Advertisement

600 ಲೀ. ಪರಿಶುದ್ಧ ಎಳ್ಳೆಣ್ಣೆಯಿಂದ ಲಕ್ಷ ದೀಪೋತ್ಸವ

02:15 PM Nov 24, 2020 | Suhan S |

ಉಡುಪಿ, ನ. 23:  ಶ್ರೀಕೃಷ್ಣಮಠದಲ್ಲಿ ಕೊರೊನಾ ಸೋಂಕಿನ ಕಾರಣದಿಂದ ಈ ಬಾರಿ ಸಾರ್ವಜನಿಕರು ಭಾಗವಹಿಸಲು ಅವಕಾಶವಿಲ್ಲದ, ಮಠದ ಸೀಮಿತ ಸಿಬಂದಿ  ಭಾಗವಹಿಸುವ ಲಕ್ಷದೀಪೋತ್ಸವ ನಡೆಯುವುದಾದರೂ ಇದುವರೆಗೆ ನಡೆಯದಂತಹ ಪರಿಶುದ್ಧ ಸುಮಾರು 600 ಲೀ. ಎಳ್ಳೆಣ್ಣೆಯಲ್ಲಿ ಲಕ್ಷದೀಪಗಳನ್ನು ಉರಿಸಲಾಗುತ್ತದೆ.

Advertisement

ಲಕ್ಷದೀಪೋತ್ಸವ ನ. 27ರಿಂದ ಆರಂಭಗೊಂಡು 30ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಸಂದರ್ಭ ಸಂಜೆ ಪೂಜೆಯಾದ ಬಳಿಕ ರಥಬೀದಿ ಸುತ್ತ ನೆಡಲಾದ ಅಟ್ಟಣಿಗೆಗಳ ಸಾಲಿನಲ್ಲಿ ಮತ್ತು ಮಧ್ವಸರೋವರದ ದಂಡೆ ಮೇಲೆ ಸಾವಿರಾರು ಮಣ್ಣಿನ ಹಣತೆಗಳನ್ನು ಇರಿಸಿ ದೀಪಗಳನ್ನು ಉರಿಸಲಾಗುವುದು.

ನಮ್ಮ ಎಣ್ಣೆ-ದೇವರ ಎಣ್ಣೆ: ತುಲನೆ :

ನಾವು ಸಾಮಾನ್ಯವಾಗಿ ಎಣ್ಣೆ ಎಂದಾಕ್ಷಣ ಅದರ ಗುಣಮಟ್ಟದ ಬಗೆಗೆ ಚಿಂತನೆ ಮಾಡುವುದಿಲ್ಲ. ದೇಹಕ್ಕೆ ಆಹಾರವಾಗಿ ಸ್ವೀಕರಿಸುವ ಎಣ್ಣೆಯ ಗುಣಮಟ್ಟಕ್ಕಾಗಿ ಮಾತ್ರ ಆಲೋಚನೆ ಮಾಡುವುದಿದೆ. ದೇವರ ಹೆಸರಿನಲ್ಲಿ ಉರಿಸುವ ದೀಪಕ್ಕೆ ಬಳಸುವ ಎಣ್ಣೆ ಕಳಪೆಯದ್ದಾದರೆ ಅದು ಸುತ್ತಲ ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಯೋಚಿಸುವುದಿಲ್ಲ. ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಎಣ್ಣೆಯ ಪರಿಶುದ್ಧತೆ ಕುರಿತು ಚಿಂತನೆ ನಡೆಸಿದರು. ಇದರ ಪರಿಣಾಮವೇ ಈಗ ಶ್ರೇಷ್ಠ ಗುಣಮಟ್ಟದ ಎಳ್ಳೆಣ್ಣೆಯಿಂದ ಶ್ರೀಕೃಷ್ಣಮಠದಲ್ಲಿ ದೀಪಗಳನ್ನು ಉರಿಸಲಾಗುತ್ತಿದೆ.

ಎಣ್ಣೆ ಉತ್ಪಾದನೆ ಮಾರ್ಗ :

