Advertisement

ಸೌಲಭ್ಯ ವಂಚಿತ ಬಿಳಿಗಿರಿರಂಗನಬೆಟ್ಟದ ಕಮರಿ!

02:48 PM May 29, 2023 | Team Udayavani |

ಯಳಂದೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ವೈಷ್ಣವ ಧಾರ್ಮಿಕ ಶ್ರದ್ಧಾಭಕ್ತಿ ಕೇಂದ್ರವಾಗಿರುವ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇಗುಲ ಇರುವ ಕಮರಿಯಲ್ಲಿ ಮೂಲ ಸೌಲಭ್ಯಗಳಿಲ್ಲದೆ ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸಮುದ್ರ ಮಟ್ಟಕ್ಕಿಂತ 5 ಸಾವಿರಕ್ಕಿಂತಲೂ ಹೆಚ್ಚು ಎತ್ತರದಲ್ಲಿರುವ ಬಿಳಿಗಿರಿರಂಗನಬೆಟ್ಟದ ದೇಗುಲ ದೊಡ್ಡ ಬಿಳಿಕಲ್ಲು ಗುಡ್ಡದ ಮೇಲಿರುವ ಕಮರಿಯಲ್ಲಿ ಸ್ಥಾಪಿತವಾಗಿದೆ. ದೇಗುಲವನ್ನು ಹೊಸದಾಗಿ ಜೀರ್ಣೋದ್ಧಾರ ಮಾಡಲಾಗಿದೆ. ದೇಗುಲದ ಬಳಿಪಕ್ಕದಲ್ಲಿರುವ ಕಮರಿಯಲ್ಲಿ ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬರುವ ಪ್ರತಿಭಕ್ತರು ಹಾತೊರೆಯುತ್ತಾರೆ. ಏಕೆಂದರೆ ಇದರ ಮೇಲೆ ನಿಂತರೆ ಇಡೀ ಕಾನನದ ಸೌಂದರ್ಯವನ್ನು ಸವಿಯಬಹುದು. ಈ ನಿಟ್ಟಿನಲ್ಲಿ ಇಲ್ಲಿಗೆ ಬರುವ ಪ್ರತಿ ಪ್ರವಾಸಿಗರ ಮೊದಲ ಆಯ್ಕೆ ಕಮರಿಯಾಗಿರುತ್ತದೆ. ಆದರೆ, ಇಲ್ಲಿಗೆ ಮೂಲ ಸೌಲಭ್ಯವನ್ನು ನೀಡುವಲ್ಲಿ ಸಂಬಂಧಪಟ್ಟ ಇಲಾಖೆ ಸೋತಿದೆ.

ಪ್ರವಾಸಿಗರು ಕುಳಿತುಕೊಳ್ಳಲು ಆಸನಗಳೇ ಇಲ್ಲ: ದೇಗುಲಕ್ಕೆ ಬರಲು ಇಲ್ಲಿ ಭಕ್ತರಿಗೆ ಎರಡು ಆಯ್ಕೆಗಳಿದ್ದು ಮೆಟ್ಟಿಲು ಅಥವಾ ಸ್ವಂತ ವಾಹನದಲ್ಲಿ ಬಂದರೆ ವಾಹನವನ್ನು ನಿಲ್ಲಿಸಿ ದೇಗುಲದ ಸನಿಹ ಇರುವ ಮೆಟ್ಟಿಲುಗಳನ್ನು ಹತ್ತಿ ಬರಬೇಕು. ಇಲ್ಲಿಗೆ ಬರುವ ಭಕ್ತರು ದೇವರ ದರ್ಶನ ಪಡೆದು ಇಲ್ಲಿನ ಕಮರಿಗೆ ತೆರಳುತ್ತಾರೆ. ಇಲ್ಲಿ ದೊಡ್ಡ ಮರಗಳೂ ಇವೆ. ಇದನ್ನು ಉದ್ಯಾನವಾಗಿ ರೂಪಿಸಿ ಇಲ್ಲಿ ಬರುವ ಪ್ರವಾಸಿಗರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿಲ್ಲ.

