Advertisement

ಕಂಡಲ್ಲಿ ಗುಂಡು ಆದೇಶ; ಗಲಭೆ ನಿಯಂತ್ರಣಕ್ಕೆ ಶ್ರೀಲಂಕಾ ರಕ್ಷಣಾ ಇಲಾಖೆಯಿಂದ ಕ್ರಮ

08:55 AM May 11, 2022 | Team Udayavani |

ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಹತಾಶ ಜನತೆಯ ಆಕ್ರೋಶ ಮುಗಿಲು ಮುಟ್ಟಿದ್ದು, ಎಲ್ಲೆಲ್ಲೂ ಹಿಂಸಾಚಾರ ಆವರಿಸಿದೆ.

Advertisement

ಗಲಭೆಗಳು, ದೊಂಬಿಗಳಲ್ಲಿ 8 ಸಾವು ಸಂಭವಿಸಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶದಿಂದ ಶ್ರೀಲಂಕಾದ ರಕ್ಷಣಾ ಇಲಾಖೆ, ಕಂಡಲ್ಲಿ ಗುಂಡು ಆದೇಶ ಜಾರಿಗೊಳಿಸಿದೆ. ಎಲ್ಲ ಮೂರೂ ಪಡೆಗಳಿಗೂ ಈ ಕುರಿತಂತೆ ಆದೇಶ ನೀಡಿರುವುದಾಗಿ ಶ್ರೀಲಂಕಾ ಭೂಸೇನೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಇದರ ನಡುವೆಯೇ ಶ್ರೀಲಂಕಾದ ಅಧ್ಯಕ್ಷ ಗೊಟಬಾಯ ರಾಜಪಕ್ಸ, ಹಿಂಸಾಚಾರ ಎಂಬುದು ಸೇಡಿನ ಪ್ರತಿರೂಪ. ಹಾಗಾಗಿ ಹಿಂಸೆಯನ್ನು ಬಿಡಬೇಕು. ಶಾಂತಿ, ತಾಳ್ಮೆಯಿಂದ ಇರಬೇಕು ಎಂದು ಅಲ್ಲಿನ ಜನರಲ್ಲಿ ಮನವಿ ಮಾಡಿದ್ದಾರೆ.

ಅಧ್ಯಕ್ಷರ ಈ ಮನವಿ ಆಕ್ರೋಶಗೊಂಡ ಜನರ ಕಿವಿ ತಲುಪಿಲ್ಲ. ತಮ್ಮ ಹಿಂಸಾಚಾರ, ದೊಂಬಿ, ದಾಂಧಲೆಗಳನ್ನು ಅವರು ಮುಂದುವರಿಸಿದ್ದಾರೆ. ಜನಪ್ರತಿನಿಧಿಗಳ ವಾಹನಗಳು, ಮನೆಗಳನ್ನು ಧ್ವಂಸಗೊಳಿಸುವ ಕೆಲಸ ಬಹುತೇಕ ಎಲ್ಲ ನಗರಗಳಲ್ಲೂ ನಡೆಯುತ್ತಿದೆ.

Advertisement

ಓಡಿಹೋಗದಂತೆ ತಡೆಯಲು ಚೆಕ್‌ಪಾಯಿಂಟ್‌!: ಲಂಕಾದ ಸರಕಾರ ವಿರೋಧಿ ಪ್ರತಿಭಟನಕಾರರು ಮಂಗಳವಾರ ಬೆಳಗ್ಗೆಯೇ ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಚೆಕ್‌ಪಾಯಿಂಟ್‌ ಸ್ಥಾಪಿಸಿದ್ದಾರೆ. ರಾಜಪಕ್ಸ ಕುಟುಂಬದ ಆಪ್ತರು, ಸಹಚರರು ದೇಶಬಿಟ್ಟು ಹೋಗುವುದನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಂಗಳವಾರ ಮುಂಜಾನೆಯೇ ಕೊಲೊಂಬೋಗೆ ರಾಜಪಕ್ಸ ಬೆಂಬಲಿಗರು ತೆರಳುತ್ತಿದ್ದ 12ಕ್ಕೂ ಹೆಚ್ಚು ಬಸ್‌ಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ.

ಆಸ್ಪತ್ರೆ ಗೇಟಿಗೇ ಬೀಗ ಜಡಿದರು!: ಕೊಲೊಂಬೋದ ಪ್ರಮುಖ ರಾಷ್ಟ್ರೀಯ ಆಸ್ಪತ್ರೆಯ ಗೇಟ್‌ಗೆ ಪ್ರತಿಭಟನಕಾರರು ಬೀಗ ಜಡಿದಿದ್ದಾರೆ. ಹಿಂಸಾಚಾರದಲ್ಲಿ ಗಾಯಗೊಂಡಿದ್ದ ರಾಜಪಕ್ಸ ಪರ ಬೆಂಬಲಿಗರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆ. “ಅವರು ಕೊಲೆಗಾರರೇ ಆಗಿರಬಹುದು. ಆದರೆ ನಮಗೆ ಅವರು ರೋಗಿಗಳು. ಅವರಿಗೆ ಚಿಕಿತ್ಸೆ ನೀಡುವುದು ನಮ್ಮ ವೃತ್ತಿಧರ್ಮ’ ಎಂದು ಹೇಳುತ್ತಾ ವೈದ್ಯರು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದ್ದಾರೆ. ಕೊನೆಗೆ ಸೇನಾಪಡೆ ಯೋಧರು ಬಂದು ಆಸ್ಪತ್ರೆಯ ದ್ವಾರದ ಲಾಕ್‌ ಮುರಿದು 219 ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು.