Advertisement

ಎಣ್ಣೆಯನ್ನು ಯಾಂತ್ರಿಕವಾಗಿ ಎಕ್ಸೈಲ್ಲರ್‌ ಅಥವಾ ಸಾಂಪ್ರದಾಯಿಕ ಗಾಣದ ಪದ್ಧತಿ ಯಲ್ಲಿ ಉತ್ಪಾದಿಸಬಹುದು. ಯಾಂತ್ರಿಕ ವಾಗಿ ಉತ್ಪಾದಿಸುವಾಗ 200 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ಪ್ರಕ್ರಿಯೆಯಲ್ಲಿ ಎಣ್ಣೆ ಹೊರಗೆ ಬರುತ್ತದೆ. ಗಾಣದ ಮೂಲಕ ತೆಗೆದಾಗ ಉಷ್ಣಾಂಶ ಇರುವುದಿಲ್ಲ, ಇದ್ದರೂ ಸ್ವಲ್ಪ ಉಗುರು ಬೆಚ್ಚಗಿನ ಉಷ್ಣಾಂಶವಷ್ಟೆ. ಯಂತ್ರದ ಮೂಲಕ ತೆಗೆದಾಗ ಎಣ್ಣೆ ಸಿಗುವ ಪ್ರಮಾಣ ಹೆಚ್ಚಿಗೆ ಇರುತ್ತದೆ. ಈ ಕಾರಣದಿಂದ ಯಾಂತ್ರಿಕತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಸಿದ್ಧಿಗೆ ಬಂತು. ಪ್ರಮಾಣವನ್ನು ಅಳೆಯುವಾಗ ಗುಣಮಟ್ಟ ಕಳಪೆಯಾಗುವ ಕುರಿತು ಯಾರೂ ಯೋಚಿಸಲಿಲ್ಲ. ಗಾಣದ ಮೂಲಕ ತೆಗೆಯುವಾಗ ಇನ್ನೂ ಎರಡು ಮಾರ್ಗಗಳಿವೆ. ಮರದ ಗಾಣದ ಬಳಕೆ ಇನ್ನೂ ಶ್ರೇಷ್ಠ, ಕೇವಲ ನಾಲ್ಕೈದು ದಶಕಗಳ ಹಿಂದೆ ಎತ್ತು ಅಥವಾ ಕೋಣಗಳನ್ನು ತಿರುಗಿಸಿ ಎಣ್ಣೆ ಉತ್ಪಾದಿಸುವ ಕ್ರಮವಿತ್ತು. ಈಗ ಎತ್ತು/ಕೋಣಗಳ ಸ್ಥಾನದಲ್ಲಿ ಮೋಟಾರ್‌ ಯಂತ್ರಗಳು ಬಂದಿವೆ. ಎತ್ತು, ಕೋಣಗಳ ಸಹಾಯದಿಂದ ಉತ್ಪಾದನೆಯಾಗುವ ಎಣ್ಣೆಯ ಗುಣಮಟ್ಟ ಮೋಟಾರು ಯಂತ್ರಗಳಿಂದ ಉತ್ಪಾದನೆಯಾಗುವ ಎಣ್ಣೆಗಿಂತಲೂ ಖಂಡಿತವಾಗಿ ಶ್ರೇಷ್ಠವಿರುತ್ತದೆ ಎನ್ನುತ್ತಾರೆ ಕೃಷ್ಣಮಠಕ್ಕೆ ಎಣ್ಣೆ ಪೂರೈಸುತ್ತಿರುವ ಡಾ| ಚಂದ್ರಶೇಖರ್‌.

ಕೆ.ಜಿ. ಎಳ್ಳಿಗೆ 150 ರೂ., ಎಣ್ಣೆ ಬೆಲೆ? :

ಯಾಂತ್ರಿಕ ಮಾರ್ಗದಲ್ಲಿ ಎರಡು ಕೆ.ಜಿ. ಎಳ್ಳಿನಿಂದ 1 ಕೆ.ಜಿ. ಎಣ್ಣೆ ಸಿಕ್ಕಿದರೆ, ಗಾಣದ ಮಾರ್ಗದಲ್ಲಿ 2.5 ಕೆ.ಜಿ. ಎಳ್ಳಿನಿಂದ 1 ಕೆ.ಜಿ. ಎಣ್ಣೆ ಸಿಗುತ್ತದೆ. ಆದರೆ ಗುಣಮಟ್ಟದಲ್ಲಿ ಪ್ರಮಾಣದಲ್ಲಿ ಕಡಿಮೆ ಸಿಗುವ ಎಣ್ಣೆ ಉತ್ತಮ. ಒಂದು ಕೆ.ಜಿ. ಎಳ್ಳಿನ ಬೆಲೆ 150 ರೂ. ಮಾರುಕಟ್ಟೆಯಲ್ಲಿ 90 ರೂ.ನಲ್ಲಿಯೂ ದೀಪದ ಎಣ್ಣೆ ಸಿಗುವ ಸ್ಥಿತಿ ಇದೆ. ಆಯುರ್ವೇದ ವೈದ್ಯರಾದ ಡಾ| ಚಂದ್ರಶೇಖರ್‌ ಅವರು ತಮ್ಮ ರೋಗಿಗಳ ಚಿಕಿತ್ಸೆಗಾಗಿ ಪರಿಶುದ್ಧ ಎಣ್ಣೆಯನ್ನು ಬಳಸಿದಾಗ ಅದರ ಪ್ರಯೋಜನ ಕಂಡುಬಂದು ಮಾರ್ಪಳ್ಳಿಯಲ್ಲಿ ಎಣ್ಣೆ ತೆಗೆಯುವ ಪ್ರಯೋಗಕ್ಕೆ ಮುಂದಾದರು. ಶ್ರೀಕೃಷ್ಣಮಠದವರು ನಿತ್ಯದ ಬಳಕೆಗಾಗಿಯೂ ಡಾ| ಚಂದ್ರಶೇಖರ್‌ ಅವರಿಂದ ಎಳ್ಳೆಣ್ಣೆಯನ್ನು ರಖಂ ದರದಲ್ಲಿ ತರಿಸಿಕೊಳ್ಳುತ್ತಿದ್ದಾರೆ. ಕೃಷ್ಣಮಠದಲ್ಲಿ ಹಿಂದೆ ಭಕ್ತರು ಎಣ್ಣೆಯನ್ನು ತಂದು ದೀಪಕ್ಕೆ ಹಾಕುವ ಕ್ರಮವಿತ್ತು. ಎಣ್ಣೆ ಹಾಕುವ ಬದಲು ಎಳ್ಳನ್ನು ಪಡೆದು ಅದರಿಂದ ಎಣ್ಣೆಯನ್ನು ಮಾಡಿಸಿ ದೀಪ ಉರಿಸುವ ಕ್ರಮವನ್ನು ಚಾಲ್ತಿಗೆ ತರಲಾಯಿತು.

