Advertisement

ಪವಿತ್ರ-ದಿವ್ಯಕ್ಷೇತ್ರ ಹರಿಹರಪುರ: ಅಗಸ್ತ್ಯ ಮಹರ್ಷಿಗಳು ತಪಸ್ಸನ್ನಾಚರಿಸಿದ ಸುಕ್ಷೇತ್ರವಿದು

06:08 PM Aug 16, 2022 | Team Udayavani |

ಹರಿಹರಪುರ ಕ್ಷೇತ್ರವು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿದೆ. ಪರಶಿವನು ಯಜ್ಞಕುಂಡದಲ್ಲಿ ಆವಿರ್ಭವಿಸಿ ಸಮಸ್ತ ಭಕ್ತರನ್ನು ಅನುಗ್ರಹಿಸಿದನೆಂಬ ಪ್ರತೀತಿ ಇದೆ. ಇಂದಿಗೂ ದಕ್ಷಹರ ಸೋಮೇಶ್ವರ ದೇವಸ್ಥಾನ ಹರಿಹರಪುರದಲ್ಲಿದೆ. ಇಂತಹ ಪವಿತ್ರ ಸ್ಥಳದಲ್ಲಿ ದಕ್ಷಯಜ್ಞ ನಡೆದಿತ್ತೆಂದು ತುಂಗಭದ್ರಾ ಖಾಂಡದ ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದ್ದು, ದಕ್ಷಾಶ್ರಮವೆಂಬ ಹೆಸರಿನೊಂದಿಗೆ ಪ್ರಸಿದ್ಧವಾಗಿತ್ತು.

Advertisement

ಇಂತಹ ಪರಮ ಪವಿತ್ರ ಕ್ಷೇತ್ರದಲ್ಲಿ ಅಗಸ್ತ್ಯ ಮಹರ್ಷಿಗಳು ಕಠಿಣವಾದ ತಪಸ್ಸನ್ನಾಚರಿಸಿ ಲಕ್ಷ್ಮೀನೃಸಿಂಹ ಸ್ವಾಮಿಯ ಸಾಕ್ಷಾತ್‌ ದರ್ಶನ ಪಡೆದಿರುತ್ತಾರೆ. ಗುರು ಪರಂಪರೆಯಲ್ಲಿ ಇಂದಿಗೂ ಅಗಸ್ತ್ಯ ಕರಾರ್ಚಿತ ಲಕ್ಷ್ಮೀನೃಸಿಂಹ ಸಾಲಿಗ್ರಾಮ ಪೂಜಿಸಲ್ಪಡುತ್ತಿರುವುದು ವಿಶೇಷ. ಹರಿಹರರ ಸಂಗಮ ಕ್ಷೇತ್ರವಾಗಿರುವುದರಿಂದ ಶ್ರೀಕ್ಷೇತ್ರವು ಹರಿಹರಪುರ ವೆಂದು ಪ್ರಖ್ಯಾತವಾಗಿದೆ. ಇಂತಹ ಭವ್ಯವಾದ ಇತಿಹಾಸ ಪರಂಪರೆಯುಳ್ಳ ಈ ಹರಿಹರಪುರ ದಿವ್ಯಕ್ಷೇತ್ರದಲ್ಲಿ ಶ್ರೀ ಆದಿಶಂಕರಾಚಾರ್ಯರು ಶಾರದಾ ಪರಮೇಶ್ವರಿಯನ್ನು ಶ್ರೀಚಕ್ರ ಸಮೇತ ಪ್ರತಿಷ್ಠಾಪಿಸಿ, ಸ್ವಯಂಪ್ರಕಾಶ ಪೀಠವೆಂದು ನಾಮಕರಣ ಮಾಡಿ ಪ್ರಥಮ ಪೀಠಾ ಧಿಪತಿಗಳಾಗಿ ಶ್ರೀ ಶ್ರೀ ಸ್ವಯಂಪ್ರಕಾಶ ಕೃಷ್ಣಯೋಗೀಂದ್ರ ಸರಸ್ವತಿ ಮಹಾ ಸ್ವಾಮಿಗಳವರಿಗೆ ಸನ್ಯಾಸ ದೀಕ್ಷೆ ನೀಡಿ ಅನುಗ್ರಹಿಸಿದರು. ಮುಂಬರುವ ದಿನಗಳಲ್ಲಿ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠಮ್‌ ಎಂದು ಪ್ರಖ್ಯಾತವಾಗಿ ಧರ್ಮ ಪ್ರಚಾರದಲ್ಲಿ ತೊಡಗಿ ಸೇವೆ ಸಲ್ಲಿಸುತ್ತಿದೆ. ಈ ಧರ್ಮ ಪೀಠಕ್ಕೆ ವಿಜಯನಗರ ಅರಸರು-ಮೈಸೂರು ಸಂಸ್ಥಾನದ ಅರಸರು ಅಲ್ಲದೇ ಪಾಳೇಗಾರರು ದಾನ-ಧರ್ಮ ನೀಡಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.

ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು 25ನೇ ಪೀಠಾಧಿ ಪತಿಗಳಾಗಿರುತ್ತಾರೆ. ಶ್ರೀಗಳ ಪ್ರಧಾನ ಗುಣವಿಶೇಷಗಳಲ್ಲಿ ಪ್ರಮುಖವಾದದ್ದು ಸಾಮಾಜಿಕ ಕಳಕಳಿ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಚಿಂತನೆ ಕಾರ್ಯ ತತ್ಪರತೆಯಿಂದ ಅವಿಶ್ರಾಂತವಾಗಿ ಕೈಂಕರ್ಯಗೈಯುತ್ತಿರುವ ಪರಿ ಸಮಕಾಲೀನ ಸಮಾಜದಲ್ಲಿ ಪೀಠಗಳ ಪ್ರಸ್ತುತತೆಯ ಅಗತ್ಯತೆ ಹಾಗೂ ಸಾಗಬೇಕಾದ ದಿಕ್ಕಿನ ಉತ್ತಮ ಮಾದರಿಯಾಗಿ, ಸುಸ್ಪಷ್ಟ ಉದಾಹರಣೆಯಾಗಿ ನಿಲ್ಲುತ್ತದೆ. ಧಾರ್ಮಿಕ ಆಚರಣೆಗಳ ವಿಧಿ ವಿಧಾನ ಅಭಿಪ್ರಾಯ ಭೇದಗಳಿರಬಹುದು. ವೈಚಾರಿಕ, ಚಿಕಿತ್ಸಕ ದೃಷ್ಟಿಕೋನದಿಂದ ಎಲ್ಲ ವಿಷಯಗಳಲ್ಲೂ, ಪ್ರತಿಷ್ಠಾಪಿತ ಧಾರ್ಮಿಕ, ನೈತಿಕ, ಸಾತ್ವಿಕ ಚೌಕಟ್ಟಿನಲ್ಲೇ ಸರ್ವಸಮ್ಮತ ಅಭಿಪ್ರಾಯ ಮೂಡಿಸಿ, ಎಲ್ಲ ಸಮುದಾಯದವರನ್ನು ಒಟ್ಟಾಗಿಸಿ “ಭಾರತೀಯರಾಗಿಸಿ’ ಮುಂದಕ್ಕೆ ಕರೆದೊಯ್ಯುವ ಶ್ರೀ ಶ್ರೀಗಳ ಹಂಬಲ, ತನ್ಮೂಲಕ ಸುತ್ತಲಿನ ಸಮಾಜವನ್ನು “ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿಸಿದ್ದಾರೆ.

ಇಂದಿನ ಪೀಠಾಧಿ ಪತಿಗಳು ಪುರಾತನವಾಗಿದ್ದ ದೇವಾಲಯ ಪುನರ್‌ ನಿರ್ಮಾಣದ ಮಹಾಸಂಕಲ್ಪ ಮಾಡಿ ಕಳೆದ ಹನ್ನೆರಡು ವರ್ಷಗಳಿಂದ ಸಂಪೂರ್ಣ ಶಿಲಾಮಯವಾಗಿ, ಶಿಲ್ಪಶಾಸ್ತ್ರದ ಅನುಸಾರವಾಗಿ ದೇವಸ್ಥಾನ ನಿರ್ಮಿಸಿದ್ದು, ಮಹಾಕುಂಭಾಭಿಷೇಕವು 10-04-2022 ರಿಂದ 24-04-2022ರವರೆಗೆ ವಿಜೃಂಭಣೆಯಿಂದ ನೆರವೇರಿರುತ್ತದೆ. ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಗಣ್ಯಾತಿಗಣ್ಯರು, ಕೇಂದ್ರದ ಗಣ್ಯ ಅತಿಥಿಗಳು, ಧಾರ್ಮಿಕ ಮುಖಂಡರು, ಗುರುಭಕ್ತರು ಆಗಮಿಸಿದ್ದರು. ಈ ಹದಿನೈದು ದಿನಗಳಲ್ಲಿ ಸುಮಾರು 5 ರಿಂದ 6 ಲಕ್ಷ ಭಕ್ತರು ಶ್ರೀ ಶಾರದಾ ಲಕ್ಷ್ಮೀನೃಸಿಂಹರ, ಪರಿವಾರ ದೇವತೆಗಳ ಹಾಗೂ ಪರಮ ಪೂಜ್ಯ ಮಹಾಸ್ವಾಮಿಗಳವರ ದರ್ಶನ ಪಡೆದು, ಪ್ರಸಾದ ಭೋಜನ ಸ್ವೀಕರಿಸಿರುತ್ತಾರೆ.

