Advertisement

ಸ್ವರ್ಣಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಹಾರ

01:05 AM Dec 02, 2021 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಂದು ನಡೆಯುವ ಲಕ್ಷದೀಪೋತ್ಸವದ ಎರಡನೇ ದಿನವಾದ ಮಂಗಳವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಗೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಸಂಪ್ರದಾಯದಂತೆ ಕೆರೆಕಟ್ಟೆ ಉತ್ಸವವು ಸಕಲ ಪೂಜಾ ನಿಯಮಗಳೊಂದಿಗೆ ನೆರವೇರಿತು.

Advertisement

ಐದು ದಿನಗಳ ಕಾಲ ಈ ಉತ್ಸವದ ವೇಳೆ ಮಂಜುನಾಥ ಸ್ವಾಮಿಯು ದೇವಸ್ಥಾನದಿಂದ ಹೊರ ಬಂದು ಭಕ್ತಸಾಗರಕ್ಕೆ ದರ್ಶನ ನೀಡುವುದು ವಿಶೇಷವಾಗಿದೆ. ದೇಗುಲದ ಗರ್ಭಗುಡಿಯ ಮುಂಭಾಗದ ಅಂಗಣದಲ್ಲಿ ಸ್ವಾಮಿಯನ್ನು ಸ್ವರ್ಣಪಲ್ಲಕ್ಕಿಯಲ್ಲಿ ಕೂರಿಸಿ ಉಡಿಕೆ ಸುತ್ತು, ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸುತ್ತುಗಳೊಂದಿಗೆ ಕರೆತರಲಾಯಿತು.

ಆ ಬಳಿಕ ದೇವರನ್ನು ದೇಗುಲದ ಮುಂಭಾಗದ ಕೆರೆ ಕಟ್ಟೆಗೆ ಕೊಂಡೊಯ್ಯುವ ಮುನ್ನ ಬಲಿ ಕಲ್ಲು ಶುದ್ಧೀಕರಿಸಿ ಕ್ಷೇತ್ರಪಾಲನಿಗೆ ಪೂಜೆ ಸಲ್ಲಿಸಿ ದೇವಾಲಯದ ಮುಂಭಾಗದಿಂದ ವಿವಿಧ ತೆರನಾದ ವಾದ್ಯಗಳೊಂದಿಗೆ ವಿಜೃಂಭಣೆಯ ಮೆರವಣಿಗೆ ನಡೆಯಿತು. ಕೆರೆಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಅನಂತರ ಸ್ವಾಮಿಯನ್ನು ರಥದಲ್ಲಿ ಕುಳ್ಳಿರಿಸಿ ಭಕ್ತರು ದೇವಾಲಯದ ಸುತ್ತ ಒಂದು ಸುತ್ತು ಎಳೆದು ಮಂಜುನಾಥ ಸ್ವಾಮಿಯನ್ನು ಸಾನಿಧ್ಯಕ್ಕೆ ಕರೆದುಕೊಂಡು ಹೋಗಲಾಯಿತು.

ಡಿ. 1ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಲಲಿತಕಲಾ ಗೋಷ್ಠಿ ನಡೆಯಿತು.

ಇದನ್ನೂ ಓದಿ:ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

Advertisement

ಇಂದು ಸರ್ವಧರ್ಮ ಸಮ್ಮೇಳನ
ಡಿ. 2ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಸಮ್ಮೇಳನ ಉದ್ಘಾಟಿಸುವರು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸ್ವಾಗತ ಭಾಷಣ ಮಾಡುವರು. ಬೆಂಗಳೂರಿನ ಎಸ್‌. ವ್ಯಾಸಯೋಗ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ| ರಾಮಚಂದ್ರ ಜಿ. ಭಟ್ಟ ಅಧ್ಯಕ್ಷತೆ ವಹಿಸುವರು. ಸಾಗರದ ಸಾಹಿತಿ ಸಫ್ರಾಜ್‌ ಚಂದ್ರಗುತ್ತಿ, ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕಿ ಡಾ| ಎಂ.ಎಸ್‌. ಪದ್ಮ ಮತ್ತು ಶಿವಮೊಗ್ಗ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವೀರೇಶ್‌ ವಿ. ಮೊರಾಸ್‌ ಧಾರ್ಮಿಕ ಉಪನ್ಯಾಸ ನೀಡುವರು. ನ. 3ರಂದು ಸಾಹಿತ್ಯ ಸಮ್ಮೇಳನದ 89 ಅಧಿವೇಶನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next