ಮಂಗಳೂರು: ಶ್ರೀಲಂಕಾದಲ್ಲಿ ರವಿವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ರಾಜ್ಯ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ನಗರದಲ್ಲಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅಧ್ಯಕ್ಷತೆಯಲ್ಲಿ ಗುರುವಾರ ಪ್ರಮುಖ ಧಾರ್ಮಿಕ ಕೇಂದ್ರ, ಉದ್ಯಮ ಸಂಸ್ಥೆಗಳು ಮತ್ತು ಮಾಲ್ ಹಾಗೂ ಜನಸಂದಣಿ ಇರುವ ತಾಣಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಶೇಷ ಸಭೆ ನಡೆಯಿತು.
ನಗರದ ಸುತ್ತಮುತ್ತಲ ಪ್ರಮುಖ ದೇವಸ್ಥಾನಗಳು, ಚರ್ಚ್, ಮಸೀದಿಗಳು, ಉದ್ಯಮ ಸಂಸ್ಥೆಗಳಾದ ಒಎನ್‌ಜಿಸಿ ಎಂಆರ್‌ಪಿಎಲ್, ನವ ಮಂಗಳೂರು ಬಂದರು, ಇನ್ಫೋಸಿಸ್, ವಿಮಾನ ನಿಲ್ದಾಣ, ಮಾಲ್‌ಗಳು ಮತ್ತಿತರ ಸಂಸ್ಥೆಗಳ ಆಡಳಿತಾಧಿಕಾರಿಗಳು ಮತ್ತು ಪ್ರತಿನಿಧಿಗಳು ಈ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು.
ದೇವಸ್ಥಾನ, ಮಸೀದಿ, ಚರ್ಚ್‌ಗಳ ಆವರಣ ಗೋಡೆ ಭದ್ರಪಡಿಸುವುದು, ದ್ವಾರ, ಗೇಟ್‌ಗಳನ್ನು ಬಲಪಡಿಸುವುದು, ಸಿಸಿ ಕೆಮರಾ, ಲೋಹ ಶೋಧಕ ಅಳವಡಿಸುವುದು, ಭದ್ರತಾ ಸಿಬಂದಿ ನೇಮಕ ಮತ್ತಿತರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪೊಲೀಸ್ ಆಯುಕ್ತರು ಸಲಹೆಗಳನ್ನು ನೀಡಿದರು. ಕೆಲವು ಮಾಲ್‌ಗಳಲ್ಲಿ ಲೋಹ ಶೋಧಕ ಅಳವಡಿಸಿದ್ದರೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಭವಿಷ್ಯದಲ್ಲಿ ಹಾಗಾಗಬಾರದು ಎಂದು ಸೂಚನೆ ನೀಡಲಾಯಿತು.
ಅಪರಿಚಿತರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ನಿಗಾ ಇರಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ ಕಮಿಷನರ್, ಅಗತ್ಯ ಬಿದ್ದರೆ ಪೊಲೀಸರು ಯಾವುದೇ ಸಮಯದಲ್ಲೂ ನೆರವು ಒದಗಿಸಲು ಸಿದ್ಧರಿದ್ದಾರೆ ಎಂದರು.
ಭದ್ರತಾ ಸಿಬಂದಿ ನೇಮಿಸಬೇಕು ಮತ್ತು ನೇಮಕಗೊಳ್ಳುವ ಭದ್ರತಾ ಸಿಬಂದಿಯ ಪೂರ್ವಾಪರ ಬಗ್ಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಹೊಂದಿರ ಬೇಕು. ಮಾಲ್‌ಗಳ ಭದ್ರತಾ ಸಿಬಂದಿ ಹೇಗೆ ತಪಾಸಣೆ ನಡೆಸಬೇಕು ಎಂಬ ಬಗ್ಗೆ ಶೀಘ್ರವೇ ತರಬೇತಿ ಹಮ್ಮಿಕೊಳ್ಳಲಾಗುವುದು. ಅಲ್ಲದೆ ಖಾಸಗಿ ಭದ್ರತಾ ಸಿಬಂದಿಯ ಕ್ರಿಮಿನಲ್ ಹಿನ್ನೆಲೆಯನ್ನು ಕಡ್ಡಾಯವಾಗಿ ಪೊಲೀಸ್ ಇಲಾಖೆಯಲ್ಲಿ ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಬೇಕು ಎಂದು ಕಮಿಷನರ್ ಸೂಚನೆ ನೀಡಿದರು.
ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್ ಉಪಸ್ಥಿತರಿದ್ದರು.