ಹಂಬಂತೋಟ: ದ್ವಿತೀಯ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ಥಾನಕ್ಕೆ ತಿರುಗೇಟು ನೀಡಿದ ಶ್ರೀಲಂಕಾ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಲಂಕೆಯ ಗೆಲುವಿನ ಅಂತರ 132 ರನ್.
ರವಿವಾರದ ಮುಖಾಮುಖೀಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 6 ವಿಕೆಟಿಗೆ 323 ರನ್ ರಾಶಿ ಹಾಕಿದರೆ, ಅಫ್ಘಾನಿಸ್ಥಾನ 42.1 ಓವರ್‌ಗಳಲ್ಲಿ 191ಕ್ಕೆ ಆಲೌಟ್ ಆಯಿತು. ಮೊದಲ ಪಂದ್ಯವನ್ನು ಅಫ್ಘಾನ್ 6 ವಿಕೆಟ್‌ಗಳಿಂದ ಜಯಿಸಿತ್ತು. 3ನೇ ಹಾಗೂ ಅಂತಿಮ ಮುಖಾಮುಖೀ ಬುಧವಾರ ನಡೆಯಲಿದೆ.
ಲಂಕಾ ಸರದಿಯಲ್ಲಿ ಇಬ್ಬರಿಂದ ಅರ್ಧ ಶತಕ ದಾಖಲಾಯಿತು. ಕುಸಲ್ ಮೆಂಡಿಸ್ ಸರ್ವಾಧಿಕ 78 ರನ್ (75 ಎಸೆತ, 7 ಬೌಂಡರಿ, 1 ಸಿಕ್ಸರ್), ದಿಮುತ್ ಕರುಣಾರತ್ನೆ 52 ರನ್ (62 ಎಸೆತ, 7 ಬೌಂಡರಿ) ಹೊಡೆದರು. ಆರಂಭಕಾರ ಪಥುಮ್ ನಿಸ್ಸಂಕ (43), ಸಮರವಿಕ್ರಮ (44) ಉಳಿದ ಪ್ರಮುಖ ಸ್ಕೋರರ್. ಅಜೇಯ 29 ರನ್ ಜತೆಗೆ 39 ರನ್ನಿಗೆ 3 ವಿಕೆಟ್ ಕಿತ್ತ ಧನಂಜಯ ಡಿ ಸಿಲ್ವ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಅಫ್ಘಾನ್ ಚೇಸಿಂಗ್ ಉತ್ತಮ ಮಟ್ಟದಲ್ಲೇ ಇತ್ತು. ಒಂದು ಹಂತ ದಲ್ಲಿ ಎರಡೇ ವಿಕೆಟಿಗೆ 146 ರನ್ ಪೇರಿಸಿ ಮುನ್ನುಗ್ಗುತ್ತಿತ್ತು. ಆರಂಭಕಾರ ಇಬ್ರಾಹಿಂ ಜದ್ರಾನ್ (54) ಮತ್ತು ನಾಯಕ ಹಶ್ಮತುಲ್ಲ ಶಾಹಿದಿ (57) ಕ್ರೀಸ್ ಆಕ್ರಮಿಸಿಕೊಂಡಿದ್ದರು. ಇವ ರಿಬ್ಬರನ್ನೂ 11 ರನ್ ಅಂತರದಲ್ಲಿ ಪೆವಿಲಿಯನ್‌ಗೆ ರವಾನಿಸಿದ ಧನಂಜಯ ಡಿ ಸಿಲ್ವ ಲಂಕೆಗೆ ಮೇಲುಗೈ ಒದಗಿಸಿದರು. 45 ರನ್ ಅಂತರದಲ್ಲಿ ಅಫ್ಘಾನ್ ತಂಡದ 8 ವಿಕೆಟ್ ಹಾರಿ ಹೋಯಿತು. ವನಿಂದು ಹಸರಂಗ ಕೂಡ 3 ವಿಕೆಟ್ ಉರುಳಿಸಿದರು. ದುಷ್ಮಂತ ಚಮೀರ ಇಬ್ಬರನ್ನು ಕೆಡವಿದರು.
Related Articles
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-6 ವಿಕೆಟಿಗೆ 323 (ಮೆಂಡಿಸ್ 78, ಕರುಣಾರತ್ನೆ 52, ಸಮರವಿಕ್ರಮ 44, ನಿಸ್ಸಂಕ 43, ಧನಂಜಯ ಔಟಾಗದೆ 29, ಹಸರಂಗ ಔಟಾಗದೆ 29, ನಬಿ 52ಕ್ಕೆ 2, ಫರೀದ್ ಅಹ್ಮದ್ 61ಕ್ಕೆ 2). ಅಫ್ಘಾನಿಸ್ಥಾನ-42.1 ಓವರ್‌ಗಳಲ್ಲಿ 191 (ಹಶ್ಮತುಲ್ಲ 57, ಇಬ್ರಾಹಿಂ ಜದ್ರಾನ್ 54, ರೆಹಮತ್ ಶಾ 36, ಒಮರ್‌ಜಾಯ್ 28. ಧನಂಜಯ 39ಕ್ಕೆ 3, ಹಸರಂಗ 42ಕ್ಕೆ 3, ಚಮೀರ 18ಕ್ಕೆ 2). ಪಂದ್ಯಶ್ರೇಷ್ಠ: ಧನಂಜಯ ಡಿ ಸಿಲ್ವ.