ಕಾರ್ಮಿಕ ಒಕ್ಕೂಟದ ಮುಷ್ಕರ ಆರಂಭ: ಕಿಚ್ಚು ಹತ್ತಿಕೊಂಡ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ದೇಶವ್ಯಾಪಿ ಕರ್ಫ್ಯೂ ಬುಧವಾರದವರೆಗೂ ಮುಂದುವರಿಯಲಿದೆ. ಈ ನಡು ವೆಯೇ ಕಾರ್ಮಿಕ ಒಕ್ಕೂಟವು ಸರಕಾರ ವಿರೋಧಿ ಮುಷ್ಕರ ಆರಂಭಿಸಿದೆ. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಸರಕಾರಿ ಬೆಂಬಲಿತ ಗುಂಪುಗಳು ದಾಳಿ ನಡೆಸಿದ್ದನ್ನು ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಂಗಳವಾರದಿಂದಲೇ ಆರಂಭಿಸಿರುವುದಾಗಿ ತಿಳಿಸಿದೆ.

ಸಂಸತ್‌ ಅಧಿವೇಶನಕ್ಕೆ ಸೂಚನೆ: ಅನಿರೀಕ್ಷಿತ ಹಿಂಸಾಚಾರ, ವ್ಯಾಪಕ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ವಾರವೇ ಸಂಸತ್‌ನ ಅಧಿವೇಶನ ಕರೆಯುವಂತೆ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರಿಗೆ ಸಂಸತ್‌ನ ಸ್ಪೀಕರ್‌ ಮಹೀಂದಾ ಯಾಪಾ ಅಬಯ ವರ್ದನೆ ಸೂಚಿಸಿದ್ದಾರೆ. ಪ್ರಸ್ತುತ ಪ್ರಧಾನಿಯೂ ರಾಜೀನಾಮೆ ನೀಡಿರುವ ಕಾರಣ ನಿಗದಿತ ದಿನಾಂಕದಂದೇ ಅಂದರೆ ಮೇ 17ರಂದೇ ಅಧ್ಯಕ್ಷರು ಅಧಿವೇಶನ ಕರೆಯಬೇಕಾಗುತ್ತದೆ ಎಂದು ಸಂಸತ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಹೇಳಿದ್ದೇನು?
ಶ್ರೀಲಂಕಾ ಪ್ರಧಾನಿ ಮಹೀಂದಾ ರಾಜಪಕ್ಸ ಅವರ ರಾಜೀನಾಮೆ ಹಾಗೂ ಅನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಮಂಗಳವಾರ ಭಾರತ ಪ್ರತಿಕ್ರಿಯೆ ನೀಡಿದೆ. ಭಾರತದ ಆತ್ಮೀಯ ನೆರೆರಾಷ್ಟ್ರವಾಗಿರುವ ಹಾಗೂ ಐತಿಹಾಸಿಕ ಸಂಬಂಧ ಹೊಂದಿರುವ ಶ್ರೀಲಂಕಾದ ಪ್ರಜಾಸತ್ತೆ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತವು ಪರಿಪೂರ್ಣ ಬೆಂಬಲ ನೀಡುತ್ತದೆ. ಲಂಕಾದ ಜನರ ಹಿತಾಸಕ್ತಿಯೇ ನಮಗೆ ಮುಖ್ಯ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್‌ ಬಗಿc ಹೇಳಿದ್ದಾರೆ. ಜತೆಗೆ, ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಲಂಕೆಗೆ ನೀಡಿರುವ ನೆರವುಗಳ ಕುರಿತೂ ಅವರು ಪ್ರಸ್ತಾಪಿಸಿದ್ದಾರೆ. ನೆರೆರಾಷ್ಟ್ರವೇ ಮೊದಲು ಎಂಬ ನಮ್ಮ ನೀತಿಗೆ ಅನುಗುಣವಾಗಿ ಶ್ರೀಲಂಕಾದ ಜನರು ಈ ಸಂಕಷ್ಟದಿಂದ ಹೊರಬರಲಿ ಎಂಬ ಕಾರಣಕ್ಕಾಗಿ ಭಾರತವು ಪ್ರಸಕ್ತ ವರ್ಷ 3.5 ಶತಕೋಟಿ ಡಾಲರ್‌ ಮೌಲ್ಯದ ಸಹಾಯವನ್ನು ಮಾಡಿದೆ ಎಂದೂ ಬಗಿc ಮಾಹಿತಿ ನೀಡಿದ್ದಾರೆ.

ದೇಶವಾಸಿಗಳೆಲ್ಲ ಹಿಂಸಾಚಾರ ಕೊನೆಗೊಳಿಸಿ, ಶಾಂತಿ ಕಾಪಾಡಬೇಕು. ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವ ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ.
-ಗೋಟಬಯ ರಾಜಪಕ್ಸ, ಅಧ್ಯಕ್ಷ

ದಾಳಿಗೆ ಪ್ರಚೋದನೆ ನೀಡುವ ಮೂಲಕ ದೇಶವ್ಯಾಪಿ ಹಿಂಸಾಚಾರಕ್ಕೆ ಕಾರಣರಾದ ಮಹಿಂದಾ ರಾಜಪಕ್ಸರನ್ನು ಬಂಧಿಸಬೇಕು.
-ಮೈತ್ರಿಪಾಲ ಸಿರಿಸೇನಾ,
ಶ್ರೀಲಂಕಾ ಮಾಜಿ ಅಧ್ಯಕ್ಷ

ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ರಾಜಪಕ್ಸ ಅವರನ್ನು ಕೂಡಲೇ ಬಂಧಿಸಿ, ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕು.
-ಎಂ. ಎಂ. ಸುಮನ್‌ಥಿರನ್‌, ತಮಿಳು ಶಾಸಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next