ್ಪಗಳಿವೆ. ಮಂದಿರದಲ್ಲಿ ಬೃಹತ್ ಗಾತ್ರದ ನಂದಿಯಿದ್ದು, ಪೀಠಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಶಾಸನಗಳನ್ನು ಇಲ್ಲಿ ನೋಡಬಹುದಾಗಿದೆ. ಅಲ್ಲದೇ, ದೇಗುಲದ ಪ್ರತಿಯೊಂದು ಕಂಬಗಳು ಸಹ ಕಲಾತ್ಮಕವಾಗಿ ಕಂಗೊಳಿಸುತ್ತವೆ. ಮಕರ ತೋರಣಗಳಂತೂ ಮನಮೋಹಕವಾಗಿ ಗಮನ ಸೆಳೆಯುತ್ತವೆ. ಇವುಗಳ ನಡುವೆ ಗಜಲಕ್ಷ್ಮೀ , ಶಿವಲಿಂಗ ಹಲವು ಚಿತ್ರಗಗಳು ಕಣ್ಮನ ಸೆಳೆಯುತ್ತವೆ. ದೇವಾಲಯದ ಒಳ ಮತ್ತು ಹೊರ ಪ್ರಾಂಗಣದಲ್ಲಿ ಹಲವಾರು ಮೂರ್ತಿಗಳಿದ್ದು, ದೇವಸ್ಥಾನದ ಕಲಾ ಸೌಂದರ್ಯವನ್ನು ಹೆಚ್ಚಿಸಿವೆ.
ಇನ್ನೂ ವಿಶೇಷವಾಗಿ ದೇವಸ್ಥಾನದ ಮೇಲ್ಭಾಗದಲ್ಲಿ ಕಲ್ಲಿನಲ್ಲಿ ಕಮಲ ಕೆತ್ತಲಾಗಿದ್ದು, ಸುಮಾರು ಸಹಸ್ರ ದಳಗಳನ್ನು ಹೊಂದಿದೆ. ಪ್ರತಿ ದಳಗಳಲ್ಲಿ ಲಿಂಗವನ್ನು ಕೆತ್ತಲಾಗಿದ್ದು, ಇಂಥಹ ಕಮಲವನ್ನು ಇಲ್ಲಿ ಮಾತ್ರ ನೋಡಬಹುದಾಗಿದೆ. ಏನಿದು ತೈಲಾಭಿಷೇಕ: ಪ್ರತಿವರ್ಷ ಶ್ರೀಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆದ ಮರುದಿನ1 ದೇವಸ್ಥಾನದ ಶಿಖರ (ಗೋಪುರ)ಕ್ಕೆ ತೈಲಾಭಿಷೇಕ ನಡೆಯುತ್ತದೆ. ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿರುವ ಈ ತೈಲಾಭಿಷೇಕ ತನ್ನದೇ ಆದ ಇತಿಹಾಸ ಹೊಂದಿದ್ದು, ನಾನಾ ಬಗೆಯ ತೈಲವನ್ನು ಗೋಪುರದ ಮೇಲಿಂದ ಕೆಳಗಿನವರೆಗೆ ಸುರಿಯಲಾಗುತ್ತದೆ. ಗೋಪುರದ ಮೇಲೆ ಎರೆಯಲೆಂದೇ ಲಕ್ಷಾಂತರ ಭಕ್ತರು ತೈಲದೊಂದಿಗೆ ತೈಲಾಭಿಷೇಕಕ್ಕೆ ಆಗಮಿಸುವುದು ವಿಶೇಷ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಡಾ. ಸುನೀಲ್ ಕಿಡ್ನಾಪ್ ಪ್ರಕರಣ ಸುಖಾಂತ್ಯ
ಸಿಬಿಐ ಪ್ರಕರಣ ಕಂಡವನಿಗೆ, ಶ್ರೀರಾಮುಲು ಬೆಂಬಲಿಗರ ದೂರು ಯಾವ ಲೆಕ್ಕ?: ಜನಾರ್ದನ ರೆಡ್ಡಿ
Ballari: ಶ್ರೀರಾಮುಲು ಬೆಂಬಲಕ್ಕೆ ನಿಂತ ವಾಲ್ಮೀಕಿ ಸಮುದಾಯ… ರೆಡ್ಡಿ ವಿರುದ್ಧ ಆಕ್ರೋಶ
ಬಳ್ಳಾರಿ: ಜಿಲ್ಲಾ ಆಸ್ಪತ್ರೆ ಮಕ್ಕಳ ತಜ್ಞ ವೈದ್ಯ ಡಾ.ಸುನೀಲ್ ಕಿಡ್ನಾಪ್… 3 ಕೋಟಿಗೆ ಬೇಡಿಕೆ
Gate Close: ರೆಡ್ಡಿ ಮನೆ ಭಾಗದಲ್ಲಿದ್ದ ಗೇಟ್‌ಗೆ ಗೋಡೆ ನಿರ್ಮಿಸಿದ ಶ್ರೀರಾಮುಲು!