Advertisement

ಸಿರಿ ಧಾನ್ಯ ಬೆಳೆಯಲು ರೈತರಿಗೆ ಸಲಹೆ

01:09 PM Jun 01, 2017 | |

ಹರಪನಹಳ್ಳಿ: ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ಕಡಿಮೆ ಖರ್ಚು ಹಾಗೂ ಹೆಚ್ಚು ಪೌಷ್ಟಿಕಾಂಶ ಗುಣವುಳ್ಳ ದ್ವಿದಳ ಧಾನ್ಯಗಳನ್ನು ಬೆಳೆಯಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಪಂ ಅಧ್ಯಕ್ಷೆ ಉಮಾರಮೇಶ ರೈತರಿಗೆ ಸಲಹೆ ನೀಡಿದರು. 

Advertisement

ತಾಲೂಕಿನ ತೆಲಿಗಿ ಗ್ರಾಮದಲ್ಲಿ ಮಂಗಳವಾರ ಕೃಷಿ ಅಭಿಯಾನ ಹಾಗೂ ಹೋಬಳಿ ಮಟ್ಟದ ರೈತರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬರಗಾಲದ ಹಿನ್ನೆಲೆಯಲ್ಲಿ ರೈತರ ಪರಿಸ್ಥಿತಿ ಇಂದು ಬಹಳ ಕಷ್ಟದಾಯಕವಾಗಿದೆ.

ಯಾವ ಕಾಲಕ್ಕೆ ಯಾವ ತರಹದ ಬೆಳೆ ಹಾಕಬೇಕು ಮತ್ತು ಯಾವ ಸಮಯದಲ್ಲಿ ಗೊಬ್ಬರ ಸಿಂಪಡಿಸಬೇಕು ಎಂಬುವುದನ್ನು ಸಮರ್ಪಕ ಮಾಹಿತಿ ಅಧಿಧಿಕಾರಿಗಳು ರೈತರಿಗೆ ನೀಡಬೇಕು. ಕೇಂದ್ರ ಸರ್ಕಾರ ರೈತರಿಗಾಗಿ ರೂಪಿಸಿರುವ ವಿವಿಧ ಯೋಜನೆಗಳ ಸದುಪಯೋಗವಾಗಬೇಕು ಎಂದರು. 

ಹಲುವಾಗಲು ಜಿಪಂ ಸದಸ್ಯೆ ಸುವರ್ಣ ನಾಗರಾಜ್‌ ಮಾತನಾಡಿ, ಏಕ ಗವಾಕ್ಷಿ ಮೂಲಕ ಕೃಷಿ ಯೋಜನೆಗಳನ್ನು ಪರಿಚಯಿಸುವುದೇ ಕೃಷಿ ಅಭಿಯಾನವಾಗಿದೆ. ಪ್ರತಿಯೊಬ್ಬ ರೈತರಿಗೂ ಮಾಹಿತಿ ಸಿಗಬೇಕಾದರೆ ಪ್ರತಿ ಜಿಪಂ ಕ್ಷೇತ್ರಗಳಿಗೊಂದರಂತೆ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 

ಪ್ರಸ್ತಾವಿಕವಾಗಿ ಕೃಷಿ ಇಲಾಖೆ ಉಪ ನಿರ್ದೇಶಕಿ ಸ್ಫೂರ್ತಿ ಮಾತನಾಡಿ, ತೆಲಿಗಿ ಹೋಬಳಿಯಲ್ಲಿ 475 ಕೃಷಿ ಹೊಂಡಗಳಿವೆ. 948 ಕೃಷಿ ಉಪಕರಣ, 906 ಸ್ಪಿಂಕ್ಲರ್‌ಗಳನ್ನು ವಿತರಣೆ ಮಾಡಿದ್ದು, 2500 ಮಣ್ಣಿನ ಮಾದರಿ ಪರೀಕ್ಷೆ ಮಾಡಿಸಲಾಗಿದೆ. ಸಿರಿ ಧಾನ್ಯಗಳನ್ನು ಬೆಳೆಯುವವರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು. 

Advertisement

ತಾಪಂ ಸದಸ್ಯ ವೆಂಕಟೇಶರೆಡ್ಡಿ ಮಾತನಾಡಿ, ರೈತರಿಗೆ ಬೆಳೆ ಪರಿಹಾರ, ವಿಮೆ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಇದರಿಂದ ಮಳೆ ಅಭಾವ ಉಂಟಾಗಿ ಬೆಳೆ ಕೈಕೊಟ್ಟರೂ ಸಹ ಅಲ್ಪ-ಸ್ವಲ್ಪ ಸಹಾಯ ಧನ ಬರುವುದರಿಂದ ರೈತರ ಬದುಕು ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು. 

ತೆಲಿಗಿ ಜಿಪಂ ಸದಸ್ಯೆ ಕೆ.ಆರ್‌.ಜಯಶೀಲ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ಆರ್‌.ತಿಪ್ಪೇಸ್ವಾಮಿ, ತಾಪಂ ಸದಸ್ಯ ಗಣೇಶ ಮಾತನಾಡಿದರು. ಗ್ರಾಪಂ ಅಧ್ಯಕ್ಷರಾದ ಭಾಗ್ಯಮ್ಮ, ಶೇಖರಪ್ಪ, ಉಪಾಧ್ಯಕ ಮಲ್ಲಿಕಾರ್ಜುನ, ತಾಪಂ ಸದಸ್ಯರಾದ ಬಸಪ್ಪ, ಮಂಜುಳಾ, ಕೃಷಿ ವಿಜ್ಞಾನಿ ದೇವರಾಜ್‌, ಆನಂದಕುಮಾರ, ಮಲ್ಲಿಕಾರ್ಜುನ, ಕೃಷಿ ಅಧಿಧಿಕಾರಿಗಳಾದ ರಾಜು, ಮೋತಿನಾಯ್ಕ, ರೈತ ಮುಖಂಡ ವಸಂತಕುಮಾರ, ಭೀಮಪ್ಪ, ಪರಶುರಾಮಪ್ಪ ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next