Advertisement

ಹಾನಗಲ್ಲ ಶ್ರೀಗಳ ಕೊಡುಗೆ ಅಪಾರ 

12:48 PM Mar 19, 2017 | |

ಹರಪನಹಳ್ಳಿ: ಅಖೀಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸುವ ಮೂಲಕ ಹರಿದು  ಹಂಚಿಹೋಗಿದ್ದ ವೀರಶೈವ ಸಮಾಜವನ್ನು ಒಗ್ಗೂಡಿಸುವಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ ಎಂದು ನೀಲಗುಂದ ಗುಡ್ಡದ ವಿರಕ್ತಮಠದಚನ್ನಬಸವ ಶಿವಯೋಗಿ ಸ್ವಾಮೀಜಿ ಸ್ಮರಿಸಿದರು. 

Advertisement

ಪಟ್ಟಣದ ತೆಗ್ಗಿನಮಠದ  ಚಂದ್ರಶೇಖರಸ್ವಾಮಿ ಸಭಾ ಭವನದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಹಾಗೂ ತೆಗ್ಗಿನಮಠ ಸಂಸ್ಥಾನದ ಸಂಯುಕ್ತಾಶ್ರಯದಲ್ಲಿ ಲಿಂ| ಹಾನಗಲ್‌ ಕುಮಾರ ಮಹಾಸ್ವಾಮಿಗಳವರ 150ನೇ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ದಾವಣಗೆರೆ ಜಿಲ್ಲಾ ಉಪನ್ಯಾಸ ಕಾರ್ಯಕ್ರಮಗಳ ಉದ್ಘಾಟಿಸಿ ಅವರು ಮಾತನಾಡಿದರು. 

ಶಿವಯೋಗಿ ಮಂದಿರದಲ್ಲಿ ವೀರಶೈವ ಅಧ್ಯಯನ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ನಾಡಿಗೆ ಅನೇಕ ಗುರುಗಳನ್ನು, ವಿದ್ವಾಂಸರನ್ನು, ಸಂಗೀತಗಾರರನ್ನು ನೀಡಿದ್ದಾರೆ. ಶ್ರೀಗಳ ಸಾಧನೆ ಮೂಲಕ ಸಮಾಜಕ್ಕೆ ಬಹಳ ಕೊಡುಗೆ ನೀಡಿದ್ದಾರೆ. ಮೂಢನಂಬಿಕೆ, ಮೌಡ್ಯ, ಅಸಮಾನತೆ ಹೋಗಲಾಡಿಸಿ ಪರಿವರ್ತನೆ ತಂದಿದ್ದಾರೆ. 

ಲಿಂ| ಕುಮಾರಶಿವಯೋಗಿಗಳು 1904ರಲ್ಲಿ ಹುಟ್ಟು ಹಾಕಿದ ವೀರಶೈವ ಮಹಾಸಭಾ ಇಂದಿಗೂ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿದೆ. ಇದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎಂದರು. ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ರಾಜಶೇಖರ್‌ ಮಾತನಾಡಿ, ದೂರ ದೃಷ್ಟಿ ಹೊಂದಿದ್ದ ಲಿಂ| ಕುಮಾರಶಿವಯೋಗಿಗಳ ಸಮಾಜಮುಖೀ ಕಾರ್ಯ ಆದರ್ಶಪ್ರಾಯ.

ಶ್ರೀಗಳು ಸ್ಥಾಪಿಸಿದ ಶಿವಯೋಗ ಮಂದಿರ ಸ್ವಾಮಿಗಳನ್ನು ತಯಾರಿಸುವ ಉತ್ತಮ ಕೇಂದ್ರವಾಗಿದೆ. ನಾಡಿನೆಲ್ಲೆಡೆ ಇಲ್ಲಿ ಅಭ್ಯಸಿಸಿದವರು ಅನೇಕ ಮಠಗಳಿಗೆ ಸ್ವಾಮಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಒಂದು ಕೋಮಿಗೆ ಸಂಬಂಧಪಟ್ಟ ಧರ್ಮ ವೀರಶೈವ ಧರ್ಮವಲ್ಲ, ವೀರಶೈವ ಮಠ ಮಾನ್ಯಗಳು ಎಲ್ಲಾ ಜಾತಿ ಜನಾಂಗದವರಿಗೂ ಶಿಕ್ಷಣ ನೀಡುತ್ತಾ ಶೈಕ್ಷಣಿಕ ಕ್ರಾಂತಿ ಮಾಡಿವೆ ಎಂದು ತಿಳಿಸಿದರು. 

Advertisement

ಸಾನ್ನಿಧ್ಯ ವಹಿಸಿದ್ದ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂ| ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ತಿಳಿದುಕೊಳ್ಳುವ ಪುಣ್ಯದ ಕಾರ್ಯದಲ್ಲಿ ಭಾಗಿಯಾಗುವಂಥ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಬದುಕಿನಲ್ಲಿ ಬದಲಾವಣೆ ಬಯಸುವವರು ದುಶ್ಚಟ ತ್ಯೇಜಿಸಬೇಕು ಎಂದರು. 

ಹುಬ್ಬಳಿಯ ದಾನೇಶ್ವರ ದೇವರು ಮಾತನಾಡಿ, ಹಾನಗಲ್‌ ಕುಮಾರ ಸ್ವಾಮಿಗಳು ಮಹಾ ಜ್ಯೋತಿ ಪುರುಷರು. ಕೇವಲ ಮಠಕ್ಕಾಗಿ ಅಂಟಿಕೊಳ್ಳದೇ ಸಮಾಜಕ್ಕಾಗಿ ದುಡಿಯುವ ಕಲ್ಪನೆಯನ್ನು ಹೇಳಿಕೊಟ್ಟಿದ್ದಾರೆ. ಸ್ವಾಮಿಗಳನ್ನು ಇಂದು ವ್ಯವಹಾರಿಕವಾಗಿ ಭಕ್ತರು ನೋಡುತ್ತಿದ್ದಾರೆ. ಆದರೆ ಪರಮ ಪೂಜ್ಯ ಕುಮಾರಸ್ವಾಮಿಗಳು ಭಕ್ತರ ಉದ್ದಾರದ ಜೊತೆಯಲ್ಲಿ ಯೋಗಕ್ಷೇಮಾದ ಭಾವನೆ, ಭಾವೈಕ್ಯತೆಯ ಸಂಗಮವನ್ನು ತುಂಬುವ ಸ್ವಾಮಿಗಳನ್ನು ತಯಾರು ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದು ನುಡಿದರು. 

ಹೂವಿನಹಡಗಲಿ ಗವಿಮಠದ ಡಾ.ಹಿರಿಯ ಶಾಂತವೀರ ಸ್ವಾಮೀಜಿ, ತೆಗ್ಗಿನಮಠ ಸಂಸ್ಥಾನದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿದರು. ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ವೀರಶೈವ ಸಮಾಜದ ಕಾರ್ಯದರ್ಶಿ ಎಚ್‌.ಮಲ್ಲಿಕಾರ್ಜುನ್‌, ಮುಖಂಡರಾದ ಗಂಗಾಧರ ಗುರುಮಠ, ತಲುವಾಗಲು ಮಲ್ಲಿಕಾರ್ಜುನ, ಟಿ.ಎಚ್‌. ಎಂ.ಮಲ್ಲಿಕಾರ್ಜುನ, ಎಂ.ಪಿ.ಎಂ. ಶಾಂತವೀರಯ್ಯ ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next