Advertisement

ವಿಜೃಂಭಣೆಯ ಶ್ರೀ ಕೋದಂಡರಾಮಚಂದ್ರಸ್ವಾಮಿ ಬ್ರಹ್ಮರಥೋತ್ಸವ

07:16 AM Mar 17, 2019 | Team Udayavani |

ಚಿಕ್ಕಮಗಳೂರು: ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ಕನ್ನಡ ರಾಮನ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಶನಿವಾರ ವೈಭವದಿಂದ ನಡೆಯಿತು.

Advertisement

ಉತ್ಸವದ ಪ್ರಯುಕ್ತ ಬೆಳಿಗ್ಗೆ ದೇವಾಲಯದಲ್ಲಿ ಶ್ರೀ ಕೃಷ್ಣ ಗಂಧೋತ್ಸವ ಕನ್ನಡ ರಾಮನಿಗೆ ವಸಂತ ಸೇವೆ, ತೋಮಾಲೆ ಸೇವೆ, ಪುಷ್ಪಾಲಂಕಾರ ಸೇವೆ, ಮಂಟಪಸೇವೆ ನೆರವೇರಿಸಲಾಯಿತು. ಮಹಾಮಂಗಳಾರತಿ ನಂತರ ಕೋದಂಡರಾಮನ ಉತ್ಸವ ಮೂರ್ತಿಯನ್ನು ಗರ್ಭ ಗುಡಿಯಿಂದ ಹೊರತಂದು ಪ್ರಾಕಾರದಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ದೇವಾಲಯದ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಉತ್ಸವ ಮೂರ್ತಿಯನ್ನು ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ನೆರದಿದ್ದ ಭಕ್ತರಿಂದ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತು. ಮಹಿಳೆಯರಿಂದ ಸಾಮೂಹಿಕ ಭಜನೆ, ನಾಮಸಂಕೀರ್ತನೆ ಜರುಗಿತು. ಪಾಂಚರಾತ್ರ ಆಗಮ ಪದ್ದತಿಯಲ್ಲಿ ಬ್ರಹ್ಮ ರಥಕ್ಕೆ ಪೂಜೆ, ಬಲಿ ಪ್ರಧಾನ ಮತ್ತು ಧಾರ್ಮಿಕ ವಿಧಿವಿಧಾನಗಳು ನಡೆದವು.

ರಥೋತ್ಸವದಲ್ಲೂ ಮತದಾನ ಜಾಗೃತಿ: ಇದೇ ವೇಳೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಅವರು ನೆರದಿದ್ದ ಭಕ್ತರಿಗೆ
ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಭಕ್ತರು ಮುಂಬರುವ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ಸಂಕಲ್ಪವನ್ನು ಸಾಮೂಹಿಕವಾಗಿ ಕೈಗೊಂಡರು.

ಮಳೆ, ಬೆಳೆ ಸಮೃದ್ಧಿಯಾಗಿ ಲೋಕಕ್ಕೆ ಸುಭಿಕ್ಷವಾಗುವಂತೆ ಪ್ರಾರ್ಥಿಸಲಾಯಿತು. ನಂತರ ದಾಸಯ್ಯರಿಂದ ಶಂಖನಾದ, ನಾದಸ್ವರ, ಗ್ರಾಮೀಣ ವಾದ್ಯಗಳು ಮತ್ತು ಭಜನಾ ತಂಡಗಳೊಂದಿಗೆ ಬ್ರಹ್ಮ ರಥ ಎಳೆಯಲಾಯಿತು.

Advertisement

 ಭಕ್ತರು ರಥದತ್ತ ಬಾಳೆಹಣ್ಣನ್ನು ತೂರಿ ಸಂಭ್ರಮಿಸಿದರು, ಮನೆಗಳ ಮುಂದೆ ಸಾರಿಸಿ ರಂಗವಲ್ಲಿ ಹಾಕಿ ಬ್ರಹ್ಮ ರಥವನ್ನು ಸ್ವಾಗತಿಸಿದ ಗ್ರಾಮಸ್ಥರು, ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ರಥೋತ್ಸವದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಬೇಸಿಗೆ ಹಿನ್ನೆಲೆಯಲ್ಲಿ ದತ್ತ ಭಜನಾ ಮಂಡಳಿಯಿಂದ ಭಕ್ತರಿಗೆ ಮಜ್ಜಿಗೆ ವಿತರಿಸಲಾಯಿತು. ಗ್ರಾಮದ ಕೆಲ ಮನೆಗಳಲ್ಲಿ ಭಕ್ತರಿಗೆ ಪುಳಿಯೊಗರೆ, ಪಾನಕ, ಕೋಸಂಬರಿ ನೀಡಲಾಯಿತು.

ಉತ್ಸವದ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ವಿಧಾನ ಪರಿಷತ್‌ ಉಪಸಭಾಪತಿ ಎಸ್‌. ಎಲ್‌.ಧರ್ಮೇಗೌಡ, ಶಾಸಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ ಹಾಜರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು, ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next