ಹರಿಹರಪುರ ದಿವ್ಯಕ್ಷೇತ್ರದ ವಿಶೇಷಗಳು
ಅಗಸ್ತ್ಯ ಮಂಟಪ: ಪವಿತ್ರ ತುಂಗಾನದಿಯಿಂದ ಶುದ್ಧವಾದ ತೀರ್ಥವನ್ನು ಶಾರದಾ ಪರಮೇಶ್ವರಿ, ಲಕ್ಷ್ಮೀನೃಸಿಂಹ ಸ್ವಾಮಿಯ ಅಭಿಷೇಕಕ್ಕಾಗಿ ತರುವ ವ್ಯವಸ್ಥೆಯೊಂದಿಗೆ ಅಗಸ್ತ್ಯ ಮಂಟಪ ನಿರ್ಮಿಸಿ, ಆಗಮಿಸುವ ಭಕ್ತರು ಹಾಗೂ ಸಾಧು ಸಂತರಿಗೆ ಧ್ಯಾನ ಮಾಡಲು ಪ್ರಶಾಂತ ವಾತಾವರಣ ಏರ್ಪಾಡು ಮಾಡಲಾಗಿದೆ. ಇಲ್ಲಿ ಅಗಸ್ತ್ಯ ಮಹರ್ಷಿಗಳ ಸುಂದರ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

Advertisement

ಕಾಮಧೇನು ವಿಮಾನ ಗೋಪುರ ದರ್ಶನ ಕೇಂದ್ರ: ದೇವಸ್ಥಾನಕ್ಕೆ ತೆರಳಿ ಭಗವಂತನ ದರ್ಶನ ಮಾಡುವ ಸಂದರ್ಭದಲ್ಲಿ ಗೋಪುರ ದರ್ಶನ ಮಾಡುವುದು ವಿಶೇಷ. ಅನಂತ ಪುಣ್ಯಫಲ ಹಾಗೂ ಮೋಕ್ಷ ದೊರಕುವುದು ಎಂದು ನಮ್ಮ ಸಂಪ್ರದಾಯದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಶ್ರೀಕ್ಷೇತ್ರ ಹರಿಹರಪುರದಲ್ಲಿ ಸುಂದರವಾದ ವೀಕ್ಷಣಾ ಗೋಪುರ ನಿರ್ಮಿಸಿ, ಅಮೃತಶಿಲೆಯಲ್ಲಿ ಕಾಮಧೇನು ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.

ಕ್ಷೇತ್ರಕ್ಕೆ ಆಗಮಿಸುವ ಸಕಲ ಭಕ್ತರು ಕಾಮಧೇನುವಿನ ಕೊಂಬುಗಳಿಂದ ಶಿಖರ ದರ್ಶನ ಮಾಡಿದಲ್ಲಿ ಪುಣ್ಯ ಪ್ರಾಪ್ತವಾಗುವುದು ಹಾಗೂ ವೈಕುಂಠಲೋಕ ಪ್ರಾಪ್ತಿಯಾಗುವುದು ಎಂದು ಮಹಾಸ್ವಾಮಿಗಳವರು ತಿಳಿಸಿರುತ್ತಾರೆ. ಕಾಮಧೇನು ಪ್ರಥಮತಃ ಕೇಳಿದ ವರ ದಯಪಾಲಿಸುವ ದೇವತೆಯಾಗಿರುವುದರಿಂದ ಈ ರೀತಿ ದರ್ಶನ ಭಾಗ್ಯದಿಂದ ಪುಣ್ಯ ಇಮ್ಮಡಿಯಾಗುತ್ತದೆ ಎಂಬುದು ಭಕ್ತರ ವಿಶ್ವಾಸ-ನಂಬಿಕೆ.

