ಹೊಸದಿಲ್ಲಿ: ಇತ್ತೀಚೆಗಷ್ಟೇ ಕೇರಳ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಸ್ಪಾಟ್ ಫಿಕ್ಸಿಂಗ್ ಆರೋಪಿ ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿರುವ ಆಜೀವ ನಿಷೇಧವನ್ನು ಎತ್ತಿ ಹಿಡಿದಿತ್ತು. ಮತ್ತೆ ಕ್ರಿಕೆಟ್ ಆಡುವ ಹುಮ್ಮಸ್ಸಿನಲ್ಲಿದ್ದ ಶ್ರೀಶಾಂತ್ ಇದರಿಂದ ವಿಚಲಿತರಾಗಿದ್ದರು. ಇದರಿಂದ ನೊಂದಿರುವ ಅವರು ಬಿಸಿಸಿಐ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನು ವಿದೇಶಿ ತಂಡಗಳಲ್ಲೂ ಆಡಲು ಸಿದ್ಧ, ತನಗೆ ನಿಷೇಧ ಹೇರಿದ್ದು ಬಿಸಿಸಿಐ ಮಾತ್ರ. ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯಾದ ಐಸಿಸಿಯೇನು ನಿಷೇಧ ಹೇರಿಲ್ಲವೆಂದು ಶ್ರೀ ಹೇಳಿಕೊಂಡಿದ್ದಾರೆ. ಇದು ವಿವಾದ ಹುಟ್ಟಿಸಿದೆ.
“ನನಗೆ ಈಗ 34 ವರ್ಷವಾಗಿದೆ. ಇನ್ನು ಹೆಚ್ಚಿಗೆ ಅಂದರೆ 6 ವರ್ಷ ಕ್ರಿಕೆಟ್ ಆಡಬಹುದು. ಬಿಸಿಸಿಐ ಒಂದು ಖಾಸಗಿ ಸಂಸ್ಥೆ ಎನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದ ತನಗೆ ವಿದೇಶಿ ತಂಡಗಳಲ್ಲಿ ಆಡಲು ಹಿಂಜರಿಕೆಯಿಲ್ಲ’ ಎಂದು ಶ್ರೀ ಹೇಳಿದ್ದಾರೆ.
2013ರಲ್ಲಿ ಶ್ರೀಶಾಂತ್ ಐಪಿಎಲ್ ಸ್ಪಾಟ್‌ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದರು. ಅನಂತರ ಬಿಸಿಸಿಐ ಶ್ರೀಶಾಂತ್‌ಗೆ ಆಜೀವ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆಹೋಗಿದ್ದರು. ಏಕ ಸದಸ್ಯ ಪೀಠ ಶ್ರೀಶಾಂತ್ ಮೇಲಿನ ನಿಷೇಧವನ್ನು ತೆರವು ಮಾಡಿತ್ತು. ಆದರೆ ಇದನ್ನು ಪ್ರಶ್ನಿಸಿ ಬಿಸಿಸಿಐ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ದ್ವಿಸದಸ್ಯ ಪೀಠ ಆಜೀವ ನಿಷೇಧ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಇದರಿಂದ ಶ್ರೀಶಾಂತ್ ಕ್ರಿಕೆಟ್ ಜೀವನ ಅತಂತ್ರಕ್ಕೆ ಸಿಲುಕಿದೆ.