Advertisement

ಸುಪ್ರೀಂ ಆದೇಶದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ: ಎಸ್.ಆರ್ ಪಾಟೀಲ

05:23 PM Jun 26, 2021 | Team Udayavani |

ವಿಜಯಪುರ: ತಜ್ಞರು ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪ್ರಭಾವ ಬೀರುವ ಮುನ್ಸೂಚನೆ ನೀಡಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದಂತೆ ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ  ಆದೇಶ ನೀಡಿದೆ. ಹೀಗಾಗಿ ರಾಜ್ಯದಲ್ಲೂ ಮಕ್ಕಳ ಆರೋಗ್ಯ ರಕ್ಷಣೆ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಕೂಡದು ಎಂದು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಆಗ್ರಹಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ ಅವರು, ಪರೀಕ್ಷೆ ನಡೆಸಿದರೆ ಒಂದೇ ಒಂದು ಮಗುವಿನ‌ ಜೀವಕ್ಕೆ ಅಪಾಯವಾದರೂ ಆಂಧ್ರಪ್ರದೇಶ‌ ಸರ್ಕಾರವೇ ಹೊಣೆ ಎಂದು ಆ ರಾಜ್ಯಕ್ಕೆ ಸುಪ್ರೀಂ ಕೋರ್ಟ್ ಆದೇಶಿದೆ. ಆದರೆ ಸುಪ್ರೀಂ ಕೋರ್ಟ್ ಸದರಿ ಆದೇಶ ಒಂದು ರಾಜ್ಯಕ್ಕೆ ಸೀಮಿತವಾಗದೇ  ಇಡೀ ದೇಶಕ್ಕೆ ಅನ್ವಯಿಸುತ್ತದೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಕೋವಿಡ್ ಎರಡನೇ ಅಲೆ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದರೂ ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರ ಸೋಂಕು ನಿರ್ಹಣೆ ಮಾಡುವಲ್ಲಿ ವಿಫಲವಾಗಿವೆ. ಪರಿಣಾಮ ಆಸ್ಪತ್ರೆ, ಹಾಸಿಗೆ, ಆಕ್ಸಿಜನ್, ಲಸಿಕೆಯಂಥ ಕನಿಷ್ಟ ಸೌಲಭ್ಯ ಕಲ್ಪಿಸುವಲ್ಲೂ ಸರ್ಕಾರಗಳು ವಿಫಲವಾದ ಕಾರಣ ಸಾವಿರಾರು ಜನರು ಜೀವ ಕಳೆಕೊಳ್ಳುವಂತೆ ಆಯಿತು. ಭವಿಷ್ಯದಲ್ಲಿ ಮೂರನೇ ಅಲೆ ಸೃಷ್ಟಿಸುವ ಕೋವಿಡ್ ಮಕ್ಕಳ ಮೇಲೆ ಗಂಭೀರ ಪ್ರಭಾವ ಬೀರುತ್ತದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದನ್ನು ಸರ್ಕಾರ ನಿರ್ಲಕ್ಷ್ಯ ಮಾಡಕೂಡದು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಮೀಸಲಾತಿ ಪ್ರತಿಭಟನೆ, ಫಡ್ನವೀಸ್ ಸೇರಿ ಬಿಜೆಪಿ ಪ್ರತಿಭಟನಾಕಾರರು ವಶಕ್ಕೆ

60 ವರ್ಷ ದೇಶ ಆಳಿದ ಕಾಂಗ್ರೆಸ್ ಏ‌ನು ಮಾಡಿದೆ ಎಂದು ಕೇಳುತ್ತಿದ್ದ ಬಿಜೆಪಿ ಹಾಗೂ ನರೇಂದ್ರ ಮೋದಿ, ಅಧಿಕಾರಕ್ಕೆ ಬರುತ್ತಲೇ ದೇಶವನ್ನೇ ಮಾರಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಮಾಡಿದ್ದ ಸಾರ್ಜನಿಕ ಆಸ್ತಿ, ಸಂಸ್ಥೆ, ಕಂಪನಿಗಳನ್ನು ಖಾಸಗೀ ಬಂಡವಾಳ ಶಾಹಿ ವ್ಯವಸ್ಥೆಗೆ ಮಾರಿದ್ದೇ ಸಾಧನೆ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.

Advertisement

ಕೆಲವೇ ವರ್ಷಗಳಲ್ಲಿ ಅಂಬಾನಿ, ಅದಾನಿ ಅವರ ಬಂಡವಾಳಶಾಹಿ ವ್ಯವಸ್ಥೆಯ ಕೈಗೆ ಭಾರತದ ಆಡಳಿತ ಸೆರೆ ಆಗಲಿದೆ. ಬ್ರಿಟಿಷ್ ಕಂಪನಿಗಳ ಕೈಗೆ ಸಿಕ್ಕಂತೆ ಮತ್ತೊಮ್ಮೆ ದೇಶದ ಕೆಲವೇ ಕೆಲ ಶ್ರೀಮಂತ ಬಂಡವಾಳಿಗರ ಕೈಗೆ ದೇಶ ಸೆರೆಯಾಗುವ ಕಾಲ ದೂರವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಮೋದಿ ಅವರು ಬಾಲ್ಯದಲ್ಲಿ ಚಹಾ‌ ಮಾರಿದ್ದಾರೋ, ಇಲ್ಲವೋ ನಾವಂತೂ ನೋಡಿಲ್ಲ. ಆದರೆ ಪ್ರಧಾನಿಯಾಗಿ ದೇಶವನ್ನು ಮಾರುತ್ತಿದ್ದಾರೆ. ಅದನ್ನು ಮಾತ್ರ ನೋಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next