ನೃಸಿಂಹ ಪ್ರಸಾದ ಮಂದಿರ: ಶ್ರೀಕ್ಷೇತ್ರಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳಿಗೆ ಸುಮಾರು 2000 ಮಂದಿಗೆ ಜಾತಿ-ಮತದ ಭೇದಭಾವವಿಲ್ಲದೇ ಏಕಕಾಲದಲ್ಲಿ ಭೋಜನ ಸ್ವೀಕರಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿದಿನ ಪ್ರಸಾದ ಭೋಜನ ನಡೆಯುತ್ತಿರುತ್ತದೆ.

ನೃಸಿಂಹ ಕೃಪಾ:ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ತಂಗಲು ಈಗಿರುವ ವಸತಿ ನಿಲಯ ಜತೆಗೆ ಅನುಕೂಲವಾಗುವಂತೆ ಸುಸಜ್ಜಿತವಾದ ನೂತನ ವಸತಿ ನಿಲಯ ನಿರ್ಮಿಸಲಾಗಿದೆ. ದೂರದ ಪ್ರದೇಶಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಆನ್‌ಲೈನ್‌ ಮುಖಾಂತರ ಕೊಠಡಿಗಳನ್ನು ಕಾದಿರಿಸುವ ಸೌಲಭ್ಯ ವ್ಯವಸ್ಥೆಗೊಳಿಸಲಾಗಿದೆ. ಈ ಸೌಲಭ್ಯವನ್ನು //narasimhakrupa.hariharapura.in ಗೆ ಲಾಗ್‌ಆನ್‌ ಆಗಿ ಪಡೆಯಬಹುದು.

ಇಷ್ಟ ಸಿದ್ಧಿ ಭಕ್ತಾಂಜನೇಯ ದೇವರು: ಲಕ್ಷ್ಮೀನೃಸಿಂಹ ಲೇಖನ ಜಪಯಜ್ಞದಲ್ಲಿ ಸುಮಾರು 5ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಕನ್ನಡ, ತಮಿಳು, ತೆಲುಗು, ಸಂಸ್ಕೃತ ಭಾಷೆಯಲ್ಲಿ ನರಸಿಂಹ ನಾಮ ಬರೆದು ಶ್ರೀಕ್ಷೇತ್ರಕ್ಕೆ ತಲುಪಿಸಿದ್ದಾರೆ. ನೆಲದಾಳದಲ್ಲಿ ಪುಸ್ತಕಗಳನ್ನು ಭದ್ರವಾಗಿರಿಸಿ ಮೇಲೆ ಸುಮಾರು 27 ಅಡಿಯ “ಭಕ್ತಾಂಜನೇಯ ಸ್ವಾಮಿ’ಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಆಗಮಿಸುವ ಸಮಸ್ತ ಭಕ್ತರ ಪರವಾಗಿ ಲಕ್ಷ್ಮೀನೃಸಿಂಹನನ್ನು ಪ್ರಾರ್ಥನೆ ಮಾಡಿ ಇಚ್ಛಿಸಿದ ಕಾರ್ಯ ಅನುಗ್ರಹಿಸುವಂತೆ ಕೋರುತ್ತಾನೆ ಎಂಬುದು ಭಕ್ತಾದಿಗಳ ನಂಬಿಕೆ.

