ಹೊಸದಿಲ್ಲಿ/ಮಾಸ್ಕೋ: ರಷ್ಯಾ ಸರಕಾರ ಅಭಿವೃದ್ಧಿಪಡಿಸುತ್ತಿರುವ “ಸ್ಪುಟ್ನಿಕ್-5′ ಲಸಿಕೆ ಶೇ.92ರಷ್ಟು ಪ್ರಯೋಜಕಾರಿಯಾಗಿದೆ. ಸೋಂಕಿನಿಂದ ರಕ್ಷಿಸುತ್ತದೆ ಎಂದು ಪ್ರಯೋಗದ ಮಧ್ಯಾಂತರ ವರದಿಗಳು ದೃಢಪಡಿಸಿವೆ. ಅಮೆರಿಕದ ಫೈಜರ್ ಕಂಪನಿ ತಾನು ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಶೇ.90ರಷ್ಟು ಪ್ರಯೋಜನವಾಗಿದೆ ಎಂದು ಘೋಷಣೆ ಮಾಡಿರುವಂತೆಯೇ ಮಾಸ್ಕೋದಿಂದ ಈ ಮಾಹಿತಿ ಹೊರಬಿದ್ದಿದೆ. ಆಗಸ್ಟ್‌ನಲ್ಲಿ ತನ್ನ ಲಸಿಕೆಯನ್ನು ಸಾರ್ವಜನಿಕ ಬಳಕೆಗಾಗಿ ಉಪಯೋಗಿಸಲು ನೋಂದಣಿ ಮಾಡಿಸಿಕೊಂಡಿತ್ತು. ಇಂಥ ಕ್ರಮ ಕೈಗೊಂಡ ಜಗತ್ತಿನ ಮೊದಲ ರಾಷ್ಟ್ರ ರಷ್ಯಾ.
16 ಸಾವಿರ ಮಂದಿಯ ಮೇಲೆ ಪ್ರಯೋಗ ನಡೆಸಿ ಮಧ್ಯಂತರ ವರದಿ ಸಿದ್ಧಪಡಿಸಲಾಗಿದೆ. ಪ್ರತಿಯೊಬ್ಬರಿಗೂ ಎರಡು ಡೋಸ್ ನೀಡಲಾಗಿತ್ತು. ಮೂರನೇ ಹಂತದಲ್ಲಿ 40 ಸಾವಿರ ಮಂದಿಯ ಮೇಲೆ ಪ್ರಯೋಗ ಮಾಡಲಾಗುತ್ತಿದೆ.
“ಸ್ಪುಟ್ನಿಕ್-5′ ಲಸಿಕೆಯನ್ನು 21 ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ವಿವಿಧ ವೈರಲ್ ಸೋಂಕಿನ ಪರಿಸ್ಥಿತಿಗೆ ಅನುಸಾರವಾಗಿ ಅದನ್ನು ನೀಡಲಾಗಿದೆ. ಕೇಂದ್ರ ಸರಕಾರ ದೇಶದಲ್ಲಿ ಅದನ್ನು ಅಭಿವೃದ್ಧಿಪಡಿಸಲು ರಷ್ಯಾ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಫೈಜರ್ ಲಸಿಕೆ ದುಬಾರಿ; ನಮ್ಮಲ್ಲಿ ಬಳಕೆ ಕಷ್ಟ
ಅಮೆರಿಕದ ಕಂಪನಿ ಫೈಜರ್ ಅಭಿವೃದ್ಧಿ ಪಡಿಸಿರುವ ಲಸಿಕೆ ತುಂಬ ದುಬಾರಿ. ಅದನ್ನು ನಮ್ಮ ದೇಶದಲ್ಲಿ ಬಳಕೆ ಮಾಡಲು ಕಷ್ಟಸಾಧ್ಯವೆಂದು ವೆಲ್ಲೂರು ವೈದ್ಯ ಕೀಯ ಸಂಸ್ಥೆಯ ಪ್ರಾಧ್ಯಾಪಕ ಡಾ| ಗಗನ್‌ದೀಪ್ ಕಿಂಗ್ ತಿಳಿಸಿದ್ದಾರೆ. ಮತ್ತೂಂದೆಡೆ ಹೊಸದಿಲ್ಲಿ ಯಲ್ಲಿರು ವ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನ ನಿರ್ದೇಶಕ ಡಾ| ರಣದೀಪ್ ಗುಲೇರಿಯಾ ಮೈನಸ್ 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಿ ವಿತರಿಸುವುದು ಭಾರತದಂಥ ರಾಷ್ಟ್ರಗಳಿಗೆ ಸವಾಲಿನ ಕೆಲಸ ಎಂದು ಹೇಳಿದ್ದಾರೆ.