Advertisement

ಏಳು ಸುತ್ತಿನ ಕೋಟೆಯಲ್ಲಿ ಶ್ರದ್ಧಾ ಭಕ್ತಿಯ ಉಯ್ಯಾಲೆ ಉತ್ಸವ

05:59 PM Dec 08, 2022 | Team Udayavani |

ಚಿತ್ರದುರ್ಗ: ನಗರದ ಐತಿಹಾಸಿಕ ಏಳು ಸುತ್ತಿನ ಕೋಟೆಯಲ್ಲಿ ನೆಲೆಗೊಂಡಿರುವ ಶ್ರೀ ಏಕನಾಥೇಶ್ವರಿ ದೇವಿಗೆ ಬಂಗಾರದ ಮುಖ ಪದ್ಮ ಲೋಕಾರ್ಪಣೆ ಹಿನ್ನೆಲೆಯಲ್ಲಿ ಬುಧವಾರ ಗಣಹೋಮ ಹಾಗೂ ಉಯ್ಯಾಲೆ ಉತ್ಸವ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.

Advertisement

ಕೋಟೆಯೊಳಗಿನ ಮೇಲುದುರ್ಗದ ಶ್ರೀ ಏಕನಾಥೇಶ್ವರಿ ದೇವಸ್ಥಾನದ ಆವರಣದಲ್ಲಿ ರಾಜ ವಂಶಸ್ಥರ ಸಂಪ್ರದಾಯದಂತೆ ದಶಕಗಳ ನಂತರ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರೀ ಏಕನಾಥೇಶ್ವರಿ ಅಮ್ಮನವರಿಗೆ ಉಯ್ಯಾಲೆ ಉತ್ಸವ ವೈಭವೋಪೇತವಾಗಿ ಜರುಗಿತು.

ವಿವಿಧ ಸೌಗಂಧಭರಿತ ಪುಷ್ಪಗಳಿಂದ ಮನಮೋಹಕವಾಗಿ ಅಲಂಕಾರ ಮಾಡಲಾಗಿದ್ದ ದೇವಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯ ಹಾಗೂ ಉಧೋ ಉಧೋ ಎಂಬ ಭಕ್ತ ಉದ್ಘಾರಗಳೊಂದಿಗೆ ಉಯ್ನಾಲೆ ಕಂಬದ ಬಳಿ ಕರೆತರಲಾಯಿತು. ಅಲಂಕೃತ ಉಯ್ನಾಲೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಈ ವೇಳೆ ನಾದಸ್ವರದ ನಿನಾದ, ಕಹಳೆಯ ನಾದದೊಂದಿಗೆ ಕರಡಿ ಚಮ್ಮಾಳ, ಉರುಮೆ ಸೇರಿದಂತೆ ನಾನಾ ಜಾನಪದ ಕಲಾ ಪ್ರಕಾರಗಳು ಮೇಲೈಸಿದವು.

ತ್ರಿಪುರ ಸುಂದರಿ ಶ್ರೀ ತಿಪ್ಪಿನಘಟ್ಟಮ್ಮ ದೇವಿಯ ಉತ್ಸವ ಮೂರ್ತಿಯನ್ನು ಮೇಲುದುರ್ಗಕ್ಕೆ ಕರೆತಂದು ಸುಂದರವಾಗಿ ಅಲಂಕರಿಸಲಾಗಿತ್ತು. ಇದಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ದೇವಿಗೆ ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಅರುಣ ಭಟ್ಟರು ಮತ್ತು ಸಂಗಡಿಗರಿಂದ ಗಣಹೋಮ, ಚಂಡಿಕಾ ಹೋಮ ಮತ್ತು ಅಭಿಷೇಕ ನೆರವೇರಿತು.

ಬಂಗಾರದ ಹೊಸ ಮುಖ ಪದ್ಮಕ್ಕೆ ಬಂಗಾರ ನೀಡಿದ ದಾನಿಗಳಿಗೆ ಗೌರವ ಸಮರ್ಪಿಸಲಾಯಿತು. ಹೋಮ ಹಾಗೂ ಉಯ್ನಾಲೆ ಉತ್ಸವದ ಅಂಗವಾಗಿ ಗರ್ಭಗುಡಿಯ ಮೂರ್ತಿಗೂ ಮನಮೋಹಕವಾಗಿ ಸಿಂಗರಿಸಲಾಗಿತ್ತು. ಕೋಟೆಯೊಳಗಿನ ಗಣಪತಿ ಮೂರ್ತಿಗೂ ಸಕಲಾಭರಣ ಹಾಗೂ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.

Advertisement

ಬುರುಜನಹಟ್ಟಿ, ಜೋಗಿಮಟ್ಟಿ ರಸ್ತೆ, ಕಾಮನಬಾವಿ ಬಡಾವಣೆ ಸೇರಿದಂತೆ ನಗರದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಮೇಲುದುರ್ಗಕ್ಕೆ ಭೇಟಿ ನೀಡಿ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ದೇವಿಯ ಉಯ್ಯಾಲೆ ಉತ್ಸವವನ್ನು ಕಣ್ತುಂಬಿಕೊಂಡರು. ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಮಂಗಳವಾರ ಬ್ರಾಹ್ಮಿ ಮುಹೂರ್ತದಲ್ಲಿ ಚಿತ್ರದುರ್ಗದ ಆಡುಮಲ್ಲೇಶ್ವರದ ಹಿಮವತ್‌ ಕೇದಾರದಲ್ಲಿ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿಯ ಹಾಗೂ ಶ್ರೀ ಏಕನಾಥೇಶ್ವರಿ ಅಮ್ಮನವರ ಹೊಸ ಮುಖ ಪದ್ಮದ ಮೆರವಣಿಗೆಯೊಂದಿಗೆ ಗಂಗಾಪೂಜೆ ನೆರವೇರಿಸಲಾಯಿತು. ಡಿ. 8ರಂದು ಬೆಳಗ್ಗೆ 9ರಿಂದ ಶ್ರೀ ಏಕನಾಥೇಶ್ವರಿ ಪಾದಗುಡಿಯಿಂದ ಐತಿಹಾಸಿಕ ಚಿತ್ರದುರ್ಗ ನಗರದ ರಾಜಬೀದಿ ಹಾಗೂ ಪ್ರಮುಖ ಬೀದಿಗಳಲ್ಲಿ ಶ್ರೀ ಏಕನಾಥೇಶ್ವರಿ ಅಮ್ಮನವರ ಜತೆಯಲ್ಲಿ ನವದುರ್ಗೆಯರು ಸೇರಿದಂತೆ ನಗರದ ಮತ್ತಿತರ ಪ್ರಮುಖ ದೇವತೆಯರ ಮೆರವಣಿಗೆ ಜಾನಪದ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next