Advertisement
ಬೆಳಗ್ಗೆ 4 ಗಂಟೆಯಿಂದ ಜನಜಂಗುಳಿ, ವಾಹನ ದಟ್ಟಣೆ ಆರಂಭವಾಗುತ್ತದೆ. ಉಡುಪಿ ಜಿಲ್ಲೆ ಮಾತ್ರವಲ್ಲದೆ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರದ ದರ್ಶನಕ್ಕೆ ಬರುವುದು ಇಲ್ಲಿಯ ವಿಶೇಷ.
ಆಷಾಢ ಮಾಸದ ಬಳಿಕ ಬರುವ ಸಿಂಹ ಮಾಸ ನೂತನ ಮದುಮಕ್ಕಳಿಗೆ ವಿಶೇಷ. ಹೊಸದಾಗಿ ಮದುವೆಯಾದ ಮದುಮಕ್ಕಳು ದೇವರ ದರ್ಶನ ಮಾಡಿ ಹೋಗುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬರುತ್ತಿದೆ. ಮದುಮಗ ತನ್ನ ಮನೆ ಹಿರಿಯ ರೊಂದಿಗೆ ಬಂದು ತನ್ನ ಮಡದಿಯನ್ನು ಕರೆದೊಯ್ಯುವ ಹಾಗೂ ಮದುಮಗಳು ತನ್ನ ತಂದೆ-ತಾಯಿಯೊಂದಿಗೆ ಬಂದು ಗಂಡನ ಮನೆಯೆಡೆಗೆ ನಡೆಯಲು ಸೇರುವ ತಾಣ ಪೆರ್ಡೂರಿನ ಸಿಂಹ ಸಂಕ್ರಮಣವಾಗಿತ್ತು. ಅದಕ್ಕಾಗಿಯೇ ಕಳೆದ ವರ್ಷ ಮದುವೆಯಾದ ಜೋಡಿಗಳು ಜತೆಯಾಗಿ ಬಂದು ಮುಂದಿನ ಭವಿಷ್ಯಕ್ಕಾಗಿ ಶ್ರೀ ಸ್ವಾಮಿಯನ್ನು ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದ್ದು, ಇಂದು ಮದುಮಕ್ಕಳ ಜಾತ್ರೆ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.
Related Articles
ಸಂಕ್ರಮಣ ದೇವರು ಎಂದು ಪ್ರಸಿದ್ಧಿ ಪಡೆದ ಪೆರ್ಡೂರು ಕ್ಷೇತ್ರವು ವರ್ಷದ ಹನ್ನೆರಡು ರಾಶಿಗಳನ್ನು ಸೂರ್ಯ ಕ್ರಮಿಸುವ ಘಟ್ಟ ದಲ್ಲಿ ಅನಂತಪದ್ಮನಾಭ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆರಾಧಿಸುವ ಪದ್ಧತಿ ಹಿಂದಿನಿಂದಲೂ ಇದೆ. ಶ್ರೀ ಕ್ಷೇತ್ರದಲ್ಲಿ 12 ಸಂಕ್ರಮಣಕ್ಕೆ ತಪ್ಪದೇ ಬಂದು ಭಗವಂತನ ದರ್ಶನ ಪಡೆದರೆ ಸಂಕಲ್ಪ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.
Advertisement
ಹಿಂದೆ ಪ್ರತಿ ಸಂಕ್ರಮಣದಂದು ಕಾಲ್ನಡಿಗೆಯಲ್ಲಿಯೇ ದೇವರ ದರ್ಶನ ಪಡೆಯುತ್ತಿದ್ದರು. ಈಗಲೂ ಹೆಚ್ಚಿನ ಭಕ್ತರು ನಿರಾಹಾರರಾಗಿ ಶ್ರೀ ಸನ್ನಿಧಿಗೆ ಬಂದು ಹಣ್ಣು ಕಾಯಿ ಸಮರ್ಪಿಸಿ ಭಕ್ತಿಯಿಂದ ದೇವರಲ್ಲಿ ಪ್ರಾರ್ಥಿಸಿ ವ್ರತಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಒಳಾಂಗಣದ ಸುತ್ತ ತಗಡಿನ ಚಪ್ಪರಭಕ್ತರು ಯಾವುದೇ ನೂಕು ನುಗ್ಗಲಿಲ್ಲದೆ ಮಳೆಯಲ್ಲಿ ಒದ್ದೆಯಾಗದಂತೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ದೇವಸ್ಥಾನ ಒಳಾಂಗಣದ ಸುತ್ತ ತಗಡಿನ ಚಪ್ಪರ ಹಾಕಲಾಗಿದೆ. ಅಲ್ಲದೆ ದೇವಸ್ಥಾನ ಜೀಣೊìದ್ಧಾರದ ಅಂಗವಾಗಿ ಸುತ್ತುಪೌಳಿಯ ನೀಲ ನಕ್ಷೆ ತಯಾರಾಗಿದ್ದು ಭಕ್ತರ ಸಹಕಾರದೊಂದಿಗೆ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.
– ಪ್ರಮೋದ್ ರೈ ಪಳಜೆ, ಅಧ್ಯಕ್ಷ ರು, ದೇವಸ್ಥಾನ ವ್ಯವಸ್ಥಾಪನ ಸಮಿತಿ ಬಾಳೆಹಣ್ಣಿಗೊಲಿವ ಭಗವಂತ
ಬಾಳೆಹಣ್ಣಿಗೊಲಿದ ಭಗವಂತನೆಂದೇ ಖ್ಯಾತಿ ಪಡೆದ ಕದಳಿಪ್ರಿಯ ಪೆರ್ಡೂರು ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವರಿಗೆ ಸುಮಾರು ಒಂದು ಸಾವಿರ ವರ್ಷಗಳಿಂದಲೂ ಭಕ್ತರಿಂದ ಬಾಳೆಹಣ್ಣಿನ ಸೇವೆ ಇಲ್ಲಿ ನಡೆದು ಬರುತ್ತಿದೆ. ತಮ್ಮ ಇಷ್ಟಾರ್ಥ ಸಿದ್ಧಿ ಸಂಕಲ್ಪಗಳಿಗೆ ಬಾಳೆಹಣ್ಣಿನ ಸೇವೆ ಸಲ್ಲಿಸುವುದು ಇಲ್ಲಿ ವಿಶೇಷ. ಅನಾರೋಗ್ಯದ ನಿವಾರಣೆಗೆ ಸಾವಿರ ಬಾಳೆಹಣ್ಣು , 500 ಬಾಳೆಹಣ್ಣು, ದಿನಕ್ಕೊಂದು ಬಾಳೆಹಣ್ಣು , ಸಿಬ್ಲಿ ಹಣ್ಣು ಹೀಗೆ ಬಾಳೆಹಣ್ಣಿನ ಹರಕೆ ಸೇವೆ ನಡೆಯುತ್ತಿದೆ. ಕಳೆದ ವರ್ಷ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಬಾಳೆಹಣ್ಣು ಶ್ರೀ ದೇವರಿಗೆ ಸಮರ್ಪಿತಗೊಂಡಿದೆ.