2.5 ಲ.ರೂ. ಎಣ್ಣೆ ಖರ್ಚು : ಲಕ್ಷದೀಪೋತ್ಸವದಲ್ಲಿ ನಿತ್ಯ ಸುಮಾರು 150 ಲೀ. ಎಣ್ಣೆ ಅಗತ್ಯವಿದೆ. ನಾಲ್ಕು ದಿನಗಳಿಗೆ ಸುಮಾರು 600 ಲೀ. ಎಣ್ಣೆ ಬೇಕು. ಇವಿಷ್ಟೂ ಎಣ್ಣೆ ಪರಿಶುದ್ಧವಾಗಿರಬೇಕೆಂದು ಪರ್ಯಾಯ ಸ್ವಾಮೀಜಿ ನಿರ್ಧರಿಸಿದ್ದಾರೆ. ಕೇವಲ ಎಣ್ಣೆ ಬೆಲೆಯೇ ಸುಮಾರು 2.5 ಲ.ರೂ. ಆಗುತ್ತದೆ. ಪರಿಶುದ್ಧ ಎಳ್ಳೆಣ್ಣೆಯಿಂದ ಸಾವಿರಾರು ದೀಪಗಳು ಏಕಕಾಲದಲ್ಲಿ ಉರಿದರೆ ವಾತಾವರಣ ಹೇಗಿರಬಹುದು? ಇದನ್ನು ನ. 27ರಿಂದ ನಾಲ್ಕು ದಿನ ಅನುಭವಿಸಬೇಕಾಗಿದೆಯಷ್ಟೆ, ನಮ್ಮ ನಮ್ಮ ಮನೆಗಳಲ್ಲಿಯೂ ಅನುಭವಿಸಬಹುದಷ್ಟೆ?

ಕೃಷ್ಣ ಮಠದಲ್ಲಿ ಪರಿಶುದ್ಧ ಎಳ್ಳೆಣ್ಣೆ ಬಳಕೆ :

ಪರಿಶುದ್ಧ ಎಳ್ಳೆಣ್ಣೆಯನ್ನು ಮಾತ್ರ ಶ್ರೀಕೃಷ್ಣಮಠದಲ್ಲಿ ಉಪಯೋಗಿಸುತ್ತಿದ್ದು, ಇದೇ ಗುಣಮಟ್ಟದ ಎಳ್ಳೆಣ್ಣೆಯಿಂದ ಲಕ್ಷದೀಪೋತ್ಸವ ನಡೆಯಬೇಕೆಂಬುದು ನಮ್ಮ ಇರಾದೆ. ನಾಲ್ಕು ದಿನಗಳ ಉತ್ಸವಕ್ಕೆ ಸುಮಾರು 600 ಲೀ. ಎಣ್ಣೆ ಬೇಕಾಗುತ್ತದೆ. ನಾಲ್ಕೂ ದಿನ ಸಂಜೆ ವೇಳೆ ಇಡೀ ರಥಬೀದಿಯಲ್ಲಿ  ಪರಿಶುದ್ಧ  ಎಳ್ಳೆಣ್ಣೆಯ ದೀಪದಿಂದ ಭಗವಂತನನ್ನು ಆರಾಧಿಸಬೇಕು ಎಂಬ ಹಂಬಲವಿದೆ.  – ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠ,  ಶ್ರೀಕೃಷ್ಣಮಠ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next