ಮಾಸಪತ್ರಿಕೆ
ಶ್ರೀಮಠದ ವತಿಯಿಂದ “ಸ್ವಯಂಪ್ರಕಾಶ ಪಬ್ಲಿಕೇಶನ್ಸ್‌ ಟ್ರಸ್ಟ್‌’ ಮೂಲಕ ಕಳೆದ 20 ವರ್ಷಗಳಿಂದ ಪರಮಪೂಜ್ಯ ಶ್ರೀ ಶ್ರೀಗಳವರ ಆಶಯದಂತೆ ನಮ್ಮ ಸನಾತನ ಧರ್ಮದ ಆಚಾರ- ವಿಚಾರಗಳು, ಪೀಠಾಧಿ ಪತಿಗಳ ಅನುಗ್ರಹ ಸಂದೇಶಗಳು, ಧಾರ್ಮಿಕ ಮುಖಂಡರ ಲೇಖನಗಳು, ಮತ್ತಿತರೆ ಸಂಗ್ರಹಯೋಗ್ಯವಾದ ಲೇಖನಗಳನ್ನೊಳಗೊಂಡ “ಶ್ರೀ ಸ್ವಯಂಪ್ರಕಾಶ’ ಎಂಬ ಕನ್ನಡ-ಇಂಗ್ಲಿಷ್‌ ಮಾಸಪತ್ರಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಶಿವದೀಕ್ಷೆ
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮಿಗಳವರು ಭಾರತೀಯ ಸನಾತನ ಧರ್ಮದ ಪ್ರಚಾರಕ್ಕಾಗಿ ದಕ್ಷಿಣ ಭಾರತದಾದ್ಯಂತ ಪ್ರವಾಸ ಕೈಗೊಂಡು ಜಾತಿ-ಮತ-ಲಿಂಗ ಭೇದವಿಲ್ಲದಂತೆ ಸಮಸ್ತ ಜನತೆಗೆ ಪರಮ ಮಂಗಲಕರವಾದ ಶಿವದೀಕ್ಷೆ ನೀಡಿರುತ್ತಾರೆ. ಸಮಾಜದಲ್ಲಿ ಪರಸ್ಪರ ಶಾಂತಿ- ಸೌಹಾರ್ದತೆ, ನೆಮ್ಮದಿ ನೀಡುವ ಶಿವಪಂಚಾಕ್ಷರಿ ಸ್ತೋತ್ರವನ್ನು ಈವರೆಗೂ ಸುಮಾರು 30 ಲಕ್ಷಕ್ಕೂ ಹೆಚ್ಚು ಮಂದಿಗೆ ನೀಡಿರುತ್ತಾರೆ. ಎಲ್ಲ ಜಾತಿ ವರ್ಗದವರೂ ಶಿವದೀಕ್ಷೆ ಪಡೆದು ಸುಖ-ನೆಮ್ಮದಿ ಜೀವನ ಅರಸಿ ಸಹ ಬಾಳ್ವೆ ನಡೆಸುವಂತಾಗಲಿ ಎಂಬುದು ಮಹಾಸ್ವಾಮಿಗಳವರ ಆಶಯ.

ಪರಮಪೂಜ್ಯ ಮಹಾಸ್ವಾಮಿಗಳವರು ಈವರೆಗೂ ಸುಮಾರು 4 ಲಕ್ಷಕ್ಕೂ ಅಧಿಕ ಮಹಿಳೆಯರಿಂದ ಷೋಡಶೋಪಚಾರ ಪೂಜಾ ವಿಧಾನದಿಂದ ಲಲಿತಾಪೂಜೆ ನಡೆಸಿರುತ್ತಾರೆ. ಈ ಎಲ್ಲದಕ್ಕೂ ಶ್ರೀಗಳ ತಪಶಕ್ತಿ, ದೂರದರ್ಶಿತ್ವ, ಭಕ್ತರೆಡೆಗಿನ ಮಮತೆ, ತತ್ವನಿಷ್ಠೆ, ಸಿದ್ಧಾಂತದೆಡೆಗಿನ ದೃಢತೆ, ಸಂಕಲ್ಪ ಸಿದ್ಧಿಯೇ ಕಾರಣ. ಎಲ್ಲರಲ್ಲೂ ಸಮಭಾವ ಕಾಣುವ ಶ್ರೀಗಳ ಮಹದ್ಗುಣವೇ ಶ್ರೀಮಠದತ್ತ ಭಕ್ತ ಪ್ರವಾಹ ವರ್ಧನೆಗೆ ಕಾರಣವೆಂಬುದು ಎಲ್ಲರಿಗೂ ಅರಿವಿಗೆ ಬರುವ ಸತ್ಯ.
-ಡಾ| ಬಿ.ಎಸ್‌. ರವಿಶಂಕರ್‌, ಆಡಳಿತಾ ಧಿಕಾರಿಗಳು, ಶ್ರೀ ಮಠ, ಹರಿಹರಪುರ

 

 

Advertisement

Udayavani is now on Telegram. Click here to join our channel and stay updated with the latest news.

Next