Advertisement
ಏನಿದು ಪ್ರಕರಣ?2013ರ ಐಪಿಎಲ್‌ನಲ್ಲಿ ಶ್ರೀಶಾಂತ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಶ್ರೀಶಾಂತ್ ಜತೆಗೆ ಸ್ಪಿನ್ನರ್ ಅಂಕಿತ್ ಚೌವಾಣ್, ಅಜಿತ್ ಚಾಂಡೀಲ ಕೂಡ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಿಲುಕಿಕೊಂಡಿದ್ದರು. ಒಂದು ಹಂತದಲ್ಲಿ ಈ ಮೂವರೂ ಜೈಲು ಸೇರಿದ್ದರು. ಬಳಿಕ ಬಿಸಿಸಿಐ ಶಿಸ್ತು ಸಮಿತಿ ಶ್ರೀಶಾಂತ್ ಸೇರಿದಂತೆ ಎಲ್ಲ ಕ್ರಿಕೆಟಿಗರಿಗೆ ಆಜೀವ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ 2015ರಲ್ಲಿ ದಿಲ್ಲಿ ವಿಶೇಷ ಸ್ಥಳೀಯ ನ್ಯಾಯಾಲಯದಲ್ಲಿ ಶ್ರೀಶಾಂತ್ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅವರಿಗೆ ಗೆಲುವು ಸಿಕ್ಕಿತ್ತು. ಆ ಬಳಿಕವೂ ಬಿಸಿಸಿಐ ಶ್ರೀಶಾಂತ್ ಮೇಲಿನ ನಿಷೇಧ ತೆರವು ಮಾಡಿರಲಿಲ್ಲ. ಸ್ಕಾಟ್ಲೆಂಡ್ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಬಳಿ ಶ್ರೀಶಾಂತ್ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಕೇಳಿದ್ದರು. ಇದನ್ನು ಬಿಸಿಸಿಐ ನಿರಾಕರಿಸಿತ್ತು. ಇದರಿಂದ ಶ್ರೀಶಾಂತ್ ಹತಾಶರಾಗಿದ್ದರು. ಬಿಸಿಸಿಐ ತನ್ನ ಮೇಲೆ ಸುಮ್ಮನೆ ದ್ವೇಷ ಸಾಧಿಸುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ಎನ್‌ಒಸಿ ನೀಡದಿದ್ದ ಹಿನ್ನೆಲೆಯಲ್ಲಿ ಕೊನೆಗೆ ಅವರು ಬಿಸಿಸಿಐ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.
ಶುಕ್ರವಾರ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಕೆ.ಎಂ. ಜೋಸೆಫ್ ಒಳಗೊಂಡ ದ್ವಿಸದಸ್ಯ ಪೀಠ ಕೈಗೆತ್ತಿಕೊಂಡಿತ್ತು. ವಾದ ವಿವಾದಗಳ ಬಳಿಕ ದ್ವಿಸದಸ್ಯ ಪೀಠ ಶ್ರೀಶಾಂತ್ ಆಜೀವ ನಿಷೇಧವನ್ನು ರದ್ದು ಮಾಡಿತು. ಮಾತ್ರವಲ್ಲ ಬಿಸಿಸಿಐ ಶಿಸ್ತು ಸಮಿತಿ ಮುಂದಿನ ಮೂರು ತಿಂಗಳ ಒಳಗಾಗಿ ಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆಯೂ ಸೂಚನೆ ನೀಡಿತು. ಮಾತ್ರವಲ್ಲ, ಸಮಿತಿ ನಿರ್ಧಾರದ ಬಳಿಕ ಶ್ರೀಶಾಂತ್‌ಗೆ ಮತ್ತೆ ಕ್ರಿಕೆಟ್ ಆಡಲು ಅವಕಾಶ ಸಿಗಬೇಕು ಎಂದಿತ್ತು. ಈ ತೀರ್ಪಿಗೂ ದಾಖಲಾದ ಕ್ರಿಮಿನಲ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿತು. ಈಗಾಗಲೇ ದಿಲ್ಲಿ ಪೊಲೀಸರು ಶ್ರೀಶಾಂತ್ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿರುವ ವಿಚಾರಣೆಯೂ ನಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಕೇರಳ ಹೈಕೋರ್ಟ್‌ನಲ್ಲಿಯೂ ಶ್ರೀಶಾಂತ್ ಬಿಸಿಸಿಐ ನಿಷೇಧದ ವಿರುದ್ಧ ಕಾನೂನು ಸಮರ ಹೂಡಿದ್ದರು. ಏಕಸದಸ್ಯ ಪೀಠದಲ್ಲಿ ಶ್ರೀಶಾಂತ್ ಪರ ತೀರ್ಪು ಬಂದಿತ್ತು. ಆದರೆ ದ್ವಿಸದಸ್ಯ ಪೀಠದಲ್ಲಿ ತೀರ್ಪು ಶ್ರೀಶಾಂತ್ ವಿರುದ್ಧ ಬಂದಿದ್ದನ್ನು ಸ್ಮರಿಸಬಹುದು. ಸುಪ್ರೀಂ ತೀರ್ಪನ್ನು ಸ್ವಾಗತಿಸಿದ ಕೆಸಿಎ
ಶ್ರೀಶಾಂತ್ ಭವಿಷ್ಯದ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಹಿರಿಯ ಅಧಿಕಾರಿ ಟಿ.ಸಿ. ಮ್ಯಾಥ್ಯೂ ಸ್ವಾಗತಿಸಿದ್ದಾರೆ.
Related Articles
ಶ್ರೀಶಾಂತ್ ಕುರಿತ ವಿಷಯವನ್ನು ಆಡಳಿತಾಧಿಕಾರಿ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಆಡಳಿತಾಧಿಕಾರಿ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ. “ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಇನ್ನೂ ನಮಗೆ ದೊರಕಿಲ್ಲ. ಮುಂದಿನ ಸಿಇಒ ಸಭೆಯಲ್ಲಿ ಈ ವಿಷಯವನ್ನು ಸಮಗ್ರವಾಗಿ ಚರ್ಚೆ ನಡೆಸುತ್ತೇವೆ’ ಎಂದು ಮಾಧ್ಯಮಗಳಿಗೆ ತಿಳಿಸಿದರು. ಮಾ. 18ರಂದು ಬಿಸಿಸಿಐ ಸಭೆಯಲ್ಲಿ ಶ್ರೀಶಾಂತ್ ಭವಿಷ್ಯದ ಕುರಿತ ಮಹತ್ವದ ನಿರ್ಧಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
Advertisement