ಬೆಂಜ್‌ ಅಳವಡಿಸಿಲ್ಲ: ಈ ಹಿಂದೆ ಇಲ್ಲಿದ್ದ ಕಲ್ಲಿನ ಚಪ್ಪಡಿಗಳ ಆಸನಗಳನ್ನೂ ತೆರವುಗೊಳಿಸಲಾಗಿದೆ. ಹಾಗಾಗಿ, ಇಲ್ಲಿಗೆ ಬರುವ ಭಕ್ತರು ಇಲ್ಲಿ ದೇಗುಲದ ತಡೆಗೋಡೆ ನಿರ್ಮಾಣಕ್ಕೆ ಹಾಕಲು ನಿರ್ಮಿಸಿರುವ ಕಮಾನುಗಳ ಮೇಲೆಯೇ ಅಥವಾ ಕೆಳಗೆ ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ಇಲ್ಲಿಗೆ ಹಾಕಲು ಕಾಂಕ್ರೀಟ್‌ ಬೆಂಚ್‌ಗಳನ್ನು ತಂದು ದಾಸೋಹ ಭವನದ ಬಳಿ ಇಟ್ಟಿದ್ದರೂ ಇದನ್ನು ಇನ್ನೂ ಅಳವಡಿಸಿಲ್ಲ.

ಕೆಟ್ಟು ನಿಂತಿರುವ ನೀರಿನ ಘಟಕ: ಕಮರಿಯಲ್ಲೇ ದಾಸೋಹ ಭವನವೂ ಇದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇದು ಕೆಟ್ಟು ಹಲವು ತಿಂಗಳು ಕಳೆದರೂ ದುರಸ್ತಿ ಮಾಡಿಲ್ಲ. ಇಲ್ಲಿಗೆ ಬರುವ ಭಕ್ತರು ಇಲ್ಲಿರುವ ತೊಂಬೆ ನಲ್ಲಿಯ ನೀರನ್ನೇ ಕುಡಿಯಲು ಬಳಸುವ ಅನಿವಾರ್ಯತೆ ಇದೆ. ಇಲಾಖೆ ಯಿಂದ ನಿರ್ಮಿಸಿರುವ ಈ ಘಟಕವನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

Advertisement

ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ದೇಗುಲ ದರ್ಶನ, ಪ್ರಾಕೃತಿಕ ಸೊಬಗನ್ನು ಸವಿಯಲು ಬರುತ್ತಾರೆ. ಇಲ್ಲಿಗೆ ಭಕ್ತರು ಬರುವುದರಿಂದ ದೇಗುಲಕ್ಕೆ ಆದಾಯವೂ ಬರುತ್ತದೆ. ಆದರೆ, ಇಲ್ಲಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಬಂಧಪಟ್ಟ ಇಲಾಖೆ ಸೋತಿದೆ. ಈಗಲಾದರೂ ಇಲ್ಲಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು. ● ಶ್ವೇತಾ, ಪ್ರವಾಸಿಗರು, ಮೈಸೂರು.

ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ಪ್ರಸಿದ್ಧ ಪ್ರವಾಸಿತಾಣವಾಗಿದೆ. ಕಮರಿ ಮೇಲೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು, ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕೂಡಲೇ ಕ್ರಮ ವಹಿಸಬೇಕು. ● ಮನು, ಭಕ್ತ, ಯಳಂದೂರು.

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಸಂಬಂಧಪಟ್ಟ ಇಲಾಖೆಗೆ ಪತ್ರವನ್ನು ಬರೆಯಲಾಗಿದೆ. ಇಲ್ಲಿಗೆ ಭಕ್ತರು ಕೊಡುಗೆಯ ರೂಪದಲ್ಲಿ ಕಾಂಕ್ರೀಟ್‌ ಬೆಂಚ್‌ಗಳನ್ನು ನೀಡಿದ್ದಾರೆ. ಆದಷ್ಟು ಬೇಗ ಇದನ್ನು ಅಳವಡಿಸಿ ಪ್ರವಾಸಿಗರು ಕುಳಿತುಕೊಳ್ಳಲು ಅನುವು ಮಾಡಿಕೊಡಲಾಗುವುದು. ● ಮೋಹನ್‌ಕುಮಾರ್‌, ಇಒ, ಬಿಳಿಗಿರಿರಂಗನಾಥಸ್ವಾಮಿ ದೇಗುಲ.

– ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next